Advertisement

ರಾಜ್ಯದಲ್ಲಿ 667 ಮಂದಿಗೆ ಒಬ್ಬ ಪೊಲೀಸ್‌ ; ಪೊಲೀಸ್‌ ಇಲಾಖೆಯಲ್ಲಿ ಸಿಬಂದಿ ಕೊರತೆ

12:31 AM Nov 16, 2022 | Shreeram Nayak |

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 15,099 ಹುದ್ದೆಗಳು ಖಾಲಿ ಇದ್ದು, 667 ನಾಗರಿಕರಿಗೆ ಒಬ್ಬರಂತೆ ಪೊಲೀಸ್‌ ಇದ್ದಾರೆ.ರಾಜ್ಯದ 6.61 ಕೋಟಿ ಜನ ಸಂಖ್ಯೆಗೆ ಕೇವಲ 1,12,429 ಪೊಲೀಸ್‌ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 97,330 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಸಂಖ್ಯೆಗೆ ಹೋಲಿಸಿದರೆ ಪೊಲೀಸರ ಸಂಖ್ಯೆ ತೀರಾ ಕಡಿಮೆಯಿದೆ. ಪರಿಣಾಮವಾಗಿ ಅಪರಾಧ ಪ್ರಕರಣಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ. 5ರಿಂದ 10ರಷ್ಟು ಏರಿಕೆಯಾಗುತ್ತಿದೆ.

Advertisement

ಮಂಜೂರಾದ ಹುದ್ದೆಗಳಿಗೂ ಕರ್ತವ್ಯದಲ್ಲಿರುವ ಪೊಲೀಸರ ಸಂಖ್ಯೆಗೂ ಅಜಗಜಾಂತರವಿದೆ. ಸರಕಾರದ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ರಾಷ್ಟ್ರೀಯ ಮಾನದಂಡದ ಪ್ರಕಾರ ದೇಶದ 1 ಲಕ್ಷ ಜನರಿಗೆ 198 ಪೊಲೀಸರು ಇರಬೇಕು; ಆದರೆ ರಾಜ್ಯದಲ್ಲಿ ಇಷ್ಟು ಜನಸಂಖ್ಯೆಗೆ 168 ಪೊಲೀಸರಿದ್ದಾರೆ. 86,702 ಪುರುಷ ಪೊಲೀಸ್‌ ಸಿಬಂದಿಯಿದ್ದರೆ, 10,628 ಮಹಿಳಾ ಸಿಬಂದಿ ಇದ್ದಾರೆ.

ಐಪಿಎಸ್‌ ಹುದ್ದೆಗಳೂ ಖಾಲಿ
ಐಜಿಪಿ, ಎಡಿಜಿಪಿ, ಎಸ್‌ಪಿ ಸೇರಿ ಐಪಿಎಸ್‌ ಮಟ್ಟದ 38 ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ಖಾಲಿಯಿರುವ 10,449 ಕಾನ್‌ಸ್ಟೆಬಲ್‌, 1,100 ಪಿಎಸ್‌ಐ ಹುದ್ದೆ ಭರ್ತಿ ಮಾಡುವತ್ತ ಸರಕಾರ ಗಮನಹರಿಸಿಲ್ಲ. ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ 1,254 ಇನ್‌ಸ್ಪೆಕ್ಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ, 23 ಹುದ್ದೆ ಖಾಲಿ ಇದೆ. ಡಿಟೆಕ್ಟಿವ್‌ ಹಾಗೂ ಎಸ್‌ಡಿಆರ್‌ಆರ್‌ನಲ್ಲಿ ಮಂಜೂರಾಗಿರುವ 48 ಇನ್‌ಸ್ಪೆಕ್ಟರ್‌ ಹುದ್ದೆಗಳಿಗೆ ನೇಮಕಾತಿಯೇ ನಡೆಸಿಲ್ಲ. ಎಫ್ಪಿಬಿಯಲ್ಲಿ 30 ಇನ್‌ಸ್ಪೆಕ್ಟರ್‌ ನೇಮಕ ಮಾಡಬೇಕಿದೆ.

ತಳಹಂತದ ಸಿಬಂದಿ ಕೊರತೆ
ಅಪರಾಧ ಪ್ರಕರಣ ನಡೆದ ಕೂಡಲೇ ಸ್ಥಳಕ್ಕೆ ತೆರಳಿ ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕುವುದು, ತನಿಖೆ ವೇಳೆ ಸಾಕ್ಷ್ಯ ಕಲೆ ಹಾಕು ವುದು, ಆರೋಪಿಗಳನ್ನು ಬಂಧಿಸುವುದು ಮತ್ತಿತರ ಮಹತ್ತರ ವಾದ ಜವಾಬ್ದಾರಿಗಳು ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗ‌ಳ ಮೇಲಿರುತ್ತದೆ. ಇವರು ಕಲೆಹಾಕುವ ಮಾಹಿತಿ ಆಧರಿಸಿ ಸಬ್‌ಇನ್‌ಸ್ಪೆಕ್ಟರ್‌ ಗಳು ಸಂಪೂರ್ಣ ತನಿಖೆ ನಡೆಸಿ ಇನ್‌ಸ್ಪೆಕ್ಟರ್‌ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಪ್ರಕರಣದ ವರದಿ ಸಲ್ಲಿಸುತ್ತಾರೆ. ಕೆಳಹಂತದ ಸಿಬಂದಿ ಕೊರತೆಯಿಂದಾಗಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಪೊಲೀಸ್‌ ಸಿಬಂದಿ ಕೊರತೆ ಹೋಗಲಾಡಿಸುವ ನಿಟ್ಟಿನಲ್ಲಿ ಖಾಲಿ ಇರುವ 3.5 ಸಾವಿರ ಎಪಿಸಿ ಹಾಗೂ 1,500 ಸಿಪಿಸಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಬೇಗ ಬಾಕಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
– ಡಾ| ಎಂ.ಎ. ಸಲೀಂ, ಎಡಿಜಿಪಿ (ಆಡಳಿತ)

Advertisement

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next