Advertisement

ನಿಲ್ಲದ ಪ್ರತಿಭಟನೆಯ ಕಿಚ್ಚಿಗೆ ಮತ್ತೂಬ್ಬ ಆಹುತಿ

06:00 AM May 24, 2018 | Team Udayavani |

ಹೊಸದಿಲ್ಲಿ /ಚೆನ್ನೈ: ತಮಿಳುನಾಡಿನ ತೂತುಕಡಿಯಲ್ಲಿ ಸ್ಟಲೈಟ್‌ ತಾಮ್ರ ಘಟಕದ ವಿರುದ್ಧದ ಪ್ರತಿಭಟನೆ ಬುಧವಾರವೂ ಮುಂದುವರಿದಿದ್ದು, ಪೊಲೀಸರ ಗೋಲಿಬಾರಿಗೆ ಮತ್ತೂಬ್ಬ ಅಸುನೀಗಿದ್ದಾನೆ. ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದೇ ವೇಳೆ ತಮಿಳುನಾಡು ಸರಕಾರ, ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್‌ ನೇತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಿದೆ. 

Advertisement

ಪ್ರತಿಭಟನಾಕಾರರ ಮೇಲೆ ಪೊಲೀಸರು ಮಂಗಳ ವಾರ ಗುಂಡು ಹಾರಿಸಿದ್ದನ್ನು ಖಂಡಿಸಿ ತೂತುಕುಡಿಯಲ್ಲಿ ಹೊಸತಾಗಿ ಪ್ರತಿಭಟನೆಗಳು ನಡೆದಿವೆ. ಅವರ ಮೇಲೂ  ಗುಂಡು ಹಾರಿಸಿದ್ದರಿಂದ ವ್ಯಕ್ತಿ ಅಸುನೀಗಿದ್ದಾನೆ. ಹಲವರು ಗಾಯಗೊಂಡಿದ್ದಾರೆ. ಪ್ರತಿಭಟನನಿರತರು ಅಣ್ಣಾ ನಗರ ಎಂಬಲ್ಲಿ ಪೊಲೀಸರತ್ತ ಕಲ್ಲು  ಎಸೆದಿದ್ದಾರೆ. ಅವರನ್ನು ನಿಯಂತ್ರಿಸಲು ಗುಂಡು ಹಾರಿಸಲಾಗಿದೆ. 

ಆಸ್ಪತ್ರೆಗೆ ನುಗ್ಗಲು ಯತ್ನ: ಕೆಲವರು ಸಾರ್ವಜನಿಕ ಆಸ್ಪತ್ರೆಗೆ ನುಗ್ಗಲು ಯತ್ನಿಸಿದ್ದಾರೆ. ಭದ್ರತಾ ಸಿಬಂದಿ ಅವರನ್ನು ತಡೆದಿದೆ. ಅಪರಿಚಿತರು ಪೊಲೀಸ್‌ ಇಲಾಖೆಗೆ ಸೇರಿದ 2 ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. 

ಹೈಕೋಟ್‌ ತಡೆಯಾಜ್ಞೆ: ಸ್ಟರ್ಲೆಟ್‌ನ ತಾಮ್ರ ಉತ್ಪಾದನಾ ಘಟಕದ ಕಾಮಗಾರಿಗೆ ಮದ್ರಾಸ್‌ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕೇಂದ್ರ 4 ತಿಂಗಳ ಒಳಗಾಗಿ ಸಾರ್ವಜನಿಕರ ಜತೆಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಬೇಕೆಂದು ಆದೇಶ ನೀಡಿದೆ. ತಾಮ್ರ ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ಮುಚ್ಚುವಂತೆ ಸಿಪಿಎಂ ಆಗ್ರಹಿಸಿದೆ. ಮಾ.27ರಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ವತಃ ಸ್ಟಲೈಟ್‌ ಕಂಪೆನಿ ತಿಳಿಸಿದೆ. 

ಪ್ರತಿಪಕ್ಷ ನಾಯಕರ ಭೇಟಿ: ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌, ಎಂಡಿಎಂಕೆ ನಾಯಕ ವೈಕೋ ಸೇರಿ ಪ್ರಮುಖರು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕೇಂದ್ರ ಗೃಹ ಇಲಾಖೆ ತಮಿಳುನಾಡು ಸರಕಾರದಿಂದ ಘಟನೆ ಬಗ್ಗೆ ಪೂರ್ಣ ವರದಿ ಕೇಳಿದೆ.

Advertisement

ಡಿಜಿಪಿ, ಮುಖ್ಯ ಕಾರ್ಯದರ್ಶಿಗೆ ನೋಟಿಸ್‌
ಗುಂಡು ಹಾರಿಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರಿಗೆ ನೋಟಿಸ್‌ ನೀಡಿದೆ. ಎರಡು ವಾರಗಳಲ್ಲಿ ಘಟನೆ ಬಗ್ಗೆ ಪೂರ್ಣ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಆರೆಸ್ಸೆಸ್‌ನ ತತ್ವ- ಸಿದ್ಧಾಂತಗಳನ್ನು ತಮಿಳುನಾಡಿನ ಜನತೆ ಪಾಲಿಸುತ್ತಿಲ್ಲ. ಹೀಗಾಗಿ ಅವರನ್ನು ಕೊಲ್ಲಲಾಗುತ್ತಿದೆ. ಗುಂಡು ಹಾರಿಸುವುದರ ಮೂಲಕ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್‌ ರಾಜ್ಯದ ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ. 
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಸುಖಾಸುಮ್ಮನೆ ಆರೆಸ್ಸೆಸ್‌ ಅನ್ನು ಎಳೆದು ತರುವ ಮೂಲಕ ರಾಹುಲ್‌ ತಮ್ಮ ವೈಫ‌ಲ್ಯಗಳನ್ನು ಮರೆಮಾಚುತ್ತಿದ್ದಾರೆ. ಇಂಥವರ ನಾಯಕತ್ವದಲ್ಲಿ ಕಾಂಗ್ರೆಸ್‌ನ ಭವಿಷ್ಯ ಹೇಗಿರಬಹುದು ಎಂದು ನಾನು ಯೋಚಿಸುತ್ತಿದ್ದೇನೆ.
ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next