ಕಾನೂನು ಆಯೋಗ ದೇಶಾದ್ಯಂತ ಎರಡು ಹಂತಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಲು ರೂಪುರೇಷೆ ಹಾಕಿಕೊಡುವುದರೊಂದಿಗೆ “ಒಂದು ದೇಶ ಒಂದು ಚುನಾವಣೆ’ ಎಂಬ ಪದ್ಧತಿಯನ್ನು ಜಾರಿಗೆ ತರುವ ಪ್ರಯತ್ನದಲ್ಲಿ ಕೇಂದ್ರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಲೋಕಸಭೆಗೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಪದೇ ಪದೇ ಚುನಾವಣೆ ನಡೆಸುವ ಬದಲಾಗಿ ಒಂದೇ ಸಲ ನಡೆಸಬೇಕೆನ್ನುವ ಆಶಯದೊಂದಿಗೆ ಹುಟ್ಟಿಕೊಂಡಿರುವ ವಾದವಿದು. ಪ್ರಸ್ತುತ ಎನ್‌ಡಿಎ ಸರಕಾರ ಏಕಕಾಲದಲ್ಲಿ ಚುನಾವಣೆ ನಡೆಸುವ ವಾದದ ಪರವಾಗಿದೆ.
ಪ್ರಧಾನಿ ಮೋದಿ ಅವಕಾಶ ಸಿಕ್ಕಿದಾಗಲೆಲ್ಲ ಈ ವಿಚಾರವನ್ನು ಪ್ರಸ್ತಾವಿಸುತ್ತಿದ್ದಾರೆ. ಪದೇ ಪದೇ ಚುನಾವಣೆ ನಡೆಸಲು ಅಪಾರ ವೆಚ್ಚವಾಗುತ್ತಿದೆ, ಭದ್ರತಾ ಸಿಬಂದಿಗಳು ಮತ್ತು ಸರಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ, ನೀತಿ ಸಂಹಿತೆ ಜಾರಿಯಾದ ಬಳಿಕ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗದೆ ಆಡಳಿತ ಕುಂಟುತ್ತದೆ ಮತ್ತು ಜನಜೀವನ ಬಾಧಿತವಾಗುತ್ತದೆ ಎನ್ನುವುದು ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂದು ಹೇಳುವವರು ಮಂಡಿಸುವ ತರ್ಕ. ಐದು ವರ್ಷಕ್ಕೊಮ್ಮೆ ಮಾತ್ರ ಚುನಾವಣೆ ನಡೆಯುತ್ತದೆ
ಎಂದಾದರೆ ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ಸಂಪೂರ್ಣವಾಗಿ ಆಡಳಿತ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿ ಕೊಳ್ಳಬಹುದು ಎನ್ನುವುದು ಕಲ್ಪಿಸಿಕೊಳ್ಳಲು ಬಹಳ ರಮ್ಯವಾಗಿದೆ.
ಆದರೆ ವಾಸ್ತವದಲ್ಲಿ ಇದು ಸಾಧ್ಯವೇ ಎನ್ನುವುದು ಮುಖ್ಯ ಪ್ರಶ್ನೆ. ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಸೇರಿದಂತೆ ಎಲ್ಲ ವಿಪಕ್ಷಗಳು ಈ ಅಂಶದ ಬಗ್ಗೆ ಚಿಂತನೆ ನಡೆಸಿರುವಂತೆ ಕಾಣಿಸುವುದಿಲ್ಲ. ಅವುಗಳ ಹೆದರಿಕೆ ಏಕಕಾಲದಲ್ಲಿ ಚುನಾವಣೆ ನಡೆದರೆ ಆ ಸಂದರ್ಭದಲ್ಲಿ ಯಾವ ಪಕ್ಷದ ಅಲೆಯಿರುತ್ತದೋ ಅದೇ ಪಕ್ಷ ಕೇಂದ್ರ ಮತ್ತು ಎಲ್ಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬಹುದು. ಹೀಗಾದರೆ ನಾವು ಅಧಿಕಾರ ಅನುಭವಿಸಲು ಮತ್ತೆ ಐದು ವರ್ಷ ಕಾದು ಕುಳಿತುಕೊಳ್ಳಬೇಕಲ್ಲ ಎಂಬಷ್ಟಕ್ಕೆ ಸೀಮಿತ. ಇನ್ನು, ಚುನಾವಣೆ ನಡೆಸಲು ಭಾರೀ ಪ್ರಮಾಣದ ಹಣ ಖರ್ಚಾಗುತ್ತದೆ ಎನ್ನುವುದು ಏಕಕಾಲದಲ್ಲಿ ಚುನಾವಣೆ ನಡೆಯಲಿ ಎನ್ನುವುದಕ್ಕೆ ಬಲವಾದ ಸಮರ್ಥನೆಯಲ್ಲ. ಚುನಾವಣಾ ಆಯೋಗದ ಅಂದಾಜಿನ ಪ್ರಕಾರ ಲೋಕಸಭೆ ಚುನಾವಣೆಗೆ ಸುಮಾರು 8000 ಕೋ. ರೂ. ಖರ್ಚಾಗುತ್ತದೆ.
ಅಂದರೆ ಪ್ರತಿಯೊಬ್ಬ ಮತದಾರನಿಗೆ ಸರಾಸರಿ 27 ರೂಪಾಯಿಯಂತೆ ಖರ್ಚು ಬೀಳುತ್ತದೆ. ಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರಕ್ಕೆ 5 ವರ್ಷಕ್ಕೊಮ್ಮೆ ಇಷ್ಟು ಖರ್ಚು ಮಾಡುವುದು ದೊಡ್ಡ ಹೊರೆಯಾಗದು.
ನಿಜವಾಗಿ ನಾವು ತಲೆಕೆಡಿಕೊಳ್ಳಬೇಕಾದದ್ದು ಚುನಾವಣೆಯಲ್ಲಿ ಚಲಾವಣೆ ಯಾಗುವ ಕಪ್ಪುಹಣದ ಬಗ್ಗೆ. ಚುನಾವಣೆ ಗೆಲ್ಲಲು ಕೋಟಿಗಟ್ಟಲೆ ಖರ್ಚು ಮಾಡುವವರು ಗೆದ್ದು ಬಂದ ಬಳಿಕ ಮರಳಿ ಗಳಿಸಲು ಅಡ್ಡದಾರಿ ಹಿಡಿಯುತ್ತಾರೆ. ಹೀಗೆ ಸಂಗ್ರಹವಾಗುವ ಕಪ್ಪುಹಣವೇ ಅನಂತರ ರಾಜಕೀಯವನ್ನು ನಿರ್ದೇಶಿಸುತ್ತಾ ಹೋಗುತ್ತದೆ. ಏಕಕಾಲದ ಚುನಾವಣೆ ಯಿಂದ ಕಪ್ಪುಹಣದ ಹರಿವನ್ನು ನಿಯಂತ್ರಿಸಲು ಸಾಧ್ಯವಾದರೆ ಪ್ರಯೋಜನ ವಾದೀತು.
ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಅವಿಶ್ವಾಸ ಮತ ಮಂಡಿಸಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಸಾಂವಿಧಾನಿಕ ಹಕ್ಕಿಗೆ ಚ್ಯುತಿಯಾಗುವ ಸಾಧ್ಯತೆಯಿದೆ. ಬಹುಮತ ಇರಲಿ ಇಲ್ಲದಿರಲಿ ಐದು ವರ್ಷಸರಕಾರವನ್ನು ಸಹಿಸಿಕೊಳ್ಳಬೇಕು ಇಲ್ಲವೇ ರಾಷ್ಟ್ರಪತಿಯ ಕೈಗೆ ಚುಕ್ಕಾಣಿಯನ್ನು ನೀಡಬೇಕು. ಈ ಅಂಶಗಳತ್ತಲೂ ಗಮನ ಹರಿಸುವುದು ಅಗತ್ಯ. ಏನೇ ಆದರೂ ಏಕಕಾಲದಲ್ಲಿ ಚುನಾವಣೆ ನಡೆಸುವುದು ಕೆಟ್ಟ ಚಿಂತನೆಯಂತೂ ಅಲ್ಲ. ಆದರೆ ಯಾವ ರೀತಿ ಅದನ್ನು ಸಂವಿಧಾನ ಮತ್ತು ಪ್ರಜಾತಂತ್ರದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಜಾರಿಗೆ ತರಬಹುದು ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳುವ ಅಗತ್ಯವಿದೆ.