Advertisement
ಬಂಟ್ವಾಳ ತಾಲೂಕು ಕಸಬಾ ಗ್ರಾಮದ ಮಹಿಳೆ ಎ. 18ರಂದು ಮಧ್ಯಾಹ್ನ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯಿಂದ ನಿರ್ದೇಶಿಸಲಾಗಿತ್ತು. ಅವರು ಕೆಲವು ವರ್ಷಗಳಿಂದ ಅಸ್ತಮಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಮಧುಮೇಹದಿಂದಲೂ ಬಳಲುತ್ತಿದ್ದಾರೆ.
ಮಂಗಳವಾರ ಒಟ್ಟು 47 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬಂದಿದ್ದು ಓರ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 429 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 31 ಮಂದಿ ಗೃಹ ನಿಗಾದಲ್ಲಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
ಜಿಲ್ಲೆಯಲ್ಲಿ ಮೊದಲ ಪ್ರಕರಣ ಮಾ. 22ರಂದು ದೃಢಪಟ್ಟಿದ್ದು, ಬುಧವಾರಕ್ಕೆ 1 ತಿಂಗಳಾಯಿತು. ದುಬಾೖಯಿಂದ ಮಾ. 19ರಂದು ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಭಟ್ಕಳ ಮೂಲದ 22 ವರ್ಷದ ಯುವಕನಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ. 22ರಂದು ಆತನ ಗಂಟಲ ದ್ರವ ಮಾದರಿ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಸೋಂಕು ದೃಢಪಟ್ಟಿತ್ತು.
Advertisement
ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ. ಈ ಪೈಕಿ 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದರೆ, ಓರ್ವರು ಮೃತಪಟ್ಟಿದ್ದಾರೆ. ಮಂಗಳವಾರ ಕೋವಿಡ್ 19 ವೈರಸ್ ದೃಢಪಟ್ಟ ಮಹಿಳೆ ಸಹಿತ ಮೂವರು ಆಸ್ಪತ್ರೆಯಲ್ಲಿದ್ದಾರೆ.
ಬಂಟ್ವಾಳದಲ್ಲಿ 4ನೇ ಪ್ರಕರಣಮಂಗಳವಾರ ಬಂಟ್ವಾಳದ 67 ವರ್ಷದ ಮಹಿಳೆಯೋರ್ವರಿಗೆ ಕೋವಿಡ್ 19 ವೈರಸ್ ಸೋಂಕು ದೃಢಪಡುವ ಮೂಲಕ ತಾಲೂಕಿನಲ್ಲಿ ಸೋಂಕು ದೃಢಪಟ್ಟ 4ನೇ ಪ್ರಕರಣ ಇದಾಗಿದೆ. ಪ್ರಾರಂಭದಲ್ಲಿ ಸಜೀಪನಡುವಿನ ಮಗುವಿನಲ್ಲಿ ಸೋಂಕು ಕಂಡುಬಂದಿರುವ ಕುರಿತು ಜಿಲ್ಲಾಡಳಿತ ತಿಳಿಸಿದ್ದು, ಬಳಿಕ ತುಂಬೆಯ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಎರಡೇ ದಿನಗಳ ಅಂತರದಲ್ಲಿ ಬಂಟ್ವಾಳ ಪೇಟೆಯ ಇಬ್ಬರು ನೆರೆಕರೆಯ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಓರ್ವ ಮಹಿಳೆ ಸೋಂಕು ಖಚಿತಗೊಳ್ಳುವ ಮುನ್ನವೇ ಸಾವನ್ನಪ್ಪಿದ್ದರು. ಪ್ರಾರಂಭದಲ್ಲಿ ಸೋಂಕು ದೃಢಪಟ್ಟಿದ್ದ ಮಗು ಹಾಗೂ ಮತ್ತೊಬ್ಬರು ಆಸ್ಪತ್ರೆಯಿಂದ ಮನೆಗೆ ಆರೋಗ್ಯವಾಗಿ ಮರಳಿದ್ದಾರೆ. ಪ್ರಸ್ತುತ ಮಹಿಳೆಯೋರ್ವರು ಮಾತ್ರ ಮಂಗಳೂರಿನ ಕೋವಿಡ್ (ವೆನ್ಲಾಕ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಗು ಬಂದೋಬಸ್ತು
ಸೋಂಕು ದೃಢಪಟ್ಟಿರುವ ಮಹಿಳೆ ಮನೆಯಲ್ಲಿ ಪತಿ, ಪುತ್ರಿ, ಪುತ್ರ ಹಾಗೂ ಮೊಮ್ಮಗಳ ಜತೆ ನೆಲೆಸಿದ್ದಾರೆ. ಪುತ್ರ ನೆರೆಮನೆಯ ಮಹಿಳೆ ಮೃತಪಟ್ಟ ದಿನವೇ ಸ್ವ-ಇಚ್ಛೆಯಿಂದ ಕ್ವಾರಂಟೈನ್‌ಗೆ ದಾಖಲಾಗಿದ್ದು, ಉಳಿದವರನ್ನು ಮಂಗಳವಾರ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಲಾಗಿದೆ. ಯಾರಲ್ಲಾದರೂ ಸೋಂಕು ಪತ್ತೆ ಯಾದರೆ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಬೇಕೆನ್ನುವುದು ನಿಯಮ. ಆದರೆ ಮಹಿಳೆಯೊಬ್ಬರು ಕೋವಿಡ್ 19 ವೈರಸ್ ನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಕಸ್ಬಾ ಗ್ರಾಮದ ನಿರ್ದಿಷ್ಟ ಪ್ರದೇಶ ಈಗಾಗಲೇ ಸೀಲ್‌ಡೌನ್ ಆಗಿದ್ದು, ಅದನ್ನೀಗ ಮತ್ತಷ್ಟು ಬಿಗುಗೊಳಿಸಲಾಗಿದೆ. ಜತೆಗೆ ಹಾಲಿ ಸೋಂಕು ದೃಢಪಟ್ಟಿರುವ ಮಹಿಳೆಯ ಟ್ರಾವೆಲ್ ಹಿಸ್ಟರಿಯನ್ನು ಇಲಾಖೆ ಕಲೆ ಹಾಕುತ್ತಿದೆ.