Advertisement
ಈ ತನಕ ಭಾರತದ ಯಾವ ನೇತಾರನಿಗೂ ಸಲ್ಲದ ಗೌರವ ಮೋದಿಗೆ ಸಂದಿದೆ. ಕಾಶ್ಮೀರ ವಿಷಯದಲ್ಲಿ ಪಾಕ್ ಕತ್ತಿ ಮಸೆಯುತ್ತಿರುವ ಈ ಹೊತ್ತಲ್ಲಿ ಯುಎಇ ನೀಡುತ್ತಿರುವ ಈ ಗೌರವ, ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಆಯುಧವೇ ಸರಿ.
Related Articles
Advertisement
ಬಾಂಧವ್ಯದ ಹೊಸ ಶಕೆ: ಸಾಮಾನ್ಯವಾಗಿ ರಾಷ್ಟ್ರಗಳ ಮಧ್ಯೆ ಬೆಸೆಯುವ ಸಂಬಂಧಗಳಲ್ಲಿ ಕೇವಲ ವ್ಯಾವಹಾರಿಕ, ರಾಜತಾಂತ್ರಿಕ ಲಾಭ – ನಷ್ಟಗಳ ಲೆಕ್ಕಾಚಾರ ಮಾತ್ರವಿರುತ್ತದೆ. ಆದರೆ ಯುಎಇ- ಭಾರತದ ಕಳೆದ ಐದು ವರ್ಷಗಳ ಗೆಳೆತನ ಹೊಸ ಮಜಲನ್ನು ಮುಟ್ಟಿದೆ. ಯುಎಇಯ ಸುಮಾರು 28% ಜನಸಂಖ್ಯೆ ಭಾರತೀಯರು. 33 ಲಕ್ಷ ಜನ ಭಾರತೀಯರು ಇಲ್ಲಿ ವಾಸವಿದ್ದಾರೆ. ಇಲ್ಲಿ ಸ್ಥಳೀಯರಿಗಿಂತ ದುಪ್ಪಟ್ಟು ಭಾರತೀಯರಿದ್ದಾರೆ. ಯುಎಇಗೆ ಬಂದರೆ ಭಾರತದ ಯಾವುದೋ ರಾಜ್ಯಕ್ಕೆ ಬಂದಂತೆ ಭಾಸವಾದರೆ ಅಚ್ಚರಿಯೇನಿಲ್ಲ. ಯುಎಇಯಲ್ಲಿ ರಿಯಲ್ ಎಸ್ಟೇಟ್, ಆಹಾರ ಉದ್ದಿಮೆಗಳಲ್ಲಿ ಭಾರತೀಯರದ್ದೇ ಕಾರುಬಾರು. ಯುಎಇಗೆ 2018ರಲ್ಲಿ ಭೇಟಿ ನೀಡಿದ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಸಿಂಹ ಪಾಲು. ದುಬೈಗೆ 2018ರಲ್ಲಿ ಬಂದ ಜಗತ್ತಿನ 1.6 ಕೋಟಿ ಜನರಲ್ಲಿ 20 ಲಕ್ಷದ 70 ಸಾವಿರ ಪ್ರವಾಸಿಗರು ಭಾರತೀಯರೇ! ಯುಎಇ ಎಂಬ ದೇಶವನ್ನು ಕಟ್ಟುವಲ್ಲಿ, ಇಲ್ಲಿನ ಅರ್ಥವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಡುವಲ್ಲಿ ಭಾರತೀಯರ ಕೊಡುಗೆ ಅಪಾರ. ಭಾರತಕ್ಕೂ ಅಷ್ಟೇ, 131 ರಾಷ್ಟ್ರಗಳ ಅನಿವಾಸಿ ಭಾರತೀಯರ ಪೈಕಿ ಯುಎಇಯ ಭಾರತೀಯರು 95 ಸಾವಿರ ಕೋಟಿ ರೂಪಾಯಿಯನ್ನು ತಮ್ಮ ತಾಯ್ನಾಡಿಗೆ ರವಾನಿಸುತ್ತಾರೆ. ಭಾರತಕ್ಕೆ ಅನಿವಾಸಿ ಭಾರತೀಯರ ಮೂಲದಿಂದ ಬರುವ ಒಟ್ಟು ಮೊತ್ತದ 20% ಬರುವುದು ಯುಎಇ ಎಂಬ ಒಂದೇ ದೇಶದಿಂದ! ಯುಎಇ/ಭಾರತ ಇಬ್ಬರಲ್ಲಿ ಒಬ್ಬರ ಅರ್ಥವ್ಯವಸ್ಥೆಯಲ್ಲಿ ತಲ್ಲಣವಾದರೂ ಎರಡೂ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕೀತು.
ಅದನ್ನು ಗಮನಿಸಿಯೇ ಮೋದಿ, ಯುಎಇ ಬಾಂಧವ್ಯಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. 2017ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಯುಎಇ ದೊರೆ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಉನ್ನತ ಗೌರವ ಸಲ್ಲಿಸಿದ್ದರು. ಅಲ್ಲಿಂದ ಯುಎಇ ಸಂಬಂಧ ಬಲವಾಗುತ್ತಾ ಬಂದಿದೆ. ಇದು ಭಾರತಕ್ಕೆ ಬೇಕಾದ ಕ್ರಿಮಿನಲ್ಗಳನ್ನು ಹಣೆಯುವಲ್ಲಿ, ಭಾರತದ ಸಾಂಸ್ಕೃತಿಕ ಬೇರುಗಳನ್ನು ವಿಸ್ತರಿಸುವುದಕ್ಕೂ ಸಹಕರಿಸಿದೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಿ ಕ್ರಿಸ್ಟೆ ೖನ್ ಮಿಶಲ್, ರಾಜೀವ್ ಸಕ್ಸೆನಾ, ದೀಪಕ್ ತಲ್ವಾರ್ ಅವರುಗಳನ್ನು ಭಾರತಕ್ಕೆ ಕೆರೆತರುವಲ್ಲಿ ಯುಎಇ ಸಹಕರಿಸಿದ ರೀತಿಯನ್ನು ನೋಡಿದಾಗ; ಅಬುಧಾಬಿ ಯಲ್ಲಿ ಹಿಂದೂಗಳು ಮಾಡ ಹೊರಟಿರುವ ಭವ್ಯ ದೇವಾಲಯಕ್ಕೆ 55 ಸಾವಿರ ಚದರ ಮೀಟರ್ ಜಾಗವನ್ನು ನೀಡಿರುವ ಇಲ್ಲಿನ ರಾಜನ ನಡೆಯನ್ನು ಗಮನಿಸಿದಾಗ ಎರಡೂ ದೇಶಗಳ ಮಧ್ಯೆ ವ್ಯಾಪಾರದ ಹೊರತಾಗಿ ಹೊಸ ಬಾಂಧವ್ಯದ ಶಕೆ ಆರಂಭವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಪಾಕ್ ಬದಲು ಭಾರತಕ್ಕೆ ಬೆಂಬಲ: ದಶಕಗಳ ಕಾಲ ಯುಎಇ ಪಾಕಿಸ್ತಾನದ ಬಹುಮುಖ್ಯ ಸಖ್ಯ ರಾಷ್ಟ್ರವಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಭಾರತ- ಪಾಕಿಸ್ತಾನದ ಮಧ್ಯೆ ತಿಕ್ಕಾಟವಾದಾಗಲೆಲ್ಲ ಭಾರತದ ಪರ ನಿಂತಿದೆ ಯುಎಇ. ಈ ವರ್ಷದ ಆರಂಭದಲ್ಲಿ ಐಒಸಿ (ಇಸ್ಲಾಮಿಕ್ ರಾಷ್ಟ್ರಗಳ ಸಹಕಾರಿ ಒಕ್ಕೂಟ) ರಾಷ್ಟ್ರಗಳ ಸಮಾವೇಶ ಅಬುಧಾಬಿಯಲ್ಲಿ ನಡೆದಾಗ ಭಾರತವನ್ನು ‘ಗೌರವ ಅತಿಥಿ’ಯಾಗಿ ಆಹ್ವಾನಿಸಲಾಗಿತ್ತು. ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತವನ್ನು ಪ್ರತಿನಿಧಿಸುವವರಿದ್ದರು. ಆದರೆ ಆ ಸಮಯದಲ್ಲಿ ಬಾಲಕೋಟ್‌ನಲ್ಲಿ ಭಾರತ ಪುಲ್ವಾಮಾ ಪ್ರತಿಕಾರದ ದಾಳಿ ಮಾಡಿದ ಸುದ್ದಿ ಕೇಳಿದ ಪಾಕಿಸ್ತಾನ ಕೆರಳಿ ಕೆಂಡವಾಗಿತ್ತು. ‘ಭಾರತ ಐಒಸಿ ಸಮಾವೇಶಕ್ಕೆ ಗೌರವ ಅತಿಥಿಯಾಗಿ ಬಂದರೆ ತಾನು ಸಮಾವೇಶದಲ್ಲೇ ಭಾಗವಹಿಸೆನು’ ಎಂದೂ ಧಮಕಿ ಹಾಕಿತ್ತು. ಆದರೆ ಯುಎಇ ಕ್ಯಾರೇ ಅನ್ನಲಿಲ್ಲ. ಸರಿಯಾಗಿ 50ವರ್ಷಗಳ ಹಿಂದೆ 1969ರಲ್ಲಿ ಐಒಸಿ ಸಮಾವೇಶ ನಡೆದಿದ್ದಾಗ, ಭಾರತವನ್ನು ಉದ್ಘಾಟನಾ ಸಮಾರಂಭಕ್ಕೆ ಕರೆದುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ್ದಾಗ, ಭಾರತವನ್ನು ಅವಮಾನಿಸಿ ಐಒಸಿ ಸಮಾವೇಶದಿಂದ ಕೈಬಿಡಲಾಗಿತ್ತು. ಐಒಸಿಯಲ್ಲಿ ಇತಿಹಾಸ ಮರುಕಳಿಸಲಿದೆ ಎಂದು ಪಾಕಿಸ್ತಾನ ನಂಬಿತ್ತು. ಆದರೆ ಆದುದೇ ಬೇರೆ. ಮುಸ್ಲಿಂ ರಾಷ್ಟ್ರಗಳಿಗಾಗಿಯೇ ಇರುವ ಐಒಸಿಯಲ್ಲಿ ಮುಸ್ಲಿಂ ದೇಶ ಪಾಕಿಸ್ತಾನವನ್ನು ಬಿಟ್ಟು ಭಾರತದ ಪರ ನಿಂತಿತು ಯುಎಇ. ಈ ಅವಮಾನದಿಂದ ಪಾಕ್ ಸಮಾವೇಶವನ್ನು ಬಹಿಷ್ಕರಿಸಿತು. ಭಾರತ ಗೌರವ ಅತಿಥಿಯಾಗಿ ಮೆರೆಯಿತು.
ಮೊನ್ನೆ ಭಾರತ ಕಾಶ್ಮೀರವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಲಂ 370 ರದ್ದು ಪಡಿಸಿದಾಗಲೂ, ಪಾಕಿಸ್ತಾನ ಯುಎಇಯ ಬೆಂಬಲ ಬಯಸಿತ್ತು. ಆದರೆ ಕೆಲವೇ ಹೊತ್ತಲ್ಲಿ ‘ಇದು ಭಾರತದ ಆಂತರಿಕ ವಿಷಯ’ ಎಂದು ಸ್ಪಷ್ಟ ಪದಗಳಲ್ಲಿ ಹೇಳಿದ ಯುಎಇ, ಭಾರತದ ನಿಲುವಿಗೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿತು. ಕಾಶ್ಮೀರ ಅಂತಾರಾಷ್ಟ್ರೀಯ ಸಮಸ್ಯೆ, ಇದು ಮುಸ್ಲಿಮರ ಮೇಲಿನ ಆಕ್ರಮಣ ಎಂಬ ದನಿಯಲ್ಲಿ ಮಾತನಾಡತೊಡಗಿದ ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ ಸ್ವಲ್ಪವೂ ಬೆಂಬಲಿಸ ದಿದ್ದುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಬಹುದೊಡ್ಡ ಗೆಲುವು. ಮುಂದಿನ ದಿನಗಳಲ್ಲಿ 75 ಶತಕೋಟಿ ಡಾಲರನ್ನು ಯುಎಇ ಭಾರತದಲ್ಲಿ ಹೂಡಿಕೆ ಮಾಡಲಿದೆ. ಕಾಶ್ಮೀರದಲ್ಲಿ ಸದ್ಯದಲ್ಲೇ ನಡೆಯಲಿರುವ ಬಂಡವಾಳ ಸಮಾವೇಶದಲ್ಲಿ ಯುಎಇ ಮತ್ತು ಸೌದಿ ಹಣ ಹೂಡಿಕೆ ಮಾಡುವ ಸಾಧ್ಯತೆಯೂ ಇದೆ. ಹಾಗೇನಾದರೂ ಆದರೆ ಮುಂದೆ ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಕೈ ಆಡಿಸುವ ಮೊದಲು, ಪಾಕ್ ನೂರು ಬಾರಿ ಯೋಚಿಸಬೇಕಾದೀತು!
ಮೋದಿಗೆ ಯುಎಇ ನೀಡಿರುವ ಈ ‘ಝಾಯೆದ್ ಗೌರವ’ ಭಾರತಕ್ಕೆ ದೊರೆತ ರಾಜತಾಂತ್ರಿಕ ಮನ್ನಣೆ ಮಾತ್ರವಲ್ಲ, ಪಾಕಿಸ್ತಾನಕ್ಕೆ ಅರಬ್ ರಾಷ್ಟ್ರ ನೀಡುತ್ತಿರುವ ಸೂಕ್ಷ್ಮ ಸಂದೇಶವೂ ಹೌದು!
ಡಾ| ಶ್ರೀಶ ಪುಣಚ, ದುಬಾೖ