Advertisement

ಒಂದು ವರ್ಷದ ಯಾತ್ರೆ ನೂರು ವರ್ಷದಷ್ಟು ನೆನಪು!

03:54 PM Mar 06, 2018 | |

ಜೆರಾಕ್ಸ್ ಮಲ್ಲೇಶನ ಸಹಾಯ ನೆನಪಿಸಿಕೊಳ್ಳದಿದ್ದರೆ ಆ ದೇವರು ಕೂಡಾ ಕ್ಷಮಿಸುವುದಿಲ್ಲ. ಆಗ ಅವನೇ ನಮಗೆ ಆಪತ್ಭಾಂಧವ. ಎಂತಹ ಗೋಲ್ಡ್ ಮೆಡಲಿಸ್ಟ್ ಇರಲಿ ಅವನಿಗೆ ಕೃತಜ್ಞತೆ ಸಲ್ಲಿಸದೇ ಇರಲ್ಲ. ಅವನು ಕೊಡುತ್ತಿದ್ದ ರೇಡಿಮೇಡ್‌ ನೋಟ್ಸ್‌ಗಳು ನಮಗೆ ಪರೀಕ್ಷೆ ಸಂದರ್ಭದಲ್ಲಿ ಬಹಳ ಸಹಾಯ ಮಾಡುತ್ತಿದ್ದವು. ಮಲ್ಲೇಶಣ್ಣ ನಮ್ಮ ಅಗ್ರಿ ಹುಡುಗರ ಪಾಲಿನ ಸೂಪರ್‌ ಸ್ಟಾರ್‌. ಅವನ ಹೆಸರಿನಲ್ಲಿ ಮಲ್ಲೇಶಣ್ಣ ಫ್ಯಾನ್ಸ್ ಕ್ಲಬ್‌ ಎಂಬ  ಫೇಸ್‌ಬುಕ್‌ ಪೇಜ್‌ ಕೂಡಾ ತೆರೆಯಲಾಗಿದೆ ಎಂದರೆ ನೀವೇ ಯೋಚಿಸಿ. 

Advertisement

ಆಗ ತಾನೇ ಪಿಯುಸಿ ಮುಗಿಸಿ ಅಗ್ರಿ (ಅಗ್ರಿಕಲ್ಚರ್‌) ಕಾಲೇಜ್‌ ಸೇರಿದ ನನಗೆ ಎಲ್ಲವೂ ಹೊಸತು ಅನಿಸಿತು. ಹೊಸ ಕಾಲೇಜು, ಹೊಸ ಹಾಸ್ಟೆಲ್‌, ಹೊಸ ಸ್ನೇಹಿತರು, ಹೊಸ ವಿಷಯಗಳು, ಪ್ರಾಧ್ಯಾಪಕರು ಎಲ್ಲವೂ ಹೊಸದು. ಕಾಲೇಜಿನ ಮೊದಲ ದಿನವೇ ವಿಚಿತ್ರ ಅನುಭವ ಕಾದಿತ್ತು. ಒಬ್ಬ ಸೀನಿಯರ್‌ ನನ್ನ ಜೇಬಿನಲ್ಲಿದ್ದ ಪೆನ್‌ ಎತ್ತಿಕೊಂಡು, ಇನ್ಮುಂದೆ ಪೆನ್ನನ್ನು ಜೇಬಿನಲ್ಲಿಟ್ಟುಕೊಳ್ಳಬಾರದೆಂದು ಎಚ್ಚರಿಕೆ ನೀಡಿದ. ಜ್ಯೂನಿಯರ್‌ಗಳನ್ನು ಹದ್ದುಬಸ್ತಿ ನಲ್ಲಿಡಲು ಸೀನಿಯರ್‌ಗಳು ಇಂಥ ಹಲವಾರು ಚಿತ್ರವಿಚಿತ್ರ ನಿಯಮಗಳನ್ನು ಜಾರಿಗೆ ತಂದಿದ್ದರು.

ಜೀನ್ಸ್ ಹಾಕುವಂತಿಲ್ಲ, ಟಿವಿ ಹಾಲ್‌ಗೆ ಬರುವಂತಿಲ್ಲ, ಹುಡುಗಿಯರೊಂದಿಗೆ ಮಾತಾಡುವಂತಿಲ್ಲ, ಎದುರು ವಾದಿಸುವಂತಿಲ್ಲ, ಅವರನ್ನು ಅಣ್ಣ ಅಂಥ ಕರೆಯುವಂತಿಲ್ಲ.. ಹೀಗೆ ಅನೇಕ ನಿಯಮಗಳು ಅವರ ನೀತಿಸಂಹಿತೆಯಲ್ಲಿದ್ದವು. ಸೀನಿಯರ್‌ಗಳ ಈ ನಿರ್ಬಂಧಗಳು ಕಿರಿಕಿರಿ ಅನ್ನಿಸಿದರೂ ಏನೋ ಒಂದು ರೀತಿ ಮಜಾ ಕೊಡುತ್ತಿದ್ದವು. ಅಗ್ರಿ ಕಾಲೇಜಿನ ಪ್ರತಿ ವಿದ್ಯಾರ್ಥಿಗೂ ಆಗುವ ಅನುಭವವೆಂದರೆ ಕಾಲಚಕ್ರ ಎಷ್ಟು ಬೇಗ ಉರುಳುತ್ತದೆ ಎಂಬುದು. ಮೊದಲಿಗೆ ಕೋರ್ಸ್‌ ಟೈಟಲ್, ಕ್ರೆಡಿಟ್‌ ಅವರ್ಸ್‌ ಬಾಯಿಪಾಠ ಹಾಕುವುದರಲ್ಲೇ ಅಕಿ ಎಕ್ಸಾಮ್‌ ಬಂದುಬಿಟ್ಟಿತು.

ಇದಾದ ಕೆಲವೇ ದಿನಗಳಲ್ಲಿ ಮಿಡ್‌ ಟರ್ಮ್ ಎಕ್ಸಾಮ್‌, ನಂತರ ಪ್ರಾಕ್ಟಿಕಲ್ ಎಕ್ಸಾಮ್‌ ಗಳು ಕೊನೆಗೆ ವಾರ್ಷಿಕ ಪರೀಕ್ಷೆಗಳು.  ಮಟಮಟ ಮಧ್ಯಾಹ್ನ ಇರುತ್ತಿದ್ದ ಹಮೀದ್‌ ಸರ್‌ ಕಉ ಕ್ಲಾಸ್‌ ಅಂತೂ ಮರೆಯೋಕೆ ಸಾಧ್ಯವಿಲ.ಅವರು ನಮ್ಮನ್ನು ಮೈದಾನದಲ್ಲಿ ಓಡಾಡಿಸಿಯೇ ಬೆವರಿಳಿಸುತ್ತಿದ್ದರು. ಗೆಳೆಯನಿಗೆ ಪ್ರಾಕ್ಸಿ ಹಾಕಲು ಹೋಗಿ ಸಿಕ್ಕಿಬಿದ್ದದ್ದು, ಮಾಸ್‌ ಬಂಕ್‌ ಮಾಡಿದ್ದು, ಸೀನಿಯರ್‌ ಹುಡುಗಿಯರಿಗೆ ಲೈನ್‌ ಹಾಕಿದ್ದು, ಪರೀಕ್ಷೆಯ ಹಿಂದಿನ ದಿನ ನಿದ್ದೆಗೆಟ್ಟು ರಾತ್ರಿಯೆಲ್ಲಾ ಓದಿದ್ದು, ಮನಬಂದಂತೆ ಮ್ಯಾನುವಲ್‌ಗ‌ಳನ್ನು ತುಂಬಿಸಿದ್ದು, insect sample ಸಂಗ್ರಹಿಸಲು ರಾತ್ರಿಯೆಲ್ಲಾ ಓಡಾಡಿದ್ದು,

ಮೆಸ್‌ನಲ್ಲಿ ಮ್ಯಾನೇಜರ್‌ ಜೊತೆ ಕಿತ್ತಾಡಿದ್ದು, ಸೀನಿಯರ್‌ಗಳ ಜೊತೆ ಕಿರಿಕ್‌ ಮಾಡಿಕೊಂಡಿದ್ದು, ಮಧ್ಯಾಹ್ನ ಕ್ಲಾಸಿನಲ್ಲಿ ತೂಕಡಿಸಿ ಬೈಸಿಕೊಂಡಿದ್ದು…. ಹೀಗೆ ಹೇಳುತ್ತಾ ಹೋದರೆ ಈರುಳ್ಳಿ ಪದರುಗಳು ಬಿಚ್ಚಿದಂತೆ ಅಗ್ರಿ ಕಾಲೇಜಿನ ನೆನಪುಗಳೇ ತೆರೆಯುತ್ತಲೇ ಹೋಗುತ್ತವೆ. ನಮ್ಮ ಹಾಸ್ಟೆಲ್‌ನಲ್ಲಿ ಮೃಷ್ಟಾನ್ನ ಭೋಜನದಂತಿದ್ದ ಶುಚಿ ರುಚಿಯಾದ ಆಹಾರ ದೊರಕುತ್ತಿತ್ತು. ಇಷ್ಟಾದರೂ ಹಾಸ್ಟೆಲ್‌ ವಾರ್ಡನ್‌ರೊಂದಿಗಿನ ನಮ್ಮ ಜಗಳಗಳು ನಿಲ್ಲುತ್ತಿರಲಿಲ್ಲ. ನಮ್ಮ ಕ್ಲಾಸ್‌ ಬೆಡಗಿ ಅಂಕಿತಾಳ ಮೇಲೆ ಇಡೀ ಕಾಲೇಜು ಹುಡುಗರ ಕಣ್ಣು ನೆಟ್ಟಿತ್ತು.

Advertisement

ಅವಳು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಅನ್ನದೇ ಅವಳಾಯಿತು, ಅವಳ ಓದು ಆಯಿತು ಎನ್ನುವಂತೆ ತನ್ನ ಪಾಡಿಗೆ ತಾನಿರುತ್ತಿದ್ದಳು. ಅವಳು ಒಂದು ರೀತಿ ನಮ್ಮ ಕಾಲೇಜಿಗೆ ಕಿರಿಕ್‌ ಪಾರ್ಟಿಯ ಸಾನ್ವಿ ತರಹ. ಅದೆಷ್ಟೋ ಸೀನಿಯರ್‌ಗಳು ಅವಳ ಬಗ್ಗೆ ವಿಚಾರಿಸುವುದಕ್ಕಾಗಿಯೇ ನಮ್ಮನ್ನು ಗಂಟೆಗಟ್ಟಲೇ ನಿಲ್ಲಿಸಿಕೊಂಡು ಗೋಳುಹೋಯ್ದುಕೊಳ್ಳುತ್ತಿದ್ದರು. ಇದರಿಂದ ಎಷ್ಟೋ ಸಲ ನಮ್ಮ ಕೋಪ ಅಮಾಯಕಿ ಅಂಕಿತಾಳ ಮೇಲೆ ತಿರುಗುತ್ತಿತ್ತು. ಪರೀಕ್ಷಾ ಸಂದರ್ಭದಲ್ಲಂತೂ ಜೆರಾಕ್ಸ್ ಮಲ್ಲೇಶನ ಸಹಾಯ ನೆನಪಿಸಿಕೊಳ್ಳದಿದ್ದರೆ ಆ ದೇವರು ಕೂಡಾ ಕ್ಷಮಿಸುವುದಿಲ್ಲ.

ಆಗ ಅವನೇ ನಮಗೆ ಆಪತ್ಭಾಂಧವ. ಎಂತಹ ಗೋಲ್ಡ್ ಮೆಡಲಿಸ್ಟ್ ಇರಲಿ ಅವನಿಗೆ ಕೃತಜ್ಞತೆ ಸಲ್ಲಿಸದೇ ಇರಲ್ಲ. ಅವನು ಕೊಡುತ್ತಿದ್ದ ರೇಡಿಮೇಡ್‌ ನೋಟ್ಸ್‌ಗಳು ನಮಗೆ ಪರೀಕ್ಷೆ ಸಂದರ್ಭದಲ್ಲಿ ಬಹಳ ಸಹಾಯ ಮಾಡುತ್ತಿದ್ದವು. ಮಲ್ಲೇಶಣ್ಣ ನಮ್ಮ ಅಗ್ರಿ ಹುಡುಗರ ಪಾಲಿನ ಸೂಪರ್‌ ಸ್ಟಾರ್‌. ಅವನ ಹೆಸರಿನಲ್ಲಿ ಮಲ್ಲೇಶಣ್ಣ ಫ್ಯಾನ್ಸ್ ಕ್ಲಬ್‌ ಎಂಬ  ಫೇಸ್‌ಬುಕ್‌ ಪೇಜ್‌ ಕೂಡಾ ತೆರೆಯಲಾಗಿದೆ ಎಂದರೆ ನೀವೇ ಯೋಚಿಸಿ. ಇಷ್ಟೆಲ್ಲಾ ಸವಿನೆನಪುಗಳನ್ನು ಕಟ್ಟಿಕೊಟ್ಟ ಅಗ್ರಿ ಕಾಲೇಜನಲ್ಲಿ ನಾನು ಓದಿದ್ದು ಕೇವಲ ಒಂದುವರ್ಷ ಮಾತ್ರ.

ಪತ್ರಿಕೋದ್ಯಮ ಮತ್ತು ಸಾಹಿತ್ಯದೆಡೆಗಿನ ಸೆಳೆತದಿಂದ ಅಗ್ರಿ ಕಾಲೇಜು ತೊರೆದು ಕೆಸಿಡಿ ಸೇರಿಕೊಂಡೆ. ನನ್ನ ಇಷ್ಟದ ಕೋರ್ಸ್‌ಗೆ ಸೇರಿದ್ದೆನೆಂಬ ಖುಷಿಯಿದ್ದರೂ ಅಗ್ರಿ ಕಾಲೇಜಿನ ಸ್ನೇಹಿತರನ್ನೆಲ್ಲಾ ಮಿಸ್‌ ಮಾಡಿಕೊಂಡೆನಲ್ಲಾ ಎಂಬ ನೋವು ಪದವಿ ಮುಗಿಯುವರೆಗೂ ನನ್ನನ್ನು ಕಾಡಿತ್ತು. ಯಾರಾದರೂ ನನ್ನನ್ನು “ಆರ್‌ ಯು ಅಗ್ರಿ ಸ್ಟುಡೆಂಟ್‌?’ ಅಂತ ಕೇಳಿದಾಗಲೆಲ್ಲ ಅಲ್ಲಿ ಕೇವಲ ಒಂದೇ ವರ್ಷ ಓದಿದರೂ ಖುಷಿಯಿಂದಲೇ “ಯೆಸ್‌’ ಅನ್ನುತ್ತೇನೆ. ವಿದ್ಯಾರ್ಥಿ ಜೀವನದಅತ್ಯಮ್ಯೂಲ್ಯ ಸವಿನೆನಪುಗಳನ್ನು ಕಟ್ಟಿಕೊಟ್ಟ ಅಗ್ರಿ ಕಾಲೇಜಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
 
* ಹನಮಂತ ಕೊಪ್ಪದ 

Advertisement

Udayavani is now on Telegram. Click here to join our channel and stay updated with the latest news.

Next