Advertisement

ನೂರು ಯೋಜನೆಯ ಪಂಚಾಯತ್‌ನಲ್ಲಿ ನೂರಾರು ಸಮಸ್ಯೆ!

02:39 PM Apr 15, 2017 | Team Udayavani |

ಪುತ್ತೂರು:  ಒಂಬತ್ತು ತಿಂಗಳ ಹಿಂದೆ ರಾಜ್ಯ ಸರಕಾರ ಪಂಚಾಯತ್‌ ಮಟ್ಟದಲ್ಲಿ ನೂರು ಯೋಜನೆ ನೀಡುವ ಸೌಲಭ್ಯ ಪ್ರಕಟಿ ಸಿತ್ತು. ಪ್ರಸ್ತುತ ಪಂಚಾಯತ್‌ ಸ್ಥಿತಿ ಹೇಗಿದೆ ಎಂದರೆ, ನೂರು ಯೋಜನೆ ಬದಲು ನೂರಾರು ಸಮಸ್ಯೆಗಳೇ ತುಂಬಿರುವುದು. ಬಹುನಿರೀಕ್ಷಿತ ಬಾಪೂಜಿ ಕೇಂದ್ರದಲ್ಲಿ ಪಹಣಿ ಪತ್ರ ವಿತರಣೆ ಕಾರ್ಯವೂ ಪಂಚಾಯತ್‌ಗಳಿಗೆ ಹೊರೆಯಾಗಿ ಪರಿಣಮಿಸಿದೆ !

Advertisement

ಬಾಪೂಜಿ ಕೇಂದ್ರ: 100 ಯೋಜನೆಗಳಲ್ಲಿ ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧ ಪಟ್ಟಂತೆ 43, ಕಂದಾಯ ಇಲಾಖೆಯ 39 ಮತ್ತು ಇತರ ಇಲಾಖೆಯ 18 ಸೇವೆಗಳು ಸೇರಿವೆ. ಪಂಚಾಯತ್‌ ರಾಜ್‌ ಇಲಾಖೆ, ಕಂದಾಯ ಇಲಾಖೆ ಮತ್ತು ಇತರ ಇಲಾಖೆಗಳ ಸೌಲಭ್ಯ ಗಳು ಗ್ರಾ.ಪಂ. ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಬಾಪೂಜಿ ಕೇಂದ್ರಗಳ ಮೂಲಕ ಜನರಿಗೆ ದೊರೆಯುವುದು ಕೇಂದ್ರ ಸ್ಥಾಪನೆ ಉದ್ದೇಶ.

ಸೌಕರ್ಯದ ಕೊರತೆ !
ಬಾಪೂಜಿ ಕೇಂದ್ರಕ್ಕಿಂತ ಮೊದಲೇ ಪಂಚಾಯತ್‌ರಾಜ್‌ ಇಲಾಖೆಯಲ್ಲಿನ ಬಹುತೇಕ ಯೋಜನೆಗಳು ಗ್ರಾ.ಪಂ.ಗಳಲ್ಲಿ ಅನುಷ್ಠಾನದಲ್ಲಿತ್ತು. ಇನ್ನು ಕಂದಾಯ ಇಲಾಖೆಯಲ್ಲಿನ ಜಾತಿ-ಆದಾಯ, ವಾಸಸ್ಥಳ ಪ್ರಮಾಣ ಪತ್ರ, ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಮೊದಲಾದ 39 ಸೇವೆಗಳು ಬಾಪೂಜಿ ಕೇಂದ್ರದಲ್ಲಿ ದೊರೆಯುವ ಪ್ರಸ್ತಾವವಿದ್ದರೂ ಅದು ಈ ತನಕ ಅನುಷ್ಠಾನಕ್ಕೆ ಬಂದಿಲ್ಲ.ಇತರ ಸೇವೆಗಳಾದ ವಿದ್ಯುತ್‌ ಬಿಲ್‌, ದೂರವಾಣಿ ಬಿಲ್‌, ಜೀವ ವಿಮೆ, ವಾಹನ ವಿಮೆ, ಮೊಬೈಲ್‌ ರಿಚಾರ್ಜ್‌, ಡಿಟಿಎಚ್‌ ರಿಚಾರ್ಜ್‌, ಡೇಟಾ ಕಾರ್ಡ್‌ ರಿಚಾರ್ಜ್‌, ಬಸ್‌ ಟಿಕೆಟ್‌ ಬುಕಿಂಗ್‌, ರೈಲ್ವೇ ಟಿಕೆಟ್‌ ಬುಕಿಂಗ್‌, ಉದ್ಯೋಗ ಮಾಹಿತಿ, ಹಣ ವರ್ಗಾವಣೆ, ವಿದ್ಯಾರ್ಥಿವೇತನ ನೀಡುವ ಯೋಜನೆಗಳು ಪಟ್ಟಿಯಲ್ಲಿದ್ದರೂ ಅದು ಜಾರಿಗೆ ಬರುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ. 
 
ಪಹಣಿ ಪತ್ರದಿಂದ ಲಾಭವಿಲ್ಲ !
ಪಹಣಿಪತ್ರಕ್ಕೆ ಬೇಕಾದ ಕಾಗದ, ಪ್ರಿಂಟಿಂಗ್‌ ಇಂಕ್‌ ಇತ್ಯಾದಿ ಆವಶ್ಯಕತೆಗಳಿಗೆ ಪಂಚಾಯತ್‌ ತನ್ನ ತೆರಿಗೆ ಹಣ ಖರ್ಚು ಮಾಡಬೇಕು. ಜನರಿಗೆ ಪಹಣಿಪತ್ರ ವಿತರಿಸಿದಾಗ ಸಿಗುವ ಆದಾಯವನ್ನು ನೇರವಾಗಿ ಪಂಚಾಯತ್‌ ಬಳಸಿಕೊಳ್ಳುವಂತಿಲ್ಲ. ಅದನ್ನು ಸರಕಾರಕ್ಕೆ ಕಟ್ಟಬೇಕು. ತೆರಿಗೆ ಹಣ ಬಳಸುವುದರಿಂದ ಪ್ರತಿ ಪಹಣಿ ಪತ್ರ ವಿತರಣೆಯಲ್ಲಿ 3ರಿಂದ 4 ರೂ. ನಷ್ಟು ಪಂಚಾಯತ್‌ಗೆ ಹೊರೆ ಆಗುತ್ತಿದೆ ಅನ್ನುವುದು ಕೆಲ ಪಂಚಾಯತ್‌ ಅಧಿಕಾರಿಗಳ ಅಳಲು.

ಸಿಬಂದಿ ನೇಮಕವಿಲ್ಲ
ಪಂಚಾಯತ್‌ನಲ್ಲಿ ಸ್ಥಾಪಿಸಲಾದ ಬಾಪೂಜಿ ಕೇಂದ್ರಗಳಿಗೆ ಸಿಬಂದಿ ನೇಮಿಸಿಲ್ಲ. ಪಹಣಿಪತ್ರ ವಿತರಣೆಗೂ ಈಗಿರುವ ಸಿಬಂದಿಯನ್ನೇ ಬಳಸಿಕೊಳ್ಳಬೇಕಿದೆ. ಒಂದೆಡೆ ರೇಷನ್‌ ಕಾರ್ಡ್‌, ಪಡಿತರ ಕೂಪನ್‌ ವಿತರಣೆ, ಆಧಾರ್‌ ಕಾರ್ಡ್‌ ನೋಂದಣಿ ಹೀಗೆ ಹತ್ತಾರು ಕೆಲಸವನ್ನು ಈ ಸಿಬಂದಿ ಮಾಡಬೇಕು. ಇವು ತುರ್ತಾಗಿ ಆಗ ಬೇಕಾದ ಕಾರಣ, ಸಿಬಂದಿ ಗಮನ ಹರಿಸಲೇ ಬೇಕಿದೆ. ಪರಿಣಾಮ, ಸಿಬಂದಿ ದಿನನಿತ್ಯದ ಇತರ ಕಚೇರಿ ಕೆಲಸಗಳು ಬಾಕಿ ಆಗುತ್ತಿದೆ.

ವೆಬ್‌ಸೈಟ್‌ ಸರ್ವರ್‌ ಸಮಸ್ಯೆ !
ಬಹುತೇಕ ಗ್ರಾ.ಪಂ.ಗಳಿಗೆ ಸಮಸ್ಯೆ ತಲೆ ದೋರಿರುವುದು ಇಲಾಖೆ ವೆಬ್‌ಸೈಟ್‌ನ ಸರ್ವರ್‌ ಸಮಸ್ಯೆ. ಈಗಿರುವ ಸ್ಥಿತಿ ಹೇಗಿದೆ ಎಂದರೆ, ಪಂಚತಂತ್ರದೊಳಗೆ ಪಂಚಾಯತ್‌ನ ಎಲ್ಲ ಯೋಜನೆಗಳನ್ನು ದಾಖಲಿಸಬೇಕು. ದಿನದಲ್ಲಿ ಹತ್ತಾರು ಬಾರಿ ಸರ್ವರ್‌ ಸಮಸ್ಯೆ ನಿರಂತರ ಕೆಲಸಕ್ಕೆ ಅಡ್ಡಿ ಯಾಗಿದೆ. ಪಹಣಿ ಪತ್ರಕ್ಕಂತೂ ಸರ್ವರ್‌ ಕಾಟ ಬಹುವಾಗಿ ಕಾಡಿದೆ.

Advertisement

ವಾರದಲ್ಲಿ  ಹತ್ತು ಸಭೆ!
ಪಂಚಾಯತ್‌ಗಳಲ್ಲಿ ಕಾರ್ಯದರ್ಶಿ, ಪಿಡಿಒ ಹುದ್ದೆ ಹೊರತುಪಡಿಸಿ ಉಳಿದಂತೆ ಐದು ಹುದ್ದೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಕ್ಲರ್ಕ್‌, ಜವಾನ, ಬಿಲ್‌ ಕಲೆಕ್ಟರ್‌, ಪಂಪು ಚಾಲಕ, ಸ್ವತ್ಛತಗಾರ ಸಿಬಂದಿ ಇರುತ್ತಾರೆ. ಜಿಪಿಎಸ್‌ ತಂತ್ರಜ್ಞಾನ ಇರುವ ಕಾರಣ ಪಂಚಾಯತ್‌ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳ್ಳುವ ಪ್ರತಿ ಯೋಜನೆ, ಅಭಿವೃದ್ಧಿ ಕಾರ್ಯಗಳನ್ನು ಪಿಡಿಒ, ಕಾರ್ಯದರ್ಶಿ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಅದನ್ನು ಜಿಪಿಎಸ್‌ ತಂತ್ರಾಂಶದಲ್ಲಿ ದಾಖಲಿಸಿ, ಅಪಲೋಡ್‌ ಮಾಡಬೇಕು ಎನ್ನುವುದು ನಿಯಮ. ಆದರೆ ಆ ಕೆಲಸ ಮಾಡಲು ಅಧಿಕಾರಿಗಳಿಗೆ ಸಮಯವೇ ಸಿಗುತ್ತಿಲ್ಲ. ಯಾಕೆಂದರೆ ಪಿಡಿಒ, ಕಾರ್ಯದರ್ಶಿಗೆ ಇಲಾಖೆಗೆ ಸಂಬಂಧಿಸಿ ತಾಲೂಕು, ಜಿಲ್ಲಾಮಟ್ಟದಲ್ಲಿ ವಾರಕ್ಕೆ ಕನಿಷ್ಠ ಅಂದರೆ ಹತ್ತಾರು ಸಭೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.  ಇದರಿಂದ ಪಿಡಿಒಗಳು ಮಾಡ ಬೇಕಾದ ಕೆಲಸವನ್ನು ಪಂಚಾಯತ್‌ನ ಇತರೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಡಬೇಕು. 

ಕಷ್ಟ ಅರ್ಥವಾಗುತ್ತಿಲ್ಲ !
ಹತ್ತಾರು ಯೋಜನೆಗಳಿಗೆ ಸಂಬಂಧಿಸಿ ಕೆಲಸ ಮಾಡಬೇಕಾದ ಪಂಚಾಯತ್‌ ಸಿಬಂದಿಗೆ ತಮ್ಮ ನಿರ್ದಿಷ್ಟ ಕೆಲಸ ಮುಗಿಸದ ಸಂದಿಗ್ಧ ಸ್ಥಿತಿ. ಇರುವ ಸಿಬಂದಿ ಗೈರಾದರೆ, ಆ ಕೆಲಸವೂ ಇವರ ಹೆಗಲ ಮೇಲೆ ಬೀಳುತ್ತದೆ. ಎಲ್ಲ ಯೋಜನೆಗಳಿಗೆ ಸಂಬಂಧಿಸಿದ ಅಂಕಿ-ಅಂಶ ದಾಖಲು, ಇತರೆ ಕೆಲಸಗಳನ್ನೂ ಸರಿಯಾದ ಸಮಯದಲ್ಲಿ ಮುಗಿಸಬೇಕು. ಸೋಮವಾರದಿಂದ-ಶನಿವಾರದ ತನಕ ಈ ಕಾರ್ಯ ಮಾಡಲು ಬಿಡುವಿಲ್ಲದ ಸ್ಥಿತಿ ಏರ್ಪಟ್ಟಿರುತ್ತದೆ.

– ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next