ಅವರಿಗೆ ಇವರು ಮೇಕಪ್ ಮಾಡಿದರೆ, ಇವರು ಅವರಿಗೆ ಮೇಕಪ್ ಮಾಡುವ ಮೂಲಕ ಸಿನಿಮಾದ ಬಹುತೇಕ ಕೆಲಸವನ್ನು ತಾವೇ ನಿರ್ವಹಿಸುವ ಮೂಲಕ ಅಂದುಕೊಂಡ ಬಜೆಟ್‌ನಲ್ಲೊಂದು ಸಿನಿಮಾ ಮುಗಿಸಿ, ಇದೀಗ ಈ ಶುಕ್ರವಾರ ಬಿಡುಗಡೆಗೆ ಅಣಿಯಾಗಿದ್ದಾರೆ ಮದರಂಗಿ ಕೃಷ್ಣ ಮತ್ತು ಮಿಲನ ನಾಗರಾಜ್. ಇವರಿಬ್ಬರೂ ಸೇರಿ ನಿರ್ಮಿಸಿರುವ ಚಿತ್ರ “ಲವ್ ಮಾಕ್ಟೇಲ್’. ಮೊದಲ ಬಾರಿಗೆ “ಮದರಂಗಿ’ ಕೃಷ್ಣ ನಿರ್ದೇಶಿಸಿರುವ ಚಿತ್ರವಿದು. ಅವರದೇ ಬ್ಯಾನರ್‌ನ ಸಿನಿಮಾ ಆಗಿದ್ದರಿಂದ, ಖರ್ಚು ಕಡಿಮೆ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ.
ಅಷ್ಟೇ ಅಲ್ಲ, ಸಿನಿಮಾದಲ್ಲಿರುವ ಕೆಲ ಕಲಾವಿದರಿಗೂ ಅವರೇ ಮೇಕಪ್ ಮಾಡಿ, ಮುಂಚಿತವಾಗಿ ಅವರಿಗೆ ಒಂದು ತಿಂಗಳ ಕಾಲ ವರ್ಕ್‌ಶಾಪ್ ಮಾಡಿಸಿ, ನಂತರ ಕ್ಯಾಮೆರಾ ಮುಂದೆ ನಿಲ್ಲಿಸಿ ನಟನೆ ಮಾಡಿಸಿದ್ದಾರೆ. ಈ ಎಲ್ಲಾ ವಿಷಯ ಹೇಳಿಕೊಳ್ಳುವ ಮೂಲಕ ಚಿತ್ರ ಬಿಡುಗಡೆಯ ಸಂತಸ ಹಂಚಿಕೊಳ್ಳಲು ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕ ಕಮ್ ಹೀರೋ “ಮದರಂಗಿ’ ಕೃಷ್ಣ. ಅಂದಹಾಗೆ, ಇದೊಂದು ಪಕ್ಕಾ ಲವ್‌ಸ್ಟೋರಿ ಇರುವ ಸಿನಿಮಾ. ಕೃಷ್ಣ ನಿರ್ದೇಶನದ ಜೊತೆ ನಿರ್ಮಾಣಕ್ಕೂ ಇಳಿದಿದ್ದರಿಂದ, ಅವರೊಂದಿಗೆ ಮಿಲನ ಕೂಡ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ತಮ್ಮದೇ ಸಿನಿಮಾ ಅನ್ನುವ ಕಾರಣಕ್ಕೆ ವಿನಾಕಾರಣ ಖರ್ಚು ಬೇಡ ಅಂತ ಅರಿತು, ಅವರವರೇ ಮೇಕಪ್ ಮಾಡಿ, ಇತರೆ ನಟ,ನಟಿಯರಿಗೂ ಮೇಕಪ್ ಮಾಡಿ ಕೆಲ ಕೆಲಸಗಳನ್ನೂ ನಿಭಾಯಿಸಿ, ಅಲ್ಲೊಂದಷ್ಟು ಖರ್ಚು ಆಗುವುದನ್ನು ಉಳಿಸಿ, ಆ ಹಣವನ್ನು ಮೇಕಿಂಗ್‌ಗೆ ವ್ಯಯಿಸಿದ್ದಾರಂತೆ. “ಲವ್ ಮಾಕ್ಟೇಲ್’ನಲ್ಲಿ ಮೂರು ಘಟ್ಟದ ಪ್ರೀತಿಯ ವಿಷಯ ಹೇಳಿದ್ದಾರಂತೆ. ಕಾಲೇಜು, ಯೌವ್ವನ ಮತ್ತು ಜವಬ್ದಾರಿ ಹುಡುಗನ ಪ್ರೀತಿ ಗೀತಿ ಇತ್ಯಾದಿ ಇರಲಿದ್ದು, ಈಗಿನ ಯೂಥ್‌ಗೊಂದು ಇಷ್ಟವಾಗುವ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ ಕೃಷ್ಣ.
ಚಿತ್ರದಲ್ಲಿ ಮಿಲನ ನಾಗರಾಜ್ ಜೊತೆ ಅಮೃತಾ ಅಯ್ಯಂಗಾರ್, ರಚನಾ, ಧನುಷ್ ಪ್ರಣಾಮ್ ಮೈಸೂರು ರಂಗಭೂಮಿ ಪ್ರತಿಭೆ ಅಭಿಲಾಷ್ ಹಾಗು ಇತರರು ನಟಿಸಿದ್ದಾರೆ. ರಘುದೀಕ್ಷಿತ್ ಸಂಗೀತವಿದ್ದು, ರಾಘ ವೇಂದ್ರ ಕಾಮತ್, ಅರುಣ್‌ಕುಮಾರ್ ಸಾಹಿತ್ಯವಿದೆ. ಶ್ರೀ ಕ್ರೇಜಿಮೈಂಡ್ಸ್ ಸಂಕಲನದ ಜೊತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಕಳಸ, ಮೈಸೂರು, ಉಡುಪಿ ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ.