ಒನ್ ಪ್ಲಸ್ ಫೋನುಗಳೆಂದರೆ ದರ ತುಂಬಾ ಜಾಸ್ತಿ. ಅಷ್ಟು ದರ ಮತ್ತು ಅಷ್ಟೊಂದು ಪ್ರೀಮಿಯಂ ಫೀಚರ್‌ಗಳು ನಮಗೆ ಅಗತ್ಯವಿಲ್ಲ. ಇಪ್ಪತ್ತು ಸಾವಿರದ ಆಸು ಪಾಸಿನಲ್ಲಿ ಅವರು ಫೋನ್ ಬಿಟ್ಟರೆ ಒಳ್ಳೆಯದು ಎಂಬುದು ಅನೇಕರ ಅನಿಸಿಕೆಯಾಗಿತ್ತು. ಗ್ರಾಹಕರ ಇಂಥ ಆಶಯಗಳನ್ನು ಗಮನಿಸಿದ ಒನ್‌ಪ್ಲಸ್ ನಿನ್ನೆ ರಾತ್ರಿ ಭಾರತದಲ್ಲಿ ತನ್ನ ಹೊಸ ಮಿಡ್‌ಲ್ ರೇಂಜ್ ಫೋನನ್ನು ಬಿಡುಗಡೆ ಮಾಡಿದೆ. ಅದುವೇ ಒನ್ ಪ್ಲಸ್ ನೋರ್ಡ್ ಸಿಇ 5ಜಿ. ಈ ಫೋನ್ ಜೂನ್ 16ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ದರ 22,999 ರೂ. ನಿಂದ ಆರಂಭವಾಗುತ್ತದೆ.
ಇದಕ್ಕೂ ಮೊದಲು ಒನ್‌ಪ್ಲಸ್ ಕೆಲವು ತಿಂಗಳ ಹಿಂದೆ ಒನ್‌ಪ್ಲಸ್ ನೋರ್ಡ್ ಬಿಡುಗಡೆ ಮಾಡಿತ್ತು. ಅದರ ಕುಟುಂಬಕ್ಕೆ ಇದು ಹೊಸ ಸೇರ್ಪಡೆ. ನೋರ್ಡ್ ಸಿಇ ತನ್ನ ವರ್ಗದಲ್ಲಿ ಉತ್ತಮ ಹಾರ್ಡ್‌ವೇರ್, 64 ಮೆಗಾಪಿಕ್ಸಲ್ ತ್ರಿವಳಿ ಕ್ಯಾಮರಾ, ಅಮೋಲೆಡ್ ಪರದೆ, 90 ಹರ್ಟ್‌ಜ್ ಸರಾಗ ಡಿಸ್‌ಪ್ಲೇ, ಈ ವರ್ಗದಲ್ಲಿ ಅತ್ಯುನ್ನತ ಪ್ರೊಸೆಸರ್ ಆದ ಸ್ನಾಪ್‌ಡ್ರಾಗನ್ 750 ಐ 5ಜಿ ಪ್ರೊಸೆಸರ್ ಹೊಂದಿದೆ. ಅಲ್ಲದೇ ಉನ್ನತೀಕರಿಸಿದ ಅತಿ ವೇಗದ 30ಟಿ ಪ್ಲಸ್ ಚಾರ್ಜರ್ ಹೊಂದಿದೆ. ಆಕ್ಸಿಜನ್ 11 ಕಾರ್ಯಾಚರಣೆ ಹೊಂದಿದೆ.
ಈ ದರಪಟ್ಟಿಯಲ್ಲಿ ಗ್ರಾಹಕರಿಗೆ ಗುಣಮಟ್ಟದಲ್ಲಿ ರಾಜಿಯಾಗದೇ, ಉತ್ತಮ ಅನುಭವ ನೀಡುವ ಮೊಬೈಲ್ ನೀಡಬೇಕೆಂಬುದು ನಮ್ಮ ಆಶಯ. ಒನ್ ಪ್ಲಸ್ ನೋರ್ಡ್ ವರ್ಗದ ಸಿಇ 5 ಜಿ ಎಂದಿನಂತೆ ಒನ್‌ಪ್ಲಸ್‌ನ ಗುಣಮಟ್ಟದೊಡನೆ ದಿನನಿತ್ಯ ಉತ್ತಮ ಅನುಭವ ನೀಡುತ್ತದೆ. ಮತ್ತು ನೆವರ್ ಸೆಟ್‌ಲ್ ಎಂಬ ನಮ್ಮ ಧ್ಯೇಯಕ್ಕೆ ಬದ್ಧವಾಗಿದೆ ಎಂದು ಒನ್‌ಪ್ಲಸ್ ಸಂಸ್ಥಾಪಕ ಮತ್ತು ಸಿಇಒ ಪೀಟ್ ಲಾವ್ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ:ಗೇಮಿಂಗ್ ಗೆ ಮೊಬೈಲ್ ಗಿಂತ ಪಿಸಿಯೇ ಬೆಸ್ಟ್: ಸಮೀಕ್ಷೆ
ಒನ್‌ಪ್ಲಸ್ ನೋರ್ಡ್ ಸಿಇ 4500 ಎಂಎಎಚ್ ಬ್ಯಾಟರಿ, ವಾರ್ಪ್ ಚಾಜ್ 30 ಟಿ ಪ್ಲಸ್ ಎಂಬ ತಂತ್ರಜ್ಞಾನ ಹೊಂದಿದ್ದು, ಶೂನ್ಯ ದಿಂದ ಶೇ. 70ರವರೆಗೆ ಅರ್ಧಗಂಟೆಯಲ್ಲಿ ಚಾರ್ಜ್ ಆಗುತ್ತದೆ.
ಇದು ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 750ಜಿ 5ಜಿ ಪ್ರೊಸೆಸರ್ ಹೊಂದಿದ್ದು, ಹಿಂದಿನ ಪ್ರೊಸೆಸರ್‌ಗಿಂತ ಶೇ. 20ರಷ್ಟು ಹೆಚ್ಚು ವೇಗ ಹೊಂದಿದೆ. ಒನ್‌ಪ್ಲಸ್‌ನ ಪ್ರಸಿದ್ಧ ಆಕ್ಸಿಜನ್ ಓಎಸ್ 11 ಆವೃತ್ತಿ ಹೊಂದಿದ್ದು, ಆಲ್‌ವೇಸ್ ಆನ್ ಡಿಸ್‌ಪ್ಲೇ ಫೀಚರ್ ಹೊಂದಿದೆ.
ತ್ರಿವಳಿ ಕ್ಯಾಮರಾ: ಇದು 64 ಮೆ.ಪಿ. ಮುಖ್ಯ ಲೆನ್‌ಸ್, 8 ಮೆ.ಪಿ. ಅಲ್ಟ್ರಾ ವೈಡ್ ಲೆನ್‌ಸ್ ಮತ್ತು 2 ಮೆ.ಪಿ. ಮೋನೋಕೊರೀಮ್ ಸೆನ್ಸರ್ ಹೊಂದಿದೆ. ಸೆಲ್ಫೀಗೆ 16 ಮೆ.ಪಿ. ಕ್ಯಾಮರಾ ಇದೆ.
6.43 ಇಂಚಿನ ಅಮೋಲೆಡ್ ಪರದೆ ಹೊಂದಿದ್ದು, ಫುಲ್‌ಎಚ್‌ಡಿಪ್ಲಸ್ ಹಾಗೂ ಎಚ್‌ಡಿಆರ್ 10ಪ್ಲಸ್ ಸವಲತ್ತು ಇದೆ. 7.9 ಮಿ.ಮೀ. ಮಂದ ಹಾಗೂ 170 ಗ್ರಾಮ್ ತೂಕವಿದೆ. ಒನ್‌ಪ್ಲಸ್ 6ಟಿ ನಂತರ ಇದು ಅತ್ಯಂತ ತೆಳುವಾದ ಫೋನೆಂದು ಕಂಪೆನಿ ಹೇಳಿಕೊಂಡಿದೆ.
ವಿಶೇಷವೆಂದರೆ ಇದಕ್ಕೆ 3.5 ಎಂ.ಎಂ. ಆಡಿಯೋ ಜಾಕ್ ಹಾಕುವ ಸೌಲಭ್ಯ ನೀಡಲಾಗಿದೆ! ಈಗ ಬರುತ್ತಿರುವ ಒನ್ ಪ್ಲಸ್ ಫೋನ್‌ಗಳಲ್ಲಿ 3.5 ಎಂ.ಎಂ. ಆಡಿಯೋ ಜಾಕ್ ಸವಲತ್ತು ಇರಲಿಲ್ಲ. ಒನ್‌ಪ್ಲಸ್‌ನ ಅತ್ಯುನ್ನತ ದರ್ಜೆಯ ಫೋನ್‌ಗಳಿಗೆ ನೀಡುವಂತೆ, ಇದಕ್ಕೂ ಎರಡು ವರ್ಷಗಳ ಕಾಲ ಸಾಪ್‌ಟ್ ವೇರ್ ಅಪ್‌ಡೇಟ್ ಹಾಗೂ ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌ಡೇಟ್ ನೀಡುವುದಾಗಿ ಕಂಪೆನಿ ತಿಳಿಸಿದೆ.
ಇದರ ದರ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹಕ್ಕೆ 22,999 ರೂ. ಕಪ್ಪು ಬಣ್ಣದಲ್ಲಿ ಲಭ್ಯ.
8 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ: 24,999 ರೂ. ಇದು ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯ.
12 ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹ. 27,999 ರೂ. ಕಪ್ಪು, ನೀಲಿ ಮತ್ತು ಬೆಳ್ಳಿ ಬಣ್ಣದಲ್ಲಿ ಲಭ್ಯ.
ಜೂನ್ 16ರಿಂದ ಅಮೆಜಾನ್, ಒನ್‌ಪ್ಲಸ್.ಇನ್ ನಲ್ಲಿ ಲಭ್ಯ. ಇಂದಿನಿಂದ ಒನ್‌ಪ್ಲಸ್.ಇನ್ ನಲ್ಲಿ ಮುಂಚೆಯೇ ಬುಕಿಂಗ್ ಕೂಡ ಮಾಡಬಹುದಾಗಿದೆ. ಅಮೆಜಾನ್‌ನಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಗೆ 1000 ರೂ. ರಿಯಾಯಿತಿ ದೊರಕಲಿದೆ. ಅಲ್ಲದೇ 6 ತಿಂಗಳ ಕಂತಿನ ಬಡ್ಡಿಯಿಲ್ಲದ ಇಎಂಐ ಸೌಲಭ್ಯ ಕೂಡ ಇದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಕೆ.ಎಸ್. ಬನಶಂಕರ ಆರಾಧ್ಯ