Advertisement

ರಾಜ್ಯ ಹೆದ್ದಾರಿಯಲ್ಲೊಂದು ಅಗಲ ಕಿರಿದಾದ ಸೇತುವೆ

10:40 PM Oct 21, 2019 | mahesh |

ಕಲ್ಲುಗುಡ್ಡೆ: ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ಅಪಘಾತವಾಗುವ ಸಂಭವವಿರುವುದರಿಂದ ಸೇತುವೆಯನ್ನು ವಿಸ್ತರಣೆ ಅಥವಾ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ.

Advertisement

ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಗಳನ್ನು ಸಂಪರ್ಕಿಸುವ ಸುಬ್ರಹ್ಮಣ್ಯ – ಮರ್ದಾಳ – ಪೆರಿಯಶಾಂತಿ – ಧರ್ಮಸ್ಥಳ ರಾಜ್ಯ ಹೆದ್ದಾರಿ ಡಾಮರು ಕಾಮಗಾರಿ ನಡೆದಿದ್ದು, ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದೆ. ತಡೆಗೋಡೆಗಳೂ ಶಿಥಿಲಾವಸ್ಥೆಯಿಂದ ಕೂಡಿವೆ. ಪ್ರಸಕ್ತ ಒಂದು ವಾಹನ ಮಾತ್ರ ಸಂಚರಿಸಲು ಸಾಧ್ಯವಾಗಿದ್ದು, ಇದು ವಾಹನ ಸವಾರರಿಗೂ, ಪಾದಚಾರಿಗಳಿಗೂ ಅಪಾಯಕಾರಿ.

ಅಧಿಕ ಸಂಚಾರ
ಇಚ್ಲಂಪಾಡಿಯಲ್ಲಿ ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣಗೊಂಡು ಹೆದ್ದಾರಿ ಅಭಿವೃದ್ಧಿಯಾದ ಬಳಿಕ ಪೆರಿಯಶಾಂತಿ – ಮರ್ದಾಳ ರಸ್ತೆಯಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುವ ಭಕ್ತರು ಇಲ್ಲಿಂದಲೇ ಪ್ರಯಾಣಿಸುತ್ತಿದ್ದು, ದಿನಂಪ್ರತಿ 500ಕ್ಕೂ ಅಧಿಕ ವಾಹನಗಳು, ಹಲವು ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, ವಾಹನ ದಟ್ಟನೆಯೂ ಈ ರಸ್ತೆಯಲ್ಲಿ ಹೆಚ್ಚುತ್ತಿದೆ.

ಈ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಹೊರ ಜಿಲ್ಲೆ, ರಾಜ್ಯದ ಪ್ರಯಾಣಿಕರಿಗೆ ಇಲ್ಲಿ ಅಗಲ ಕಿರಿದಾದ ಸೇತುವೆ ಇರುವುದು ತತ್‌ಕ್ಷಣಕ್ಕೆ ಗಮನಕ್ಕೆ ಬಾರದಿರುವುದರಿಂದ ಅಪಾಯದ ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ವಿಸ್ತರಣೆಗೆ ಆಗ್ರಹ ವ್ಯಕ್ತವಾಗಿದೆ.

ವಿಸ್ತರಣೆ ಕಷ್ಟಕರ?
ಪೇರಡ್ಕ ಕಾಜರಕಟ್ಟೆ ಸೇತುವೆಯನ್ನು ವಿಸ್ತರಣೆ ಮಾಡುವುದು ಕಷ್ಟಕರವಾಗಬಹುದು. ಜತೆಗೆ ಕಾಮಗಾರಿ ನಡೆಸಲೂ ಸಮಸ್ಯೆಯಿದೆ. ಬದಲಿ ಬೃಹತ್‌ ಸೇತುವೆ ನಿರ್ಮಿಸು ವುದು ಸೂಕ್ತ ಎನ್ನುವುದು ಸಾರ್ವಜನಿಕರ ಮಾತು. ಕೈಕಂಬ ಕೋಟೆ ಹೊಳೆ ಸೇತುವೆ ಮೇಲ್ದರ್ಜೆಗೇರಿಸಿದಲ್ಲಿ ಈ ಭಾಗದಲ್ಲಿ ಮುಳುಗು ಸೇತುವೆಗಳಿಗೆ ಅಂತ್ಯ ಸಿಗಲಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಕಿರಿದಾದ ಸೇತುವೆ

Advertisement

ಮರ್ದಾಳ – ಪೆರಿಯಶಾಂತಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಮೊದಲು 30 ವರ್ಷಗಳ ಹಿಂದೆ ಪೇರಡ್ಕ ಕಾಜರಕಟ್ಟೆ ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಿಸಿದ್ದು, ಬಳಿಕ ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ಅಭಿವೃದ್ಧಿಗೊಂಡು, ವಿಸ್ತರಣೆಯಾದರೂ ಈ ಸೇತುವೆಯನ್ನು ವಿಸ್ತರಿಸದ ಕಾರಣ ಸೇತುವೆ ಕಿರಿದಾಗಿದೆ. ಒಂದು ವಾಹನ ಸಂಚಾರ ಮಾತ್ರ ಸಾಧ್ಯವಾಗುತ್ತಿದ್ದು, ರಾತ್ರಿ ಹೊತ್ತು ಸೇತುವೆ ಬಹಳ ಅಪಾಯಕಾರಿ. ಮುಂದೆ ತಿರುವು ಇರುವುದರಿಂದಲೂ ಅಪಘಾತ ವಾಗುವ ಸಂಭವವನ್ನು ಅಲ್ಲ ಗೆಳೆಯುವಂತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

 ಪ್ರಸ್ತಾವನೆ ಸಲ್ಲಿಕೆ
ಧರ್ಮಸ್ಥಳ – ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಪೇರಡ್ಕದ ಅಗಲ ಕಿರಿದಾದ ಸೇತುವೆಯನ್ನು ವಿಸ್ತರಣೆಗೆ ಕೆಆರ್‌ಡಿಸಿಎಲ್‌ ಅವರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಜತೆಗೆ ಬಿಳಿನೆಲೆ ಗ್ರಾಮದ ಕೈಕಂಬ ಕೋಟೆಹೊಳೆ ಸೇತುವೆಯನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಳ್ಯ ಶಾಸಕ ಎಸ್‌. ಅಂಗಾರ ಅವರೂ ಈ ಬಗ್ಗೆ ಸೂಚನೆ ನೀಡಿದ್ದಾರೆ.
– ಪ್ರಮೋದ್‌ , ಎಂಜಿನಿಯರ್‌, ಪಿಡಬ್ಲೂಡಿ ಪುತ್ತೂರು

ಅಪಾಯಕಾರಿ
ಪೇರಡ್ಕ ಹೆದ್ದಾರಿಯಲ್ಲಿರುವ ಕಿರಿದಾದ ಸೇತುವೆ ವಾಹನ ಸವಾರರಿಗೆ, ಪಾದಚಾರಿಗಳಿಗೂ ಅಪಾಯಕಾರಿ ಯಾಗಿದ್ದು, ಸೇತುವೆ ವಿಸ್ತರಣೆ ಅಥವಾ ಬೃಹತ್‌ ಸೇತುವೆಗೆ ಇಲಾಖೆ ಕೂಡಲೇ ಮುಂದಾಗಲಿ.
– ವಸಂತ ಕುಬುಲಾಡಿ, ಕಡಬ ತಾ| ಸಂಚಾಲಕರು, ದಸಂಸ (ಅಂಬೇಡ್ಕರ್‌ ವಾದ)

  ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next