Advertisement

ದೇಶಕ್ಕೊಂದೇ ಪಡಿತರ ಕಾರ್ಡ್‌ : ಪಡಿತರ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ

11:43 PM Jul 30, 2021 | Team Udayavani |

ದೇಶದ ಯಾವ ಮೂಲೆಯಲ್ಲಿದ್ದರೂ ಎಲ್ಲ ಬಡವರಿಗೂ ಸಬ್ಸಿಡಿ ಬೆಲೆಯಲ್ಲಿ ಪಡಿತರ ಲಭಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಒಂದು ದೇಶ, ಒಂದು ಪಡಿತರ ಕಾರ್ಡ್‌ ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿತ್ತು. ಈ ವ್ಯವಸ್ಥೆಯಡಿ ಪಡಿತರ ಚೀಟಿ ಪಡೆದ ಯಾವನೇ ಫ‌ಲಾನುಭವಿ ದೇಶದ ಯಾವುದೇ ಮೂಲೆಗೆ ವಲಸೆ ಹೋದರೂ ಅಲ್ಲಿನ ನ್ಯಾಯಬೆಲೆ ಅಂಗಡಿಗಳಿಂದ ಸರಕಾರ ನೀಡುವ ಸಬ್ಸಿಡಿ ಬೆಲೆಯ ಪಡಿತರವನ್ನು ಪಡೆಯಲು ಸಾಧ್ಯವಾ ಗಲಿದೆ. ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದ್ದು ಕೆಲವೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಕೂಡ ಜು. 31ರ ಒಳಗಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಆದೇಶಿಸಿದೆ. ಒನ್‌ ನೇಶನ್‌ ಒನ್‌ ರೇಷನ್‌ ಕಾರ್ಡ್‌ (ಒಎನ್‌ಒಆರ್‌ಸಿ) ವ್ಯವಸ್ಥೆಯ ಸ್ಥೂಲ ಚಿತ್ರಣ ಇಲ್ಲಿದೆ.

Advertisement

ಏನಿದು ಒನ್‌ ನೇಶನ್‌ ಒನ್‌ ರೇಷನ್‌ ಕಾರ್ಡ್‌?
ಒಎನ್‌ಒಆರ್‌ಸಿ ಯೋಜನೆಯು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಅಡಿಯಲ್ಲಿ ದೇಶದ ಯಾವುದೇ ನ್ಯಾಯ ಬೆಲೆ ಅಂಗಡಿಯಿಂದ ಸಬ್ಸಿಡಿ ಪಡಿತರವನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಯಾರಾದರೂ ಕೆಲಸ ಅರಸಿ ಬೇರೆ ಊರಿಗೆ ಹೋದಲ್ಲಿ ಅವರು ಒಎನ್‌ಒಆರ್‌ಸಿ ಪಡೆದುಕೊಂಡಿದ್ದಲ್ಲಿ ಸರಕಾರ ಕೊಡಮಾಡುವ ಸಬ್ಸಿಡಿ ಬೆಲೆಯ ಆಹಾರ ಧಾನ್ಯಗಳನ್ನು ಅವರು ಸಾರ್ವಜನಿಕ ವಿತರಣ ವ್ಯವಸ್ಥೆಯಡಿ ವಲಸೆ ಹೋದ ಊರು ಅಥವಾ ಪಟ್ಟಣದಲ್ಲಿನ ನ್ಯಾಯಬೆಲೆ ಅಂಗಡಿಗಳಿಂದ ಪಡೆಯಬಹುದಾಗಿದೆ. ಸಾರ್ವಜನಿಕ ವಿತರಣ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ನೀಡುವ ಕ್ರಮವಾಗಿ ಕೇಂದ್ರ ಸರಕಾರ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಇದಕ್ಕಾಗಿ ರಾಜ್ಯಗಳಿಗೆ ಪ್ರೋತ್ಸಾಹಧನವನ್ನೂ ನೀಡುತ್ತಿದೆ.

ಸದ್ಯದ ಸ್ಥಿತಿಗತಿ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,2013ರ ಪ್ರಕಾರ, ಸುಮಾರು 81 ಕೋಟಿ ಜನರು ಸಬ್ಸಿಡಿ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹರಾಗಿದ್ದು, ಕೆ.ಜಿ.ಗೆ 3ರೂ. ಗಳಂತೆ ಅಕ್ಕಿ, ಕೆ.ಜಿ.ಗೆ 2 ರೂ. ಗಳಂತೆ ಗೋಧಿ, ಕೆ.ಜಿ.ಗೆ ಒಂದು ರೂಪಾಯಿಯಂತೆ ಬೇಳೆಯನ್ನು ನ್ಯಾಯಬೆಲೆ ಅಂಗಡಿಯಿಂದ ಪಡೆಯಬಹುದಾಗಿದೆ. ಈ ವರ್ಷದ ಜೂನ್‌ ಅಂತ್ಯದವರೆಗಿನ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ ಸುಮಾರು 5.46 ಲಕ್ಷ ನ್ಯಾಯಬೆಲೆ ಅಂಗಡಿಗಳು ಮತ್ತು
23.63 ಕೋಟಿ ಜನರು ಪಡಿತರ ಚೀಟಿ ಹೊಂದಿದ್ದಾರೆ.

ಒಎನ್‌ಒಆರ್‌ಸಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಫ‌ಲಾನುಭವಿಗಳ ಪಡಿತರ ಚೀಟಿ, ಆಧಾರ್‌ ಸಂಖ್ಯೆ ಮತ್ತು ಎಲೆಕ್ಟ್ರಾನಿಕ್‌ ಪಾಯಿಂಟ್ಸ್‌ ಆಫ್ ಸೇಲ್‌(ಇಪಿಒಎಸ್‌) ವಿವರಗಳನ್ನು ಒಳಗೊಂಡ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಇದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಧೃಡೀಕರಣದ ಮೂಲಕ ಫ‌ಲಾನುಭವಿಗಳನ್ನು ಈ ವ್ಯವಸ್ಥೆ ಗುರುತಿಸುತ್ತದೆ. ಈ ವ್ಯವಸ್ಥೆಯು ಎರಡು ಪೋರ್ಟಲ್‌ಗ‌ಳ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇಂಟಗ್ರೇಟೆಡ್‌ ಮ್ಯಾನೇಜ್‌ಮೆಂಟ್‌ ಆಫ್ ಪಬ್ಲಿಕ್‌ ಡಿಸ್ಟ್ರಿಬ್ಯೂಶನ್‌ ಸಿಸ್ಟಮ್‌ (ಐಎಂ-ಪಿಡಿಎಸ್‌) (impds.nic.in) ಮತ್ತು ಅನ್ನವಿತರಣ್‌ (annavitran.nic.in) ಇವೆರಡು ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹೊಂದಿರುತ್ತದೆ. ಒಎನ್‌ಒಆರ್‌ಸಿ ಕಾರ್ಡ್‌ ಹೊಂದಿದ ಫ‌ಲಾನುಭವಿ ನ್ಯಾಯಬೆಲೆ ಅಂಗಡಿಗೆ ತೆರಳಿದ ಸಂದರ್ಭದಲ್ಲಿ ಈ ತಂತ್ರಜ್ಞಾನ ಫ‌ಲಾನುಭವಿಯ ಕಾರ್ಡ್‌ನ ವಿವರಗಳನ್ನು ಪರಿಶೀಲಿಸಿ, ತಾಳೆ ಹಾಕಿದ ಬಳಿಕ ಪಡಿತರವನ್ನು ಫ‌ಲಾನುಭವಿಗೆ ನೀಡಲಾ ಗುತ್ತದೆ.

ಅಂತರ್‌ ರಾಜ್ಯ ಫ‌ಲಾನುಭವಿಗಳ ಪಡಿತರ ಕಾರ್ಡ್‌ಗಳ ದಾಖಲೆಯನ್ನು ಅನ್ನ ವಿತರಣ್‌ ಪೋರ್ಟಲ್‌ ನಿರ್ವಹಿಸಿದರೆ ಅಂತರ್‌ ಜಿಲ್ಲೆ ಮತ್ತು ಜಿಲ್ಲೆಯ ಒಳಗಡೆಯ ಫ‌ಲಾನುಭವಿಗಳ ದಾಖಲೆಗಳನ್ನು ಐಎಂ-ಪಿಡಿಎಸ್‌ ಪೋರ್ಟಲ್‌ ಹೊಂದಿರುತ್ತದೆ.

Advertisement

ಯಾಕಾಗಿ ಇದನ್ನು ಆರಂಭಿಸಲಾಯಿತು?
ಈ ಮೊದಲು ಎನ್‌ಎಫ್ಎಸ್‌ಎ ಫ‌ಲಾನುಭವಿಗಳು ನಿರ್ದಿಷ್ಟ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯ ಹೊರತಾಗಿ ಬೇರೆಲ್ಲಿಯೂ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರು ಪಿಡಿಎಸ್‌ ಯೋಜನೆಯಡಿಯಲ್ಲಿ ಪಡಿತರ ಪಡೆಯುವಂತಾಗಲು ಸರಕಾರ ಒಎನ್‌ಒಆರ್‌ಸಿ ಜಾರಿಗೊಳಿಸಿತು. ಅದಕ್ಕಾಗಿಯೇ ಸರಕಾರ ಒಎನ್‌ಒಆರ್‌ಸಿಯನ್ನು ರೂಪಿಸಿತು. ಈಗ ಎಲ್ಲ ನ್ಯಾಯಬೆಲೆ ಅಂಗಡಿಗಳೂ ಇಪಿಒಎಸ್‌ ಸಾಧನಗಳನ್ನು ಒಳಗೊಂಡಿರುತ್ತದೆ. (ಪ್ರಸ್ತುತ ದೇಶದಾದ್ಯಂತ 4.74 ಲಕ್ಷ ಸಾಧನಗಳಿವೆ.)

ಒಎನ್‌ಒಆರ್‌ಸಿಯನ್ನು 2019ರ ಆಗಸ್ಟ್ ನಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಯಿತಾದರೂ ಅದರ ಕೆಲಸಗಳು 2018ರ ಆಗಸ್ಟ್‌ನಲ್ಲಿಯೇ ಪ್ರಾರಂಭವಾಗಿದ್ದವು. ದೇಶದ ಹಲವೆಡೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಲೋಪದೋಷಗಳಿಂದ ಕೂಡಿದ್ದು ಭಾರೀ ಪ್ರಮಾಣದಲ್ಲಿ ಸೋರಿಕೆಯಾಗುತ್ತಿ ರುವುದನ್ನು ತಡೆಯುವ ಮತ್ತು ನೈಜ ಫ‌ಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನವನ್ನು ತಲುಪಿಸುವ ಮೂಲಕ ಇಡೀ ಪಡಿತರ ವಿತರಣ ವ್ಯವಸ್ಥೆಯ ಸುಧಾರಣೆಯ ಉದ್ದೇಶದೊಂದಿಗೆ ಸರಕಾರ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಕೋವಿಡ್‌-19 ಅವಧಿಯಲ್ಲಿ ಈ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿತು. ಕೋವಿಡ್‌ ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ನಗರಗಳಿಂದ ಹಳ್ಳಿಗಳಿಗೆ ವಲಸೆ ಬಂದ ಕಾರ್ಮಿಕರು ಮತ್ತವರ ಕುಟುಂಬಗಳಿಗೆ ಸರಕಾರ ಘೋಷಿಸಿದ್ದ ಉಚಿತ ಪಡಿತರ ಯೋಜನೆಯಡಿಯಲ್ಲಿ ಪಡಿತರವನ್ನು ವಿತರಿಸುವ ಗುರಿಯನ್ನು ಸರಕಾರ ಹೊಂದಿತ್ತು.

ಪೋರ್ಟೆಬಿಲಿಟಿ ವ್ಯವಸ್ಥೆಯಡಿ ಪಡಿತರ
ಕೇಂದ್ರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ, ಪ್ರತೀ ತಿಂಗಳು ಸರಾಸರಿ 1.35 ಕೋಟಿಗೂ ಅಧಿಕ ಒಎನ್‌ಒಆರ್‌ಸಿ ಫ‌ಲಾನುಭವಿಗಳು ಪೋರ್ಟೆಬಿಲಿಟಿ ವ್ಯವಸ್ಥೆಯಡಿ ಪಡಿತರವನ್ನು ಪಡೆಯುತ್ತಿದ್ದಾರೆ. ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 27.83 ಕೋಟಿಗೂ ಅಧಿಕ ಫ‌ಲಾನುಭವಿಗಳು ಪೋರ್ಟೆಬಿಲಿಟಿ ವ್ಯವಸ್ಥೆಯಡಿ ಪಡಿತರವನ್ನು ಪಡೆದಿದ್ದಾರೆ. 2020ರ ಎಪ್ರಿಲ್‌ನಿಂದ 2021ರ ಮೇ ವರೆಗೆ ಅಂದರೆ ಕೋವಿಡ್‌ ಅವಧಿಯಲ್ಲಿ ಸುಮಾರು 19.8 ಕೋಟಿ ಫ‌ಲಾನುಭವಿಗಳು ಈ ವ್ಯವಸ್ಥೆಯಡಿ ಪಡಿತರವನ್ನು ಪಡೆದುಕೊಂಡಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಇನ್ನೂ ಜಾರಿಯಾಗಿಲ್ಲ
ಇಲ್ಲಿಯವರೆಗೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಎನ್‌ಒಆರ್‌ಸಿಗೆ ಸೇರ್ಪಡೆಗೊಂಡಿದ್ದು ಸುಮಾರು 69 ಕೋಟಿ ಎನ್‌ಎಫ್ಎಸ್‌ಎ ಫ‌ಲಾನುಭವಿಗಳನ್ನು ಒಳಗೊಂಡಿದೆ. ಅಸ್ಸಾಂ, ಛತ್ತಿಸ್‌ಗಢ, ದಿಲ್ಲಿ ಮತ್ತು ಪಶ್ಚಿಮ ಬಂಗಾಲ ಈ ಯೋಜನೆಗೆ ಇನ್ನೂ ಸೇರ್ಪಡೆಯಾಗಿಲ್ಲ. ವಿವಿಧ ಕಾರಣಗಳಿಂದಾಗಿ ಈ ನಾಲ್ಕು ರಾಜ್ಯಗಳಲ್ಲಿ ಇದು ಅನುಷ್ಠಾನಕ್ಕೆ ಬಂದಿಲ್ಲ. ದಿಲ್ಲಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಇಪಿಒಎಸ್‌ ಬಳಕೆ ಆರಂಭಗೊಂಡಿಲ್ಲ. ರಾಜ್ಯ ಸರಕಾರ ನೀಡುವ ಪಡಿತರ ಚೀಟಿಗಳನ್ನು ಸಹ ಒಎನ್‌ಒಆರ್‌ಸಿ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಪಶ್ಚಿಮ ಬಂಗಾಲ ಸರಕಾರ ಬೇಡಿಕೆ ಇರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next