Advertisement

ಬಳ್ಳಾರಿಯಲ್ಲಿ ಮತ್ತೊಂದು ಕೋವಿಡ್ ಸೋಂಕು ಪ್ರಕರಣ ದೃಢ ; 16ಕ್ಕೆ ಏರಿದ ಸೋಂಕಿತರ ಸಂಖ್ಯೆ

08:35 AM May 12, 2020 | Hari Prasad |

ಬಳ್ಳಾರಿ: ಇಲ್ಲಿನ ಕಂಪ್ಲಿಯ ಶಿಬಿರದಿನ್ನಿಯ 28 ವರ್ಷದ ವಲಸೆ ಕಾರ್ಮಿಕನಲ್ಲಿ ಕೋವಿಡ್ 19 ಸೋಂಕು ಇಂದು ಪತ್ತೆಯಾಗಿದೆ.

Advertisement

ಈತ ಇತ್ತೀಚೆಗಷ್ಟೇ ಬೆಂಗಳೂರಿನಿಂದ ಬಳ್ಳಾರಿಗೆ ಆಗಮಿಸಿದ್ದ. ಈತನ ಜೊತೆಯಲ್ಲಿ ನಗರಕ್ಕೆ ಆಗಮಿಸಿದ್ದ ಸಹ ಪ್ರಯಾಣಿಕರನ್ನು ಕ್ವಾರೆಂಟೈನ್ ಮಾಡಲು ಜಿಲ್ಲಾಡಳಿತ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಿಂದ ಬಂದಿದ್ದ ಕಂಪ್ಲಿಯ ಶಿಬಿರದಿನ್ನಿಯ ಮಾರುತಿ ಕಾಲೋನಿ ನಿವಾಸಿಯಾಗಿರುವ 28 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ

ಈ ಕುರಿತು ಮೇ 12ರ ಮೀಡಿಯಾ ಬುಲೆಟಿನ್‌ನಲ್ಲಿ ಅಧಿಕೃತ ಘೋಷಣೆ ಮಾಡಲೊಂದೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸೋಂಕಿತನನ್ನು ಬಳ್ಳಾರಿಯ ಕೋವಿಡ್ (ಜಿಲ್ಲಾ) ಆಸ್ಪತ್ರೆಗೆ ದಾಖಲಿಸಕಾಗಿದ್ದು ಆತನಿಗೆ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಸೋಂಕಿತನಿಗೆ ತಾಯಿ, ಪತ್ನಿ, ಮಗು ಇದ್ದಾರೆ ಎಂದು ತಿಳಿದು ಬಂದಿದೆ. ಇವರೆಲ್ಲರನ್ನೂ ಕ್ವಾರೆಂಟೈನ್ ನಲ್ಲಿ ಇರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಸೋಂಕಿತ ವ್ಯಕ್ತಿಯು ಕಳೆದ ಮೇ 5ರಂದು ಬೆಂಗಳೂರಿನಿಂದ ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಸರ್ಕಾರಿ ಬಸ್‌ನಲ್ಲಿ ಬಂದಿದ್ದ.

Advertisement

ಅಲ್ಲಿಂದ ಆಟೋ ಮೂಲಕ ಕಂಪ್ಲಿಯ ಶಿಬಿರದಿನ್ನಿಯ ಮಾರುತಿ ನಗರಕ್ಕೆ ಹೋಗಿದ್ದಾನೆ. ಗಂಗಾವತಿಯಲ್ಲಿ ಸೋಂಕಿತನನ್ನು ಇಳಿಸಿದ ಸರ್ಕಾರಿ ಬಸ್, ಅಲ್ಲಿಂದ ಮುಂದೆ ಕೊಪ್ಪಳಕ್ಕೆ ಹೋಗಿದೆ.

ಅಲ್ಲದೇ, ಸೋಂಕಿತನೊಂದಿಗೆ ಸರ್ಕಾರಿ ಬಸ್‌ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದಿದ್ದ 28 ಸಹ ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

16ಕ್ಕೇರಿದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ
ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 15 ಕೋವಿಡ್ ಸೋಂಕಿನ ಪ್ರಕರಣಗಳಿದ್ದು, ಕಂಪ್ಲಿಯ ಈ ಹೊಸ ಪ್ರಕರಣ ಸೇರಿ ಇದೀಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 16ಕ್ಕೆ ಏರಿದಂತಾಗಿದೆ.

ಹೊಸಪೇಟೆಯ ಒಂದೇ ಕುಟುಂಬದ 11 ಜನರ ಪೈಕಿ ಈಗಾಗಲೇ 10 ಜನರು ಈಗಾಗಲೇ ಸೋಂಕಿನಿಂದ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಜತೆಗೆ ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದ ವ್ಯಕ್ತಿಯು ಸಹ ಗುಣಮುಖರಾಗಿದ್ದಾರೆ.

ಇದೀಗ ಬಳ್ಳಾರಿಯ ಕೌಲ್‌ಬಜಾರ್‌, ಸಂಡೂರು ತಾಲೂಕು ಕೃಷ್ಣನಗರ, ಸಿರುಗುಪ್ಪ ತಾಲೂಕು ಎಚ್.ಹೊಸಳ್ಳಿ, ಕಂಪ್ಲಿ, ಹೊಸಪೇಟೆಗಳ ತಲಾ ಒಬ್ಬರು ಸೋಂಕಿತರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಐದು ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next