ಬೆಂಗಳೂರು: ಕರಾವಳಿ ಭಾಗದ ಜಿಲ್ಲೆಗಳಲ್ಲಿ ವಾಸಿಸುವ ಪ್ರತಿ ಇಬ್ಬರಲ್ಲಿ ಒಬ್ಬರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿದ್ದಾರೆ!
ವಾರ್ಷಿಕ ಬಿಪಿಎಲ್ ಕುಟುಂಬಗಳಿಗೆ ಐದು ಲಕ್ಷ ರೂ., ಎಪಿಲ್ ಕುಟುಂಗಳಿಗೆ ಒಂದೂವರೆ ಲಕ್ಷ ರೂ., ಆಸ್ಪತ್ರೆ ಚಿಕಿತ್ಸಾ ವೆಚ್ಚದ ನೆರವು ನೀಡುವ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಗೆ ಮೂರು ವರ್ಷ ತುಂಬಿದೆ. ರಾಜ್ಯದಲ್ಲಿ ಒಟ್ಟಾರೆ 7.02 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ ಸೆ.23 ವೇಳೆಗೆ 58.8 ಲಕ್ಷ ಕುಟುಂಬಗಳ 1,47,36918 ಮಂದಿ ನೋಂದಣಿಯಾಗಿ ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.20 ರಷ್ಟು ಮಂದಿಗೆ ಮಾತ್ರ ಈ ಯೋಜನೆ ತಲುಪಿದಂತಾಗಿದೆ. ಆದರೆ, ರಾಜ್ಯದ ಕರಾವಳಿ ಭಾಗದಲ್ಲಿ ಆಯುಷ್ಮಾನ್ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಜಿಲ್ಲೆಗಳಲ್ಲಿ ವಾಸಿಸುತ್ತಿರುವವರ ಪೈಕಿ ಸರಾಸರಿ ಶೇ.50ರಷ್ಟು ಜನರು ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ.
ಅತಿ ಹೆಚ್ಚು ಉಡುಪಿಯ ಶೇ.64, ಉತ್ತರ ಕನ್ನಡ ಶೇ.41, ದಕ್ಷಿಣ ಕನ್ನಡ ಶೇ.37, ಕೊಡಗು ಶೇ.58 ರಷ್ಟು ನಿವಾಸಿಗಳ ಬಳಿ ಆಯುಷ್ಮಾನ್ ಕಾರ್ಡ್ ಇದೆ. ಈ ಭಾಗದ ಜನರಲ್ಲಿರುವ ಆರೋಗ್ಯ ಕಾಳಜಿ, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ಬಿಜೆಪಿ ಜಾರಿಗೆ ತಂದ ಯೋಜನೆಯಾಗಿದ್ದು, ಈ ಜಿಲ್ಲೆಗಳಲ್ಲಿ ಬಿಜೆಪಿ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಿರುವುದೇ ಆಯುಷ್ಮಾನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆಯಲು ಕಾರಣವಾಗಿದೆ. ಜತೆಗೆ ಮಲೆನಾಡಿನ ಭಾಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಶೇ.40ರಷ್ಟು ಮಂದಿ ಯೋಜನೆಗೆ ನೋಂದಣಿಯಾಗಿದ್ದಾರೆ. ಉಳಿದಂತೆ ಮಂಡ್ಯ ಶೇ.40, ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಶೇ.30ಕ್ಕಿಂತ ಮೊದಲ ಹತ್ತು ಸ್ಥಾನದಲ್ಲಿವೆ.
ಉತ್ತರ ಕರ್ನಾಟಕ ಜಿಲ್ಲೆಗಳು ಹಿಂದೆ!: ರಾಜ್ಯದ ಒಟ್ಟಾರೆ ಜನಸಂಖ್ಯೆ ಶೇ.20 ರಷ್ಟು ಮಂದಿ ಆಯುಷ್ಮಾನ್ ಕಾರ್ಡ್ ಹೊಂದಿದಾರೆ. ಆದರೆ, ಅರ್ಧದಷ್ಟು ಜಿಲ್ಲೆಗಳಲ್ಲಿ ಶೇ.20ಕ್ಕಿಂತಲೂ ಕಡಿಮೆ ಮಂದಿಗೆ ಯೋಜನೆ ತಲುಪಿದೆ. ಈ ಪೈಕಿ ಉತ್ತರ ಕರ್ನಾಟಕದ 12 ಜಿಲ್ಲೆಗಳು, ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿವೆ. ರಾಯಚೂರು, ಬೆಂಗಳೂರು ನಗರ, ಬಳ್ಳಾರಿ, ವಿಜಯಪುರ, ದಾವಣಗೆರೆ ಸರಾಸರಿ ಶೇ.10 ರಷ್ಟು ಮಂದಿ ಮಾತ್ರ ಆರೋಗ್ಯ ಕಾರ್ಡ್‌ಹೊಂದಿದ್ದು, ಕೊನೆಯಿಂದ ಐದು ಸ್ಥಾನದಲ್ಲಿವೆ.
ಶೇ.82ರಷ್ಟು ಬಡವರಿಗೆ ತಲುಪಿದೆ: ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) 55.96 ಲಕ್ಷ ಕುಟುಂಬಗಳಿದ್ದು, ಇವುಗಳ 1.2 ಕೋಟಿ ಮಂದಿ ಈಗಾಗಲೇ ಆಯುಷ್ಮಾನ್ ಕಾರ್ಡ್ ಪಡೆದು ಕೊಂಡಿದ್ದಾರೆ. ಈ ಮೂಲಕ ಶೇ.82 ರಷ್ಟು ಬಡವರಿಗೆ ಈ ಯೋಜನೆ ತಲುಪಿದಂತಾಗಿದೆ. ಇನ್ನು ಎಪಿಎಲ್ ಕುಟುಂಬಗಳ 2.5 ಲಕ್ಷವಿದ್ದು, ಈ ಪೈಕಿ ಶೇ.3.5 ರಷ್ಟು ಮಂದಿ ಮಾತ್ರ ನೋಂದಣಿಯಾಗಿದ್ದಾರೆ.
ಇದನ್ನೂ ಓದಿ:ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ
ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತಿದ್ದು, ದಾಖಲೆ ನೀಡಿದರೆ 10 ನಿಮಿಷದಲ್ಲಿ ಕಾರ್ಡ್ ಲಭ್ಯವಾಗಲಿದೆ. ಬಿಪಿಎಲ್ ಕುಟುಂಬಗಳ ಶೇ.82 ರಷ್ಟು ಮಂದಿ ಈಗಾಗಲೇ ಕಾರ್ಡ್ ಪಡೆದಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ, ಕಾರ್ಡ್ ನೋಂದಣಿ ಕೇಂದ್ರ ಮತ್ತಷ್ಟು ಹೆಚ್ಚಿಸಿ ಯೋಜನೆಯನ್ನು ಎಲ್ಲರಿಗೂ ತಲುಪಿಸಲಾಗುತ್ತದೆ.
-ಡಾ.ತ್ರಿಲೋಕ್ ಚಂದ್ರ, ಆಯುಕ್ತ, ಆರೋಗ್ಯ ಇಲಾಖೆ
ವರದಿ: ಜಯಪ್ರಕಾಶ್ ಬಿರಾದಾರ್