Advertisement

NDA: 3ನೇ ಅವಧಿಯಲ್ಲೇ ಒಂದು ದೇಶ-ಒಂದು ಚುನಾವಣೆ ಜಾರಿಯಾಗಲಿದೆ…ಮೈತ್ರಿ ಬೆಂಬಲವಿದೆಯೇ?

01:22 PM Sep 16, 2024 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದೆ. ಏತನ್ಮಧ್ಯೆ ಬಿಜೆಪಿ ಬಹುಮತ ಪಡೆಯದಿದ್ದರೂ ಕೂಡಾ ಎನ್‌ ಡಿಎ ಸರ್ಕಾರದ ಈ ಅವಧಿಯಲ್ಲೇ “ಒಂದು ದೇಶ- ಒಂದು ಚುನಾವಣೆ” ಯನ್ನು ಜಾರಿಗೊಳಿಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Advertisement

60 ವರ್ಷಗಳ ನಂತರ 3ನೇ ಅವಧಿಗೆ ಅಸ್ತಿತ್ವಕ್ಕೆ ಬಂದಿರುವ ಎನ್‌ ಡಿಎ ಸರ್ಕಾರದ ನೀತಿ-ನಿಯಮದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ನಮ್ಮ ಸರ್ಕಾರದ ಆಶಯಗಳೆಲ್ಲವೂ ಈಡೇರಲಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ ಡಿಎ ಸರ್ಕಾರದ 3ನೇ ಅವಧಿ ಭಾನುವಾರ (ಸೆ.15) ನೂರು ದಿನಗಳನ್ನು ಪೂರೈಸಿದೆ. ಸುಮಾರು ಹತ್ತು ವರ್ಷಗಳ ಹಿಂದೆಯೇ ನಿರ್ಧರಿಸಿದ್ದ ನೀತಿಯನ್ನು ಮುಂದುವರಿಸಿದ್ದು, ಅದು ರಕ್ಷಣಾ ಕ್ಷೇತ್ರವಾಗಲಿ, ಬಾಹ್ಯಾಕಾಶ, ವಿದೇಶಾಂಗ, ಗೃಹ ವ್ಯವಹಾರ, ಶಿಕ್ಷಣ, ಡಿಜಿಟಲ್‌ ಇಂಡಿಯಾ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು, ಯುವಕರು, ಬಡವರು ಮತ್ತು ರೈತರ ಮೂಲಭೂತ ಸೌಕರ್ಯಕ್ಕಾಗಿ ವಾರ್ಷಿಕ 11 ಲಕ್ಷ ಕೋಟಿ ವ್ಯಯಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

2014ರಿಂದ ಈವರೆಗೂ ನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದರಲ್ಲೂ ನಮ್ಮ ವಿದೇಶ ನೀತಿ ಬೆನ್ನುಲುಬಾಗಿ ನಿಂತಿದೆ. ಇದು ಈ ಹಿಂದಿನ ಯಾವುದೇ ಸರ್ಕಾರದಲ್ಲಿ ಸಮರ್ಪಕವಾಗಿ ನಡೆದಿಲ್ಲ ಎಂದು ವರದಿ ತಿಳಿಸಿದೆ.

Advertisement

ಮುಂದಿನ ನಡೆ ಏನು?

ಒಂದು ದೇಶ, ಒಂದು ಚುನಾವಣೆಗಾಗಿ ಸಂವಿಧಾನದ ತಿದ್ದುಪಡಿ ಅಗತ್ಯವಿದೆ. ಆದರೆ ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಒಟ್ಟಾಗಿ ನಡೆಸುವುದಾಗಿದೆ. ಈ ವಿಷಯದಲ್ಲಿನ ತಿದ್ದುಪಡಿಗಾಗಿ ರಾಜ್ಯಗಳ ಪಾತ್ರದ ಅಗತ್ಯವಿಲ್ಲ. ಒಂದು ಬಾರಿ ಲೋಕಸಭೆಯಲ್ಲಿ ತಿದ್ದುಪಡಿ ಅಂಗೀಕಾರವಾದರೆ ಸಾಕು. ಎರಡನೇ ಹಂತವಾಗಿ ಲೋಕಸಭೆ-ವಿಧಾನಸಭೆ ಚುನಾವಣೆ ನಡೆಯುವ 100 ದಿನದೊಳಗೆ ನಗರಪಾಲಿಕೆ ಮತ್ತು ಪಂಚಾಯತ್‌ ಚುನಾವಣೆಯನ್ನು ಕೂಡ ನಡೆಸುವ ಇಚ್ಛೆ ಹೊಂದಿರುವುದಾಗಿ ಎನ್‌ ಡಿಎ ಮೂಲಗಳು ತಿಳಿಸಿವೆ. ಈ ಬದಲಾವಣೆಗೆ ಒಟ್ಟು ರಾಜ್ಯಗಳಲ್ಲಿ ಶೇ.50ರಷ್ಟು ರಾಜ್ಯಗಳ ಅನುಮೋದನೆ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನಗಣತಿ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಜಾತಿ ಕಲಂ ಸೇರಿಸುವ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ. ಕೋವಿಡ್‌ 19 ಕಾರಣದಿಂದ 2020ರಲ್ಲಿ ಜನಗಣತಿ ನಡೆದಿರಲಿಲ್ಲ ಎಂದು ವರದಿ ಹೇಳಿದೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳಲ್ಲಿ ಜಯಗಳಿಸಿತ್ತು. ಮೈತ್ರಿ ಪಕ್ಷವಾ ಟಿಡಿಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ ಜತೆಗೂಡಿ ಬಹುಮತ ಪಡೆದಿತ್ತು. ಏತನ್ಮಧ್ಯೆ ಒಂದು ದೇಶ, ಒಂದು ಚುನಾವಣೆಗೆ ಮೈತ್ರಿ ಬೆಂಬಲ ಸಿಗುವುದೇ ಎಂಬುದು ಪ್ರಶ್ನೆಯಾಗಿದೆ. ಆದರೆ ಬಿಜೆಪಿ ಮುಖಂಡರ ಪ್ರಕಾರ, ಈ ಬಗ್ಗೆ ಮೈತ್ರಿ ಪಕ್ಷವು ಜತೆಗಿದ್ದು, ಎಲ್ಲವೂ ಅಂಕೆ-ಸಂಖ್ಯೆಯ ಮೇಲೆ ನಿರ್ಧಾರವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next