ಮೈಸೂರು: ಬ್ರಿಟನ್‌ನಿಂದ ಬಂದವರ ಪೈಕಿ ಒಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ, ಜೀನ್ಸ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಮಾದರಿಯನ್ನು ನಿಮಾನ್ಸ್‌ಗೆ ಕಳುಹಿಸಲಾಗಿದೆ, ಸೋಮವಾರದ ವೇಳೆಗೆ ಫಲಿತಾಂಶ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಬ್ರಿಟನ್‌ನಿಂದ ಬಂದು ಕೋವಿಡ್ ಪತ್ತೆಯಾಗಿರುವ ಆ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ ಮೂವರು, ದ್ವಿತೀಯ ಸಂಪರ್ಕದಲ್ಲಿ ಮೂವರು ಇದ್ದರು. ಆ ಪೈಕಿ ಒಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು: ಉಡುಪಿ ಜಿಲ್ಲಾಧಿಕಾರಿ ಗರಂ
ಇವರು ಡಿ. 14ರಂದು ಇವರು ಮೈಸೂರಿಗೆ ಬಂದಿದ್ದಾರೆ. ರೂಪಾಂತರಗೊಂಡ ಕೋವಿಡ್ ಎಂಬುದು ಇನ್ನೂ ಗೊತ್ತಾಗಿಲ್ಲ. ಸೋಮವಾರದ ವೇಳೆಗೆ ತಿಳಿಯಲಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬ್ರಿಟನ್‌ನಿಂದ ಬಂದ ಒಟ್ಟು 137 ಜನರ ಪೈಕಿ 23 ಜನರ ಹೊರತಾಗಿ ಎಲ್ಲರಿಗೂ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಈ 23 ಜನ ಮೊದಲೇ ಪರೀಕ್ಷೆ ಮಾಡಿಸಿ ಕೊಂಡಿದ್ದೆವು ಎಂದು ತಿಳಿಸಿದ್ದಾರೆ. ಆದಾಗ್ಯೂ ಮುನ್ನೆಚ್ಚರಿಕೆಯಾಗಿ ಅವರಿಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.