Advertisement

ರಾಜ್ಯದಲ್ಲಿ ಒಂದು ಲಕ್ಷ ಸಮೀಪಿಸುತ್ತಿರುವ ಸೋಂಕು ಪ್ರಕರಣಗಳು

10:11 AM Jul 27, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ನಿರಂತರ ಏರುಗತಿಯಲ್ಲಿದ್ದು, ಸೋಮವಾರ ಒಟ್ಟಾರೆ ಪ್ರಕರಣಗಳು ಲಕ್ಷ ಗಡಿ ದಾಟುವ ಸಾಧ್ಯತೆಗಳಿವೆ.
ರವಿವಾರ 5,199 ಮಂದಿಗೆ ಸೋಂಕು ತಗುಲಿದ್ದು, 82 ಮಂದಿ ಸಾವಿಗೀಡಾಗಿದ್ದಾರೆ. ಜತೆಗೆ 2,088 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಪ್ರಕರಣಗಳು 96,141ಕ್ಕೆ, ಸಾವಿನ ಸಂಖ್ಯೆ 1,878ಕ್ಕೆ ಹಾಗೂ ಗುಣಮುಖ ರಾದವರ ಸಂಖ್ಯೆ 35,838ಕ್ಕೆ ಏರಿಕೆಯಾಗಿದೆ.

Advertisement

ಒಟ್ಟಾರೆ 12 ಸಾವಿರ ರ್ಯಾಪಿಡ್‌ ಆ್ಯಂಟಿಜೆನ್‌, 21 ಸಾವಿರ ಆರ್‌ಟಿಪಿಸಿಆರ್‌ ಸೇರಿ ಒಟ್ಟು 33,565 ಸೋಂಕು ಪರೀಕ್ಷೆಗಳು ರವಿವಾರ ನಡೆದಿವೆ. ಈ ಪೈಕಿ 5,199 ಪಾಸಿಟಿವ್‌ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.14 ಇದೆ. ಪರೀಕ್ಷೆಗೊಳಪಟ್ಟ 100 ಮಂದಿಯಲ್ಲಿ 14 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 1,950 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 29 ಮಂದಿ ಸೋಂಕಿತರ ಸಾವು ಸಂಭವಿಸಿದೆ.

ವಾರದಿಂದ ವಾರಕ್ಕೆ ಏರಿಕೆ
ಜುಲೈ ಮೊದಲ ವಾರ ನಿತ್ಯ ಸರಾಸರಿ 1,500, ಎರಡನೇ ವಾರ 2,500, 3ನೇ ವಾರ 3,500 ಹಾಗೂ 4ನೇ ವಾರ 4,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನಿರಂತರ ವಾಗಿ ನಾಲ್ಕನೇ ದಿನ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ವಾರದಲ್ಲಿಯೇ 32 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳು ಒಂದು ಲಕ್ಷದ ಗಡಿಗೆ ಸಮೀಪಿಸಿವೆ. ಸೋಮ ವಾರವೂ ಸೋಂಕಿನ ತೀವ್ರತೆ ಇದೇ ರೀತಿ ಮುಂದುವರಿದರೆ ಪ್ರಕರಣ ಗಳು ಲಕ್ಷದಾಟುವ ಸಾಧ್ಯತೆಗಳಿವೆ. ಸದ್ಯ ಮಹಾ ರಾಷ್ಟ್ರ, ತಮಿಳುನಾಡು ಹಾಗೂ ದಿಲ್ಲಿಯಲ್ಲಿ ಮಾತ್ರ ಲಕ್ಷಕ್ಕೂ ಅಧಿಕ ಪ್ರಕರಣಗಳಿವೆ.

ಅತಿ ಹೆಚ್ಚು ಸಕ್ರಿಯ ಪ್ರಕರಣಗಳು
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಒಂದೆಡೆ ಸೋಂಕಿನ ಬೆಳವಣಿಗೆ ದರ (ಶೇ.8) ಹೆಚ್ಚಿದೆ, ಇನ್ನೊಂದೆಡೆ ಗುಣಮುಖ ದರ (ಶೇ.37) ಕಡಿಮೆ ಇದೆ. ಇದರಿಂದ ಸಕ್ರಿಯ ಸೋಂಕು ಪ್ರಕರಣಗಳು (ಪಾಸಿಟಿವ್‌ ಕೇಸ್‌) ಹೆಚ್ಚಳವಾಗುತ್ತಿದ್ದು, ಸದ್ಯ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು 58,417 ಕರ್ನಾಟಕದಲ್ಲಿವೆ. ಉಳಿದಂತೆ ಮಹಾರಾಷ್ಟ್ರ (1.45 ಲಕ್ಷ) ಮೊದಲ ಸ್ಥಾನದಲ್ಲಿ, ತಮಿಳುನಾಡು (53 ಸಾವಿರ) ಮೂರನೇ ಸ್ಥಾನದಲ್ಲಿವೆ. ಒಟ್ಟಾರೆ ಸೋಂಕು ಪ್ರಕರಣಗಳು ಹಾಗೂ ಸಾವಿನಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಸದ್ಯ 58,417 ಸೋಂಕಿತರು ಆಸ್ಪತ್ರೆ, ಕೊರೊನಾ ಕೇರ್‌ ಸೆಂಟರ್‌ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 632 ಸೋಂಕಿತರು ತುರ್ತು ನಿಗಾ ಘಟಕದಲ್ಲಿದ್ದಾರೆ.

ಸಚಿವ ಆನಂದ ಸಿಂಗ್‌ಗೆ ಕೋವಿಡ್
ಹೊಸಪೇಟೆ: ಅರಣ್ಯ ಸಚಿವ ಆನಂದ ಸಿಂಗ್‌ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಇತ್ತೀಚೆಗೆ ವಾಹನ ಚಾಲಕನಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರು, ಅವರ ಸಂಪರ್ಕದಲ್ಲಿದ್ದ ಆಪ್ತ ಸಹಾಯಕರು, ಕಚೇರಿ ಸಿಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್‌ ಸಹಿತ ಹಲವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದರು. ಚಾಲಕನಿಗೆ ಸೋಂಕು ದೃಢಪಡುತ್ತಿದ್ದಂತೆ ಸಚಿವರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶನಿವಾರ ಸೋಂಕು ದೃಢಪಟ್ಟಿದೆ.

Advertisement

ಬಳ್ಳಾರಿಯಲ್ಲಿ ; 500ಕ್ಕೂ ಹೆಚ್ಚು ಪ್ರಕರಣ
ಬಳ್ಳಾರಿಯಲ್ಲಿ ಬರೋಬ್ಬರಿ 579 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಪ್ರಕರಣಗಳು ನಾಲ್ಕು ಸಾವಿರ ಗಡಿ ದಾಟಿವೆ. ಬೆಂಗಳೂರು ಹೊರತುಪಡಿಸಿದರೆ ಇದೇ ಮೊದಲ ಬಾರಿ ಜಿಲ್ಲೆಯೊಂದರಲ್ಲಿ ಒಂದೇ ದಿನ 500ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳು, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಹಾಸನ, ಬೆಳಗಾವಿ, ಕಲಬುರಗಿ, ವಿಜಯಪುರ ಹಾಗೂ ರಾಯಚೂರು ಸೇರಿ ಎಂಟು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಗುಣಮುಖ ಪ್ರಮಾಣ ಶನಿವಾರಕ್ಕಿಂತ ತುಸು ಇಳಿಕೆ ಕಂಡಿದೆ. ರವಿವಾರ 2,088 ಮಂದಿ ಗುಣಮುಖರಾಗಿದ್ದು, ಈ ಪೈಕಿ ಬೆಂಗಳೂರು ಅತಿ ಹೆಚ್ಚು 647 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next