Advertisement

ಎಲ್ಲ ಕಾನೂನುಗಳಿಗೆ ಒಂದು ವೆಬ್‌ಸೈಟ್‌!

06:00 AM Sep 09, 2018 | |

ನವದೆಹಲಿ: ದೇಶದಲ್ಲಿ ಸಾವಿರಾರು ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳಿವೆ. ರಾಜಕೀಯ, ಆರ್ಥಿಕತೆ, ಆಡಳಿತ ಸೇರಿದಂತೆ ಹಲವು ವಿಷಯಗಳ ಮೇಲೆ ನೂರಾರು ಕಾನೂನುಗಳಿವೆ. ಕೇಂದ್ರ ಸರ್ಕಾರವೇ 1000 ಕಾನೂನುಗಳನ್ನು ಸ್ವಾತಂತ್ರ್ಯಾ ನಂತರದಲ್ಲಿ ರೂಪಿಸಿದೆ. ಆದರೆ ಇಷ್ಟೂ ಕಾನೂನುಗಳು ಜನಸಾಮಾನ್ಯರಿಗೆ ಒಂದೇ ಕಡೆ ಸಿಗುವಂತಿದೆಯೇ?

Advertisement

ಸದ್ಯದ ಮಟ್ಟಿಗೆ ಕಾನೂನುಗಳು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ವ್ಯವಸ್ಥೆಯಿಲ್ಲ. ಆದರೆ ಶೀಘ್ರದಲ್ಲೇ ದೇಶದಲ್ಲಿರುವ ಅಷ್ಟೂ ಕಾನೂನುಗಳು ಒಂದೇ ಸೂರಿನಲ್ಲಿ ಸಿಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬೃಹತ್‌ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಒಂದೇ ವೆಬ್‌ಸೈಟ್‌ನಲ್ಲಿ ಎಲ್ಲ ಕಾನೂನುಗಳು, ತಿದ್ದುಪಡಿಗಳು ಹಾಗೂ ಕಾನೂನುಗಳ ಅಡಿಯಲ್ಲಿ ರೂಪಿಸಲಾಗಿರುವ ಕಾಯ್ದೆಗಳನ್ನೂ ಒದಗಿಸಲಾಗುತ್ತದೆ. ಅಷ್ಟೇ ಅಲ್ಲ, ಈ ವೆಬ್‌ಸೈಟ್‌ ಅನ್ನು ಮೊಬೈಲ್‌ನಲ್ಲೂ ನೋಡಬಹುದು. ಈಗಾಗಲೇ ಇಂಡಿಯಾ ಕೋಡ್‌ ಎಂಬ ವೆಬ್‌ಸೈಟ್‌ ಚಾಲ್ತಿಯಲ್ಲಿದ್ದು, ಈ ವೆಬ್‌ಸೈಟ್‌ಗೆ ಕಾನೂನುಗಳನ್ನು ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ.

ಈ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ದೆಹಲಿ ಹೈಕೋರ್ಟ್‌ 2016ರಲ್ಲಿ ನೀಡಿದ ಒಂದು ತೀರ್ಪಿನಿಂದಾಗಿ. ವಂಶ್‌ ಶರದ್‌ ಗುಪ್ತಾ ಎಂಬುವವರು ಈ ಸಂಬಂಧ ಅರ್ಜಿ ಸಲ್ಲಿಸಿ, ಕಾನೂನುಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವ ಅವಕಾಶ ಕೋರಿದ್ದರು. ವೆಬ್‌ಸೈಟ್‌ ಪ್ರಗತಿಯನ್ನು ಹೈಕೋರ್ಟ್‌ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಎಲ್ಲ ಸಚಿವಾಲಯಗಳೂ ಈ ವೆಬ್‌ಸೈಟ್‌ ನಿರ್ವಹಣೆಗೆ ನೋಡಲ್‌ ಅಧಿಕಾರಿಯನ್ನು ನೇಮಿಸುವಂತೆ ಕೋರ್ಟ್‌ ಆದೇಶಿಸಿದ್ದು, ಅಧಿಕಾರಿಗಳು ಈಗಾಗಲೇ ತಮ್ಮ ಸಚಿವಾಲಯದ ಹಳೆಯ ಹಾಗೂ ಚಾಲ್ತಿಯಲ್ಲಿರುವ ಕಾನೂನುಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ಬಹುತೇಕ ಕಾನೂನುಗಳು ಸದ್ಯ ಜನರಿಗೆ ಲಭ್ಯವಿಲ್ಲ. ಈ ಪೈಕಿ ಆದಾಯ ತೆರಿಗೆ ಕಾನೂನು ಕೂಡ ಒಂದು. ಇದನ್ನು ಖಾಸಗಿ ವೆಬ್‌ಸೈಟ್‌ ಹಾಗೂ ಖಾಸಗಿ ಪ್ರಕಾಶಕರು ನಿರ್ವಹಿಸುತ್ತಿದ್ದಾರೆ. ಆದರೆ ಉಚಿತವಾಗಿ ಆನ್‌ಲೈನ್‌ನಲ್ಲಿ ಸರ್ಕಾರದಿಂದ ಲಭ್ಯವಿಲ್ಲ. ಇಂಡಿಯಾ ಕೋಡ್‌ ವೆಬ್‌ಸೈಟ್‌ ಸಂಪೂರ್ಣವಾಗಿ ಕಾರ್ಯನಿರ್ವಹಣೆಗೆ ಬಂದ ನಂತರದಲ್ಲಿ ಇಂತಹ ಸಾವಿರಾರು ಕಾನೂನುಗಳನ್ನು ಸಾರ್ವಜನಿಕರು ಓದಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next