ಮೊನ್ನೆ ಹೀಗೆ ಸುಮ್ನೆ ಕೂತಿದ್ದೆ. ಬೇಜಾರಾಗ್ತಿತ್ತು. ಹಾಗಾಗಿ ಯಾವುದಾದ್ರೂ ಪುಸ್ತಕ ಓದೋಣ ಅದ್ಕೊಂಡು ಪುಸ್ತಕಗಳನ್ನೆಲ್ಲಾ ಹೊರ ತೆಗೆದೆ. ಆ ಪುಸ್ತಕಗಳ ಮಧ್ಯೆ ನನ್ನ ಹತ್ತನೇ ಕ್ಲಾಸ್‌ನ ಆಟೋಗ್ರಾಫ್ ಬುಕ್ ಕೂಡ ಇತ್ತು. ಯಾಕೋ ಅದನ್ನೇ ಓದೋಣ ಅನ್ನಿಸ್ತು. ಸರಿ ಅಂತ ಉಳಿದ ಪುಸ್ತಕಗಳನ್ನು ಎತ್ತಿಟ್ಟು ಆಟೋಗ್ರಾಫ್ ಬುಕ್ ಕೈಗೆ ತಗೊಂಡೆ. ಆಟೋಗ್ರಾಫ್ ಬುಕ್ ತೆರೆದಂತೆ ನನ್ನ ಹೈಸ್ಕೂಲ್‌ನ ನೆನಪುಗಳು ತೆರೆದುಕೊಂಡವು.
ಹೈಸ್ಕೂಲ್‌ನ ಕೊನೆಯ ಘಟ್ಟ ಹತ್ತನೇ ಕ್ಲಾಸ್ ತಲುಪಿದ ಹೆಚ್ಚಿನ ವಿದ್ಯಾರ್ಥಿಗಳು ಆಟೋಗ್ರಾಫ್ ಬುಕ್ ತಂದು ಫ್ರೆಂಡ್ಸ್ ಹತ್ರ ಮೆಸೇಜ್ ಸಹಿತ ಆಟೋಗ್ರಾಫ್ ತಗೋಳ್ಳೋರು. ನಾನು ಹತ್ತನೇ ಕ್ಲಾಸ್‌ನಲ್ಲಿದ್ದಾಗ ನನ್ನ ಕೆಲವರು ಫ್ರೆಂಡ್ಸ್ ಮಧ್ಯ ವಾರ್ಷಿಕ ರಜೆ ಮುಗ್ಸಿ ನಮ್ಗೆಲ್ಲಾ ಕೊಟ್ಟು “ಅದರಲ್ಲಿ ಬರೀರಿ’ ಅನ್ನೋದಕ್ಕೆ ಶುರು ಮಾಡಿದ್ರು. ಆಗ ನನಗೂ ಆಟೋಗ್ರಾಫ್ ಬುಕ್ ಮಾಡ್ಬೇಕು ಅನ್ನಿಸ್ತು. ತಡ ಮಾಡದೆ ನಾನು ಅಂದು ಶಾಲೆ ಮುಗ್ಸಿ ಮನೆಗೆ ಬಂದವಳೇ ಅಮ್ಮನ ಹತ್ರ ಹಣ ಕೇಳಿ ಸೀದಾ ಆಟೋಗ್ರಾಫ್ ಬುಕ್ ತಗೋಳ್ಳೋಕೆ ಅಂಗಡಿಗೆ ಹೊರಟೆ. ನಾನು ಹೋದ ಅಂಗಡಿಲೀ ಇದ್ದಿದ್ದೆ ಮೂರು ಆಟೋಗ್ರಾಫ್ ಬುಕ್. ಮೂರೂ ಮೂರು ತರಹದ ಬುಕ್‌ಗಳು. ಅದರಲ್ಲಿ ನನಗೆ ಒಂದು ಬುಕ್ ತುಂಬಾ ಹಿಡಿಸ್ತು. ಕಾರಣ ಆ ಬುಕ್ ಮೇಲೆ “ಫ್ರೆಂಡ್ಸ್ ಫೋರ್ ಎವರ್’ ಅಂತ ದೊಡ್ಡದಾಗಿ ಬರೆದಿತ್ತು. ಮತ್ತು ಅದರಲ್ಲಿ ತುಂಬಾ ಪೇಜ್‌ಗಳಿದುÌ. ಆ ಬುಕ್ ತಗೊಂಡೆ. ಬುಕ್ ತಗೊಂಡ್ರೆ ಅಷ್ಟೇ ಸಾಕಾ? ಅದಕ್ಕೆ ಹಚ್ಚೋಕೆ ತರಹ ತರಹದ ಸ್ಟಿಕ್ಕರ್‌ಗಳೂ ಬೇಕಲ್ವಾ? ಅದನ್ನೂ ತಗೊಂಡು ಮನೆಗೆ ಬಂದೆ.
ಮನೆಗೆ ಬಂದವಳೇ ಆಟೋಗ್ರಾಫ್ಗೆ ಮೇಕಪ್ ಮಾಡೋಕೆ ಶುರುಮಾಡ್ದೆ. ಮೊದಲು ಫಸ್ಟ್ ಪೇಜ್‌ನಲ್ಲಿ ನನ್ನ ಹೆಸರನ್ನು ಸುಂದರವಾಗಿ ಬರೀಬೇಕು. ನನಗೆ ಮೊದಲಿನಿಂದಲೂ ಯಾವುದೇ ನೋಟ್‌ಬುಕ್ ತಗೊಂಡ್ರು ಅದರ ಫಸ್ಟ್ ಪೇಜ್‌ನಲ್ಲಿ ಚಿತ್ತಿಲ್ಲದೆ ಬರೆಯೋ ಖಯಾಲಿ. ನೋಟ್ಸ್‌ನ ಫಸ್ಟ್ ಪೇಜ್‌ನಲ್ಲಿ ಬರೆಯೋವಾಗ ಅಕಸ್ಮಾತ್ ಚಿತ್ತಾದ್ರೆ ಆ ಪೇಜ್ ಹರಿದು ಬೇರೆ ಪೇಜ್‌ನಲ್ಲಿ ಚಿತ್ತಿಲ್ಲದೆ ಪುನಃ ಬರೀತಿದ್ದೆ. ಆದರೆ ಆಟೋಗ್ರಾಫ್ ಬುಕ್ ಹಾಗಿರಲ್ಲ. ಮೊದಲ ನಾಲ್ಕೈದು ಪುಟಗಳು ಬೇರೆ ಬೇರೆ ರೀತಿ ಇರುತ್ತೆ. ಹಾಗಾಗಿ ಚಿತ್ ಆಗದ ಹಾಗೆ ಎಚ್ಚರ ವಹಿಸಿ ಬರೀಬೇಕಿತ್ತು. ಮೊದಲು ಪೆನ್ಸಿಲ್‌ನಲ್ಲಿ ಬರೆದು ನಂತರ ಅದನ್ನ ಶೈನಿಂಗ್ ಪೆನ್ ಮೂಲಕ ತಿದ್ದಿದೆ. ಕೊನೆಗೂ ಚಿತ್ತಿಲ್ಲದೆ ಬರೆಯೋದ್ರಲ್ಲಿ ಯಶಸ್ವಿ ಆದೆ. ತಂದಿದ್ದ ಸ್ಟಿಕ್ಕರ್‌ನೆಲ್ಲಾ ಪ್ರತಿಯೊಂದು ಪೇಜ್‌ನಲ್ಲೂ ಹಚ್ಚಿದೆ. ಮರುದಿನ ಶಾಲೆಗೆ ಹೋಗಿ ಎಲ್ಲಾ ಫ್ರೆಂಡ್ಸ್‌ಗೆ, ಟೀಚರ್‌ಗೆ ಆಟೋಗ್ರಾಫ್ ಬುಕ್ ಕೊಟ್ಟೆ. ಅವರೆಲ್ಲಾ ಪ್ರೀತಿಯಿಂದಾನೇ ಅದರಲ್ಲಿ ಬರೆದು ವಿಶ್ ಮಾಡಿದ್ರು.
ಮೊದಲ ಪೇಜ್‌ಗೆ ಇಷ್ಟೆಲ್ಲ ನೆನಪಾಯ್ತು. ಮುಂದೆ ಒಂದೊಂದು ಪೇಜ್ ಓದಿದಾಗ್ಲೂ ಸಾಕಷ್ಟು ಘಟನೆಗಳು ನನ್ನ ಕಣ್ಮುಂದೆ ಬಂದು. ಹೈಸ್ಕೂಲ್‌ನ ಮೊದಲ ದಿನ, ಹೈಸ್ಕೂಲ್ ಫ್ರೆಂಡ್ಸ್‌ನ ಮೊದಲ ಬಾರಿ ಭೇಟಿಯಾದ ಆ ಕ್ಷಣ, ನ್ಪೋರ್ಟ್ಸ್ ಡೇ, ಸ್ಕೂಲ್‌ಡೇ, ಆ ದಿನ ಕಲರ್ ಡ್ರೆಸ್ ಹಾಕಿ ಖುಷಿ ಪಟ್ಟಿದ್ದು. ಫ್ರೆಂಡ್ಸ್ ಜೊತೆ ಹರಟೆ ಹೊಡಿªದ್ದು, ಲೈಟ್ ಆಗಿ ಜಗಳ ಆಡಿದ್ದು, ಒಂದಾ ಎರಡಾ? ನೂರಾರು ನೆನಪುಗಳು. ಆಟೋಗ್ರಾಫ್ ಬುಕ್ ಪೂರ್ತಿ ಓದಿ ಮುಗಿಸಿದ ನನಗೆ ಒಂದ್ ಕಡೆ ಸಂತೋಷ ಆದ್ರೆ ಇನ್ನೊಂದು ಕಡೆ ಹೈಸ್ಕೂಲ್ ಲೈಫ್ ಮಿಸ್ ಮಾಡ್ತಿರೋ ನೋವಾಯ್ತು.
ಹೈಸ್ಕೂಲ್ ಲೈಫ್ ಮಿಸ್ ಮಾಡ್ತಿದ್ದೀನಿ ಅನ್ನೋ ಭಾವನೆ ನನ್ನಲ್ಲಿ ಮೂಡಿದಾಗ ನನ್ನ ಮೇಲೆ ನನಗೆ ನಗು ಬಂತು. ಯಾಕಂದ್ರೆ ಹೈಸ್ಕೂಲ್‌ನಲ್ಲಿ ಇದ್ದಾಗ ನಾವು ಹೆಚ್ಚಿನವರು ಹೈಸ್ಕೂಲ್ ಎಷ್ಟೊಂದು ಕಷ್ಟ . ದಿನಾ ಮಣಭಾರದ ಬ್ಯಾಗ್ ಹೊತ್ಕೊಂಡು ಶಾಲೆಗೆ ಹೋಗ್ಬೇಕು, ಎಲ್ಲಾ ಸಬ್ಜೆಕ್ಟ್ ನೋಟ್ಸ್ ನಾವೇ ಬರೀಬೇಕು. ಪ್ರತಿದಿನ ತಪ್ಪದೇ ಕೋಪಿ ಬರಿಬೇಕು. ಒಂದಾ ಎರಡಾ? ಬೇಗ ಹೈಸ್ಕೂಲ್ ಲೈಫ್ ಮುಗೀಲಿ. ಕಾಲೇಜ್ ಲೈಫ್ ಎಷ್ಟೊಂದು ಸಕತ್ ಆಗಿರುತ್ತೆ ಅಂತೆಲ್ಲಾ ಅನ್ಕೊಳ್ತಿದ್ವಿ. ಈಗ ನನಗೆ ಅದೆಲ್ಲಾ ತಪ್ಪು ಅನಿಸ್ತಿದೆ. ಯಾಕಂದ್ರೆ ಪ್ರತಿಯೊಂದಕ್ಕೂ ಅದರದೇ ಆದ ಮಹತ್ವ ಇರುತ್ತೆ. ಹೈಸ್ಕೂಲ್ ಲೈಫ್ ಕಾಲೇಜ್ ಲೈಫ್ ತರಾನೇ ಇದ್ದಿದ್ರೆ ಅವೆರಡರ ಮಧ್ಯೆ ವ್ಯತ್ಯಾಸಾನೇ ಇರ್ತಿರ್ಲಿಲ್ಲ. ಈ ವಿಷಯ ಹೈಸ್ಕೂಲ್‌ನಲ್ಲಿದ್ದಾಗಲೇ ಅರ್ಥ ಆಗಿದ್ರೆ ನಮ್ಗೆ ಹೈಸ್ಕೂಲ್ ಲೈಫ್ ಕಷ್ಟ ಅನ್ನಿಸ್ತಿರ್ಲಿಲ್ಲ.
ಒಟ್ಟಿನಲ್ಲಿ ಇರೋದನ್ನ ಇಲ್ಲದೆ ಇರೋದಕ್ಕೆ ಹೋಲಿಸಿ ದುಃಖ ಪಡೋದಕ್ಕಿಂತ ಇರೋದನ್ನು ಇದ್ದ ಹಾಗೆ ಒಪ್ಪಿಕೊಂಡು ಬದುಕಿದ್ರೆ ಹ್ಯಾಪಿಯಾಗಿ ಇರಬಹುದು.
ಸುಶ್ಮಿತಾ ನೇರಳಕಟ್ಟೆ