ಮುಂಬಯಿ : ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರು ತಮ್ಮ ವ್ಯಾದಿಯ ಬಗ್ಗೆ ಯಾವುದೇ ಮುಜುಗರಪಟ್ಟು ಕೊಳ್ಳಬಾರದು ಮತ್ತು ಕೀಳರಿಮೆಯನ್ನು ಬೆಳೆಸಿಕೊಳ್ಳಬಾರದು; ಇತರ ಯಾವುದೇ ಬಗೆಯ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಹಾಗೆ ಸ್ತನ ಕ್ಯಾನ್ಸರ್‌ಗೂ ಸ್ವಸ್ಥ ಮನೋಭಾವದಿಂದ ಮಹಿಳೆಯರು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು 74ರ ಹರೆಯದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮಹಿಳೆಯರಲ್ಲಿ ಧೈರ್ಯ ತುಂಬಿದ್ದಾರೆ.
“ಎಬಿಸಿ ಆಫ್ ಬ್ರೆಸ್ಟ್ ಕ್ಯಾನ್ಸರ್’ ಎಂಬ ಮೊಬೈಲ್ ಆ್ಯಪ್ಲಿಕೇಶನ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು “ಸ್ತನ ಕ್ಯಾನ್ಸರ್‌ನಂತಹ ವ್ಯಾದಿಗಳು ಸಮಾಜದಲ್ಲಿ ಕೆಲವೊಮ್ಮೆ ಸೂಕ್ಷ್ಮ ಸಂವೇದನೆಯ ವಿಷಯವಾಗಬಹುದು; ಹಾಗಾಗಿ ಮಹಿಳೆಯರು ಆ ಬಗ್ಗೆ ಮುಜುಗರ ಪಟ್ಟುಕೊಂಡು ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ; ಇದರಿಂದಾಗಿ ಅವರಲ್ಲಿನ ಆತ್ಮವಿಶ್ವಾಸ ಕುಗ್ಗುತ್ತದೆ; ಹೀಗಾಗದಂತೆ ಮಹಿಳೆಯರು ಧೈರ್ಯದಿಂದ ಇರಬೇಕು’ ಎಂದು ಹೇಳಿದರು.
“ಎಬಿಸಿ ಆಫ್ ಬ್ರೆಸ್ಟ್ ಕ್ಯಾನ್ಸರ್’ ಮೊಬೈಲ್ ಆ್ಯಪ್ಲಿಕೇಶನ್ ಈ ರೋಗದ ಬಗೆಗಿನ ಮಾಹಿತಿಗಳನ್ನು ಆಮೂಲಾಗ್ರವಾಗಿ ಒದಗಿಸುತ್ತದೆ.
ಅಮಿತಾಭ್ ಈ ಹಿಂದೆಯೂ ಟಿಬಿ, ಪೋಲಿಯೋ ವಿರುದ್ಧದ ಅಭಿಯಾನದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು .
ಕ್ಯಾನ್ಸರ್ ನಂತಹ ರೋಗಗಳ ಬಗ್ಗೆ ಪೀಡಿತರು ಪೂರ್ಣ ಮಾಹಿತಿ ಹೊಂದಿರುವುದು ಅಗತ್ಯ. ತಾವು ವೈದ್ಯರನ್ನು ಕಾಣಬೇಕಾದ ಅಗತ್ಯವಿಲ್ಲ ತಮಗೆ ವೈದ್ಯರ ಸಮಾಲೋಚನೆ ಬೇಕಾಗಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಸಕಾಲದಲ್ಲಿ ವೈದ್ಯಕೀಯ ನೆರವು ಪಡೆದುಕೊಂಡರೆ ಎಷ್ಟೋ ವ್ಯಾದಿಗಳನ್ನು ಆರಂಭಿಕ ಹಂತದಲ್ಲೇ ಗುಣಪಡಿಸಲು ಸಾಧ್ಯವಿದೆ ಎಂದು ಅಮಿತಾಭ್ ಹೇಳಿದರು.