Advertisement

ಬಂಗಾರಪೇಟೆಯಲ್ಲೊಂದು ಹಸಿರು ಕಾಲೇಜು

01:35 PM Jul 20, 2019 | Suhan S |

ಬಂಗಾರಪೇಟೆ: ಕೋಲಾರ ಜಿಲ್ಲೆ ಎಂದರೆ ಬರಪೀಡಿತ ಪ್ರದೇಶ, ಕುಡಿಯುವ ನೀರಿಗೆ ಬರ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಕೆ.ಸಿ.ರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಉದ್ಯಾನ ನಿರ್ಮಿಸಿ ರಾಜ್ಯದ ಇತರೆ ಕಾಲೇಜುಗಳಿಗೆ ಮಾದರಿಯಾಗಿದ್ದಾರೆ.

Advertisement

ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕ್ಲಾಸ್‌ಗಳಿಗೆ ಚಕ್ಕರ್‌ ಹಾಕಿ ರ್ಯಾಗಿಂಗ್‌, ಸಿನಿಮಾ, ಪಾರ್ಕ್‌ ಅಂತ ಸುತ್ತುತ್ತಾರೆ. ಆದರೆ, ಇಲ್ಲಿನ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಸಸಿಗಳನ್ನು ನೆಟ್ಟು ಹಸಿರುಯುಕ್ತ ವಾತಾವರಣ ಸೃಷ್ಟಿಸಿದ್ದಾರೆ. ಬೆಂಗಳೂರು ಲಾಲ್ಬಾಗ್‌ ನೋಡಿದವರು ಒಮ್ಮೆ ಬಂಗಾರಪೇಟೆಯಲ್ಲಿನ ಈ ಕಾಲೇಜಿಗೆ ಭೇಟಿ ನೀಡಿದ್ರೆ ಅಂತಹದ್ದೇ ಅನುಭವವಾಗುತ್ತದೆ.

8 ಎಕರೆ ವಿಸ್ತೀರ್ಣ: ಚಿಕ್ಕ ಕಟ್ಟಡದಲ್ಲಿ ಆರಂಭಗೊಂಡ ಕಾಲೇಜು, ಈಗ 8 ಎಕರೆ ವಿಸ್ತಾರವಾದ ಜಾಗದಲ್ಲಿ ತಲೆ ಎತ್ತಿದೆ. 1985ರಲ್ಲಿ ಏಳು ವಿದ್ಯಾರ್ಥಿಗಳಿಂದ ಶುರುವಾದ ಕಾಲೇಜು, ಪ್ರಸ್ತುತ 1100 ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಚೆಲ್ಲುತ್ತಿದೆ. ಕಾಲೇಜಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಭಾಗಗಳಲ್ಲಿದ್ದು, ಉತ್ತಮ ಫ‌ಲಿತಾಂಶವೂ ಪಡೆದಿದೆ. ಹಲವು ವಿಷಯಗಳಲ್ಲಿ ವಿದ್ಯಾರ್ಥಿಗಳು ಶೇ.100 ಫ‌ಲಿತಾಂಶ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಐಚ್ಚಿಕ ಆಂಗ್ಲಭಾಷೆ ಇರುವ ಏಕೈಕ ಕಾಲೇಜಾಗಿದೆ ಎಂದು ಹೇಳಿದರು.

ಉದ್ಯಾನ ನಿರ್ಮಿಸಿ: ಪಟ್ಟಣದ ಹೊರವಲಯದ ಸೂಲಿಕುಂಟೆ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ದಶಕಗಳೇ ಕಳೆದರೂ ಉದ್ಯಾನ ನಿರ್ಮಿಸಬೇಕೆಂಬ ಕನಸು ಮೂಡಿದ್ದು ಮಾತ್ರ 2016ರಲ್ಲಿ. ಕಾಲೇಜಿನಲ್ಲಿ ಪ್ರಾರಂಭವಾದ ಸ್ಕೌಟ್ಸ್‌ ಮತ್ತು ರೇಂಜರ್ಸ್‌ನ ಅಧಿಕಾರಿ ಮತ್ತು ವಿದ್ಯಾರ್ಥಿಗಳು ಕಾಲೇಜಿಗೆ ಭವ್ಯ ಉದ್ಯಾನ ನಿರ್ಮಿಸಬೇಕೆಂಬ ಉದ್ದೇಶವಿಟ್ಟುಕೊಂಡು ತಯಾರಿ ನಡೆಸಿದರು.

Advertisement

ಪ್ರತಿ ವಿದ್ಯಾರ್ಥಿಗೊಂದು ಸಸಿ: ಕಾಲೇಜಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಧಿಕಾರಿಯಾದ ಡಾ.ಈರಣ್ಣ ನೇತೃತ್ವದಲ್ಲಿ ಉದ್ಯಾನದ ಯೋಜನೆಯನ್ನು ಪ್ರಾಂಶುಪಾಲ ಜಿ.ಎಂ.ರೆಡ್ಡಪ್ಪ ಅವರ ಅನುಮತಿ ಮೇರೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಉದ್ಯಾನ ನಿರ್ಮಾಣಕ್ಕೆ ತಯಾರು ನಡೆಸಿದರು. 2016ರಲ್ಲಿ 950 ವಿದ್ಯಾರ್ಥಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ತಲೆಗೊಂದು ಮರದಂತೆ ಸಸಿ ನೆಡುವ ಕಾರ್ಯಕ್ರಮಕ್ಕೆ ಮುಂದಾದರು.

ಉದ್ಯಾನದ ಪೋಷಣೆ: ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರೋವರ್ಸ್‌ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳು ಸಸಿ ನೆಡಲು ಬೇಕಾದ ಗುಂಡಿಗಳನ್ನು ತೆಗೆದುಕೊಟ್ಟು ಸಹಕಾರ ನೀಡಿದ್ದಾರೆ. ಇದರಲ್ಲಿ ರೋವರ್‌ ಆದ ಬಸವರಾಜು, ನವೀನ್‌ಕುಮಾರ್‌, ಹರೀಶ್‌, ರೇಂಜರ್ಸ್‌ ಆದ ಅಸ್ಮಾ, ಅಶ್ವಿ‌ನಿ, ಸ್ವಾತಿ ಈ ಪಾರ್ಕ್‌ ನಿರ್ಮಾಣಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಉದ್ಯಾನದ ಪ್ರತಿಯೊಂದು ಗಿಡಕ್ಕೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದ ಕೊಡುಗೆ ಇದೆ. ಕಾಲೇಜು ಮತ್ತು ಇಲಾಖೆಯ ಹಣವನ್ನು ಉಪಯೊಗಿಸಿಕೊಂಡಿಲ್ಲ. ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಧಿಕಾರಿ ಮತ್ತು ವಿದ್ಯಾರ್ಥಿಗಳೇ ಉದ್ಯಾನದ ಪೋಷಣೆಯನ್ನು ಮಾಡುತ್ತಿದ್ದಾರೆ.

ನೆನಪಿಗಾಗಿ ಸಸಿ: ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮಗಳಾದರೂ ಹಾಗೂ ಇಲಾಖೆಯ ಅಧಿಕಾರಿಗಳು ಕಾಲೇಜಿನ ಭೇಟಿ ನೀಡಿದರೆ, ಮೊದಲು ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಹೊಸ ವಿದ್ಯಾರ್ಥಿಗಳು ಕಾಲೇಜಿಗೆ ಸೇರ್ಪಡೆಯಾದಾಗ ಅವರಿಗೆ ಪರಿಸರದ ಬಗ್ಗೆ ಕಾಳಜಿ ಬರುವಂತೆ ಮನವರಿಕೆ ಮಾಡಿಕೊಡಲಾಗುತ್ತದೆ. ಅನೇಕ ವಿದ್ಯಾರ್ಥಿಗಳು ತಮ್ಮ ನೆನಪು ಕಾಲೇಜಿನಲ್ಲಿ ಇರಲಿ ಎಂಬ ಕಾರಣಕ್ಕಾಗಿಯೇ ಸಸಿಗಳನ್ನು ನೆಟ್ಟಿದ್ದಾರೆ.

ಜಿಲ್ಲೆಯಲ್ಲೇ ಹೆಸರು: 2017ರ ನವೆಂಬರ್‌ ತಿಂಗಳಲ್ಲಿ ನ್ಯಾಕ್‌ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿದಾಗ ನಮ್ಮ ಉದ್ಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವರದಿ ಸಲ್ಲಿಸಿದ್ದಾರೆ. ಅವರೂ ಸಹ ಸಸಿಗಳನ್ನು ನೆಟ್ಟಿದ್ದಾರೆ. ಪಟ್ಟಣದಲ್ಲೂ ಅನೇಕ ಬಾರಿ ಜಾಥಾ ನಡೆಸಿ ಪರಿಸರ ಸಂರಕ್ಷಣೆ, ಆರೋಗ್ಯಕ್ಕಾಗಿ ಶುಚಿತ್ವದ ಅರಿವನ್ನು ಸಾರ್ವಜನಿಕರಿಗೆ ಕಾಲೇಜಿನ ವಿದ್ಯಾರ್ಥಿಗಳು ಮೂಡಿಸಿದ್ದಾರೆ. ಕಾಲೇಜಿನ ಪರಿಸರ ಕಾಳಜಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ.

ಕಾಂಪೌಂಡ್‌ ನಿರ್ಮಾಣ: ಕಾಲೇಜಿನ ನಮ್ಮ ಉದ್ಯಾನದ ಪೋಷಣೆಗೆ ನೀರಿನ ಕೊರತೆಯನ್ನು ನೀಗಿಸಲು ಸ್ಥಳೀಯ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಕೊಳವೆಬಾವಿ ಕೊರೆಯಿಸಿಕೊಟ್ಟಿದ್ದಾರೆ. ಸ್ಥಳೀಯವಾಗಿ ಹಸು ಮತ್ತು ಮೇಕೆಗಳು ಹಲವು ಬಾರಿ ಉದ್ಯಾನಕ್ಕೆ ದಾಳಿ ಮಾಡಿವೆ. ಇದಕ್ಕೆ ಕಾರಣ ಕಾಲೇಜಿಗೆ ಸೂಕ್ತ ಕಾಂಪೌಂಡ್‌ ವ್ಯವಸ್ಥೆ ಇಲ್ಲದಿರುವುದು. ಇವೆಲ್ಲದರ ಹೊರತಾಗಿಯೂ ಉದ್ಯಾನದಲ್ಲಿ 2000ಕ್ಕೂ ಹೆಚ್ಚು ಗಿಡಗಳಿವೆ. ಅದರಲ್ಲಿ ಹೂ ಗಿಡಗಳು, ಅಲಂಕಾರಿಕ ಗಿಡಗಳು, ಔಷಧಿಯುಕ್ತ ಗಿಡಗಳ ಜೊತೆಗೆ ಬಾಳೆ, ತೆಂಗು, ನಿಂಬೆ, ಕ್ರಿಸ್ಮಸ್‌ ಗಿಡಗಳು ಸೆಳೆಯುತ್ತವೆ.

ಈಗಿನ ರೋವರ್ಸ್‌ ಮತ್ತು ರೇಂಜರ್ಸ್‌ನ ಮುಖಂಡರಾದ ಮಮತಾ, ಲಕ್ಷ್ಮೀಪತಿ ಮತ್ತು ಹರೀಶ್‌ ನಮ್ಮ ಉದ್ಯಾನದ ನಮ್ಮ ಕಾಲೇಜಿನಲ್ಲಿ ಉದ್ಯಾನ ಇರುವುದರಿಂದ ಹಸಿರು ಕಾಲೇಜಾಗಿದೆ ಎಂದಿದ್ದಾರೆ. ಕಾಲೇಜಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ವತಿಯಿಂದ ಪ್ರಸ್ತುತ ವರ್ಷದಲ್ಲಿ ಅನೇಕ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಗಿಡ ನೆಡುವ ಮತ್ತು ಉದ್ಯಾನ ನಿರ್ಮಿಸುವ ಕಾರ್ಯಕ್ರಮ ಕೈಗೊಳ್ಳಬೇಕೆಂಬ ಯೋಜನೆ ಹಾಕಿಕೊಂಡಿದ್ದಾರೆ.

ಪರಿಸರ ಜಾಗೃತಿ ಮೂಡಿಸಲು ಕಾಲೇಜು ಆವರಣದಲ್ಲಿ ಉತ್ತಮ ಉದ್ಯಾನ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಹಸಿರುಯುಕ್ತ ಪಾರ್ಕ್‌ ನಿರ್ಮಾಣ ಮಾಡಿದ್ದಾರೆ. ಕಾಲೇಜಿಗೆ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಾಗಿ ಬರುವುದರಿಂದ ಪಾರ್ಕ್‌ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಈ ಪಾರ್ಕ್‌ನಿಂದ ಕಾಲೇಜು ಆವರಣದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಇರುವುದರಿಂದ ಬೋಧಕ ವರ್ಗದಲ್ಲೂ ಸಂತಸ ತರಿಸಿದೆ. ● ಈರಣ್ಣ, ಉಪನ್ಯಾಸಕ
● ಎಂ.ಸಿ.ಮಂಜುನಾಥ್‌
Advertisement

Udayavani is now on Telegram. Click here to join our channel and stay updated with the latest news.

Next