ಥಾಣೆ : ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ನಡುವೆ ಇಲ್ಲಿನ ಹೌಸಿಂಗ್ ಸೊಸೈಟಿಯೊಂದರ ಆವರಣ ಗೋಡೆ ನಿನ್ನೆ ಮಧ್ಯರಾತ್ರಿಯ ಬಳಿಕ ಕುಸಿದು ಬಿದ್ದ ದುರಂತದಲ್ಲಿ 35ರ ಹರೆಯದ ಓವ್ಯ ವ್ಯಕ್ತಿ ಮೃತಪಟ್ಟು ಇನ್ನಿಬ್ಬರು ಗಂಭಿರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ನಗರದ ಘೋಡ್ ಬಂದರ್ ರಸ್ತೆಯಲ್ಲಿನ ಪಾಟ್‌ಲೀಪಾಡ ಪ್ರದೇಶದಲ್ಲಿನ ಹೌಸಿಂಗ್ ಸೊಸೈಟಿಯ 30 ಅಡಿ ಉದ್ದ ಕಾಂಪೌಂಡ್ ಗೋಡೆಯ ಅಲ್ಲೇ ಆಚೆ ಬದಿಯಲ್ಲಿದ್ದ ಮನೆಗಳ ಮೇಲೆ ಉರುಳಿ ಬಿತ್ತು. ಪರಿಣಾಮವಾಗಿ ಪ್ರಕಾಶ್ ಸಖಾರಾಮ್ ವಾವಳೆ ಎಂಬವರು ಸ್ಥಳದಲ್ಲೇ ಮೃತಪಟ್ಟರು.
29ರ ಹರೆಯದ ಓರ್ವ ಮಹಿಳೆ ಮತ್ತು 10 ವರ್ಷ ಪ್ರಾಯದ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಕಾಳ್ವಾದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಪೌಂಡ್ ಗೋಡೆಯ ಆಚೆ ಬದಿಯಲ್ಲಿರುವ ನಾಲ್ಕು ಮನೆಗಳಿಗೆ ವ್ಯಾಪಕ ಹಾನಿಯಾಗಿದೆ. ಇನ್ನೂ ಐದು ಮನೆಗಳಲ್ಲಿ ವಾಸವಾಗಿರುವವರನ್ನು ಮುನ್ನೆಚ್ಚರಿಕೆಯ ಕಾರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಥಾಣೆ ಮುನಿಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿನಾಶ ನಿರ್ವಹಣೆ ವಿಭಾಗದ ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ.
ಹೌಸಿಂಗ್ ಸೊಸೈಟಿ ಆವರಣದ ಕುಸಿದ ಗೋಡೆಯ ಉಳಿದ ಭಾಗ ಇನ್ನುಳಿದಿರುವ ಮನೆಗಳಿಗೆ ಅಪಾಯಕಾರಿಯಾಗಿರುವ ಕಾರಣ ಅದನ್ನು ಅಗ್ನಿ ಶಾಮಕ ಮತ್ತು ಪೌರ ಕಾರ್ಮಿಕರ ಜಂಟಿ ಕಾರ್ಯಾಚರಣೆಯಲ್ಲಿ ಕೆಡವಲಾಗಿದೆ ಎಂದು ಕದಂ ತಿಳಿಸಿದರು.