ಬೆಂಗಳೂರು: ಬಹು ಜನರ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಒನಕೆ ಚಳವಳಿ ನಡೆಸಿದ ವೀರವನಿತೆ ಒನಕೆ ಓಬವ್ವ ಹೋರಾಟ ವೇದಿಕೆ ಕಾರ್ಯಕರ್ತರು, ನ.10ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಒನಕೆ ಓಬವ್ವನ ವೇಶ ಧರಿಸಿ, ಕೈಯ್ಯಲ್ಲಿ ಒನಕೆ ಹಿಡಿದಿದ್ದ ಮಹಿಳೆಯರೊಂದಿಗೆ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು, ಟಿಪ್ಪು ಜಯಂತಿ ಓಬವ್ವನ ಶೌರ್ಯದ ಇತಿಹಾಸಕ್ಕೆ ಮಾಡುವ ಅವಮಾನ. ಆದ್ದರಿಂದ ಟಿಪ್ಪು ಜಯಂತಿ ವಿರೋಧಿಸಿ ನ.10ರಂದು ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ವೇದಿಕೆ ಅಧ್ಯಕ್ಷ ಡಾ.ಜೀವರಾಜ್ ಮಾತನಾಡಿ, ಒನಕೆ ಓಬವ್ವ, ವೈರಿಗಳ ವಿರುದ್ಧ ಹೋರಾಡಿದ ವೀರ ಮಹಿಳೆ. ಟಿಪ್ಪು ತಂದೆ ಹೈದರಾಲಿಯ ವಿರುದ್ಧ ಹೋರಾಡುವಾಗ ಓಬವ್ವ ವೀರಮರಣವಪ್ಪಿದ್ದಳು. ಆದರೆ, ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುವ ಮೂಲಕ ಒನಕೆ ಓಬವ್ವಳಿಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಸಮಾಜದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಹಾಗೂ ಆತ್ಯಚಾರ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಒನಕೆ ಓಬವ್ವಳಂತಹ ಶೂರ ಮಹಿಳೆಯ ಆದರ್ಶ ತಿಳಿಸಿ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದರ ಬದಲಾಗಿ ಓಬವ್ವಳ ಶೌರ್ಯವನ್ನೇ ಅವಮಾನಿಸುವ ರೀತಿಯಲ್ಲಿ ಟಿಪ್ಪು ಜಯಂತಿ ಆಚರಿಸಿ ವೀರವನಿತೆಯ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಒಬ್ಬ ಮತಾಂಧ. ಸಾವಿರಾರು ಹುಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದ. ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿದ್ದ. ತನ್ನ ಅರಸುತನ ಉಳಿಸಿಕೊಳ್ಳಲು ಬ್ರಿಟೀಷರ ವಿರುದ್ಧ ಹೋರಾಡಿದ ಮಾತ್ರಕ್ಕೆ ಆತ ಸ್ವಾತಂತ್ರ ಹೋರಾಟಗಾರನಾಗುವುದಿಲ್ಲ. ಆದರೆ, ಆತನೊಬ್ಬ ಸ್ವಾತಂತ್ರÂ ಹೋರಾಟಗಾರ ಎಂದು ಸುಳ್ಳು ಹೇಳಿ ಜಯಂತಿಗೆ ಮುಂದಾಗಿರುವುದು ಅಕ್ಷಮ್ಯ. ಇದನ್ನು ವಿರೋಧಿಸಿ ನ.10ರಂದು ದೊಡ್ಡಮಟ್ಟದಲ್ಲಿ ಜನಾಂದೋಲನ ರೂಪಿಸಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮಾತನಾಡಿ, ಹಿಂದೂಗಳ ಮಾರಣಹೋಮ ಮಾಡಿದ ಟಿಪ್ಪು ಹೆಸರಿನಲ್ಲಿ ಸರ್ಕಾರ ಜಯಂತಿ ಮಾಡುತ್ತಿರುವುದು ದೇಶಕ್ಕೆ ಮಾಡಿದ ಅವಮಾನ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ವೇದಿಕೆಯ ಸಂಚಾಲಕ ಆರ್.ಓ.ವೇಣುಗೋಪಾಲ್ ಮತ್ತಿತರರು ಇದ್ದರು.