ಕರಾಚಿ: ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡುವ ರಸ್ತೆಬದಿಯ ಅಂಗಡಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಹ್ಯಾಂಡ್ ಗ್ರೆನೇಡ್ ಎಸೆದಿದ್ದರಿಂದ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಶುಕ್ರವಾರ ತಿಳಿಸಿದೆ.
ಕ್ವೆಟ್ಟಾದ ಜಾಯಿಂಟ್ ರೋಡ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಆಗಸ್ಟ್ 14 ರ ಸ್ವಾತಂತ್ರ್ಯ ದಿನಾಚರಣೆಯ ಮೊದಲು ದುಷ್ಕರ್ಮಿಗಳು ಧ್ವಜ ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳ ಮೇಲೆ ಗ್ರೆನೇಡ್ ಅನ್ನು ಎಸೆದಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸಮನ್ಸ್ ಗೆ ಆಕ್ಷೇಪ; ಸಂವಿಧಾನ ಉಲ್ಲೇಖಿಸಿ ಸಭಾಧ್ಯಕ್ಷ ನಾಯ್ದು ಕೊಟ್ಟ ಸ್ಪಷ್ಟನೆಯಲ್ಲೇನಿದೆ?
ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ ಮತ್ತು ಅವರೆಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದುವರೆಗೆ ಯಾವುದೇ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಬಲೂಚ್ ಬಂಡುಕೋರ ಗುಂಪುಗಳು ಈ ಹಿಂದೆ USD 60 ಶತಕೋಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಗುರಿಯಾಗಿಟ್ಟುಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದವು.