ನವದೆಹಲಿ: ದೇಶದ ಬಡವರು ಯಾವುದೇ ರಾಜ್ಯಕ್ಕೆ ಹೋಗಲಿ, ಅವರಿಗೆ ಸುಲಭವಾಗಿ ಪಡಿತರ ಸಿಗುವಂಥ ಅನುಕೂಲ ಕಲ್ಪಿಸುವ ಉದ್ದೇಶದಿಂದ ‘ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್’ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಶುಕ್ರವಾರ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಬಡವರು ದೇಶದ ಯಾವುದೇ ಮೂಲೆಗೆ ಹೋದರೂ ಅವರಿಗೆ ಪಡಿತರ ಸಮಸ್ಯೆ ಎದುರಾಗಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಆಹಾರ ಸಬ್ಸಿಡಿ ಯೋಜನೆಯನ್ವಯ ರಾಜ್ಯಗಳು ಬೇಡಿಕೆಯ ಪಟ್ಟಿ ಸಲ್ಲಿಸಿದರೆ, ಕೇಂದ್ರ ಸರ್ಕಾರವು ಆಹಾರಧಾನ್ಯಗಳನ್ನು ಪೂರೈಸುತ್ತದೆ. ನಂತರ ಪಡಿತರ ಅಂಗಡಿಗಳ ಮೂಲಕ ಪಡಿತರ ಕಾರ್ಡ್ ಹೊಂದಿರುವವರಿಗೆ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಭ್ರಷ್ಟಾಚಾರ ಮುಕ್ತಕ್ಕೆ ಸಹಕಾರಿ: ಈ ಯೋಜನೆಯನ್ನು ಬಡವರಿಗೆ, ಅದರಲ್ಲೂ ಪ್ರಮುಖವಾಗಿ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಮಾಡಲು ಚಿಂತನೆ ನಡೆದಿದೆ. ಅಂದರೆ, ಇವರು ತಾವು ಹೋದ ಕಡೆಯಲ್ಲೆಲ್ಲಾ, ಒಂದೊಂದು ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಹೊಸ ಮಾದರಿಯಲ್ಲಿ ವಲಸೆ ಕಾರ್ಮಿಕರು, ತಮ್ಮ ಮೂಲ ಸ್ಥಳದ ಕಾರ್ಡ್ ಅನ್ನೇ ಬಳಸಿ ಪಡಿತರ ಪಡೆದುಕೊಳ್ಳಬಹುದು. ಇದರಿಂದ ನಕಲು ತಪ್ಪಿ, ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬ ಚಿಂತನೆ ಇದೆ.
ಜಾರಿ ಹೇಗೆ?: ಐಎಂಪಿಡಿಎಸ್(ಪಡಿತರ ವಿತರಣೆ ಸೇವೆಯ ಸಮಗ್ರ ನಿರ್ವಹಣೆ) ತಂತ್ರಜ್ಞಾನಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಕರ್ನಾಟಕ ಸೇರಿ ಹಲವಾರು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆನ್‌ಲೈನ್ ಮೂಲಕವೇ ಎಲ್ಲ ಪಡಿತರದಾರರ ಮಾಹಿತಿಯನ್ನು ಇದರಲ್ಲಿ ತುಂಬಲಾಗುತ್ತದೆ.