Advertisement
ಪ್ಲಾಸ್ಟಿಕ್ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಮರ ಸಂಘಟನ ಸಮಿತಿ ಅಮರಮುಟ್ನೂರು – ಪಟ್ನೂರು ಇದರ ಆಶ್ರಯದಲ್ಲಿ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಬಾಳಿಲ ಗ್ರಾ.ಪಂ. ಸಹಕಾರದೊಂದಿಗೆ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಯಿತು.
ಬಾಳಿಲ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ 140 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗಿ 160 ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು. ಸಂಗ್ರಹವಾದ ಪ್ಲಾಸ್ಟಿಕ್‌ಗಳನ್ನು ಸಂಘಟನ ಸಮಿತಿ ಸದಸ್ಯರೇ ಬೇರ್ಪಡಿಸಿ ಪಂಚಾಯತ್‌ಗೆ ಒಪ್ಪಿಸಿದರು. ಜಾಗೃತಿಗಾಗಿ ಅಕ್ಕಿ ವಿತರಣೆ
ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ಮತ್ತು ನಮಗೆ ಬೇಡವಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಯಾವ ರೀತಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಬಹುದು ಎನ್ನುವ ಕುರಿತು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅಮರ ಸಂಘಟನ ಸಮಿತಿಯ ಕಾರ್ಯಕರ್ತರ ಪರಿಸರ ಕಾಳಜಿ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಮಕ್ಕಳು ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ತಂದು ಪ್ಲಾಸ್ಟಿಕ್ ವಿರುದ್ಧ ಜಾಗೃತಿಯ ಕಾರ್ಯದಲ್ಲಿ ಕೈ ಜೋಡಿಸಿದರು. ಪ್ಲಾಸ್ಟಿಕ್ ನಿರ್ಮೂಲನೆಯಾದರೆ ಗ್ರಾಮವೂ ಸ್ವತ್ಛವಾಗುತ್ತದೆ ಎಂಬ ಸಂದೇಶ ಸಾರುವುದಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
Related Articles
ಒಂದು ಕೆ.ಜಿ. ಪ್ಲಾಸ್ಟಿಕ್‌ಗೆ ಒಂದು ಕೆ.ಜಿ. ಅಕ್ಕಿ ವಿತರಣೆ ಘೋಷಣೆಯೊಂದಿಗೆ ಈ ವಿನೂತನ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಸಂಘಟಿಸಲಾಗಿತ್ತು. ಮೊದಲ ಬಾರಿಗೆ ರಾಮಕುಂಜದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇದೇ ರೀತಿಯ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದ ಸಂಘಟನ ಸಮಿತಿಯವರು 2ನೇ ಬಾರಿಗೆ ಬಾಳಿಲ ಶಾಲೆಯಲ್ಲಿ ಈ ಕಾರ್ಯಕ್ರಮ ಸಂಘಟಿಸಿದರು. ಒಂದು ಕೆ.ಜಿ.ಗಿಂತ ಕಡಿಮೆ ಪ್ಲಾಸ್ಟಿಕ್ ತಂದವರಿಗೂ ಬಹುಮಾನವಾಗಿ ಅಕ್ಕಿ ವಿತರಿಸಲಾಯಿತು. ಕೆಲವು ವಿದ್ಯಾರ್ಥಿಗಳು 2-3 ಕೆ.ಜಿ.ಯಷ್ಟು ಅಕ್ಕಿಯನ್ನು ಬಹುಮಾನವಾಗಿ ಪಡೆದರು. ಕಾರ್ಯಕ್ರಮದಲ್ಲಿ ಒಟ್ಟು 160 ಕೆ.ಜಿ. ಅಕ್ಕಿ ವಿತರಿಸಲಾಯಿತು.
Advertisement
ಅಮರ ಸಂಘಟನ ಸಮಿತಿ ಅಧ್ಯಕ್ಷ ಶಿವಪ್ರಸಾದ್ ದೊಡ್ಡಿಹಿತ್ಲು ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಮೋಹನ್ ಕುಮಾರ್ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಬಳಕೆಯನ್ನು ಕಡಿಮೆ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಬಾಳಿಲ ಗ್ರಾ.ಪಂ. ಸದಸ್ಯ ಯು. ರಾಧಾಕೃಷ್ಣ ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವರಾಮ ಶಾಸ್ತ್ರಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವೈ.ಬಿ. ಸುಬ್ಬಯ್ಯ, ಗ್ರಾ.ಪಂ. ಸದಸ್ಯೆ ವಾರಿಜಾ ಉಪಸ್ಥಿತರಿದ್ದರು. ಅಮರ ಸಂಘಟನ ಸಮಿತಿ ಗೌರವಾಧ್ಯಕ್ಷ ರಜನಿಕಾಂತ್ ಉಮ್ಮಡ್ಕ ಪ್ರಸ್ತಾವಿಸಿದರು. ಮಿಥುನ್ ಕೆರೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು.
ಜಾಗೃತಿಗಾಗಿ ಕಾರ್ಯಕ್ರಮಎಲ್ಲ ವರ್ಗದ, ಎಲ್ಲ ವಯೋಮಾನದ 60 ಸಮಾನ ಮನಸ್ಕರು ನಮ್ಮ ಸಂಘಟನ ಸಮಿತಿಯಲ್ಲಿದ್ದಾರೆ. ಪ್ಲಾಸ್ಟಿಕ್ ನಿರ್ಮೂಲನೆಗೆ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಈ ರೀತಿಯ ವಿಶಿಷ್ಟ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಆಯೋಜಿಸಿದ್ದೇವೆ. ಸ್ವತ್ಛತೆ, ಶೈಕ್ಷಣಿಕ, ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ.
– ರಜನಿಕಾಂತ್,
ಗೌರವಾಧ್ಯಕ್ಷ, ಅಮರ ಸಂಘಟನ ಸಮಿತಿ ಶ್ಲಾಘನೀಯ ಕಾರ್ಯ
ಪ್ಲಾಸ್ಟಿಕ್ ನಿರ್ಮೂಲನೆಗೆ ಪಂಚಾಯತ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಮಾಡದೆ ಪರ್ಯಾಯ ವಿಧಾನಗಳನ್ನು ಅನುಸರಿಸಬೇಕು. ಪ್ಲಾಸ್ಟಿಕ್ ಸ್ವತ್ಛತೆಗೆ ಮಾರಕವಾಗಿದೆ. ಮಕ್ಕಳಲ್ಲಿ ಪ್ಲಾಸ್ಟಿಕ್ ನಿಮೂಲನೆಯ ಅರಿವು ಮೂಡಿಸುವ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ.
– ಯು. ರಾಧಾಕೃಷ್ಣ ರಾವ್, ಗ್ರಾ.ಪಂ. ಸದಸ್ಯ – ಉಮೇಶ್ ಮಣಿಕ್ಕಾರ