Advertisement
ಪುಟ್ಟ ಪುಟ್ಟ ಕಂದಮ್ಮಗಳ ಇಂಥ ಬೆಳವಣಿಗೆ ನಿಜಕ್ಕೂ ಆಶ್ಚರ್ಯವನ್ನೇ ಉಂಟುಮಾಡುತ್ತಿದೆ. ಕಾಲ ಬದಲಾಗುತ್ತಿದೆಯೋ ಅಥವಾ ನಾಗರೀಕತೆ ಬೆಳೆಯುತ್ತ ಹೋದಂತೆ ಮಕ್ಕಳ ಮಾನಸಿಕ ಸ್ಥಿತಿಯೂ ಕಾಲಕ್ಕನುಗುಣವಾಗಿ ಹೊಂದಿಕೊಳ್ಳುತ್ತಿದೆಯಾ! ಎಂಬ ಉತ್ತರಕ್ಕಾಗಿ ನಾವೀಗ ತಡಕಾಡಬೇಕಾಗುತ್ತದೆ.
Related Articles
Advertisement
ಕರಾವಳಿ ಭಾಗದಲ್ಲಂತೂ ಜನಜೀವನ ತೀರಾ ಭಿನ್ನವಾಗಿತ್ತು. ಗೃಹಿಣಿಯರು ಬೆಳಗಿನ ಜಾವ ನಾಲ್ಕೂವರೆಗೆ ಎದ್ದು ಕುಸಲಕ್ಕಿ ಗಂಜಿಯನ್ನು ಬೇಯಲು ಇಟ್ಟುಬಿಟ್ಟರೆ ಶಾಲಾ ಸಮಯಕ್ಕೆ ಬೆಂದಿರುತ್ತಿತ್ತು. ಉಪ್ಪಿನಕಾಯಿ, ತುಪ್ಪದೊಂದಿಗೆ ಊಟ ಮಾಡಿಕೊಂಡು ಹೋದರೆ ಎಷ್ಟು ಸೆಕೆಗಾಲದಲ್ಲೂ ಬಾಯಾರಿಕೆಯಾಗುತ್ತಿರಲಿಲ್ಲ. ತಿಳಿಯನ್ನು ಬಸಿದು ಅನ್ನವನ್ನು ಒಂದು ಬಾಕ್ಸ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.
ಅಪರೂಪಕ್ಕೊಮ್ಮೆ ದೋಸೆ, ಇಡ್ಲಿ, ಒತ್ತುಶ್ಯಾವಿಗೆಯು ಫಲಾಹಾರಕ್ಕೆ ಸಿದ್ಧವಿರುತ್ತಿತ್ತು. ಅದು ಮಾಡಿದ ದಿವಸ ಬೆಳಗಿನಿಂದ ಸಂಜೆಯವರೆಗೆ ಅದೇ ತಿಂಡಿ. ಬೇಸರ ಪಟ್ಟುಕೊಂಡರೆ ನಮಗೇ ಪಂಗನಾಮ. ಹಾಗಾಗಿ ಎಲ್ಲರೂ ಮರುಮಾತನಾಡದೆ ತಣ್ಣಗಿದ್ದರೂ ಅದನ್ನೇ ತಿನ್ನುತ್ತಿದ್ದೆವು. ಬಿಸಿ ಮಾಡುವ ಪ್ರಮೇಯವೇ ಇರಲಿಲ್ಲ. ಹಬ್ಬ , ಹರಿದಿನಗಳಲ್ಲಿ ವಿಶೇಷ ತಿಂಡಿ ತಿನಿಸುಗಳು ತಯಾರಾಗುತ್ತಿದ್ದವು. ಎಲ್ಲರೂ ಬಹಳ ಇಷ್ಟಪಟ್ಟು ಸವಿಯು ತ್ತಿದ್ದೆವು. ಹಾಗಾಗಿ ಒಂದೊಂದು ಹಬ್ಬಕ್ಕೆ ಒಂದೊಂದು ರೀತಿಯ ತಿಂಡಿ ಗಳನ್ನು ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಅರ್ಧ, ಒಂದು ಡಜನ್ ಮಕ್ಕಳಿರುತ್ತಿರುವ ಸಂಸಾರಗಳಲ್ಲಿ ಒಬ್ಬೊಬ್ಬರಿಗೂ ಇಷ್ಟವಾಗುವ ತಿಂಡಿಗಳನ್ನು ಮಾಡಿಕೊಡುವುದು ಅಸಾಧ್ಯದ ವಿಷಯವೇ ಸರಿ.
ಈ ದಿನಗಳಲ್ಲಿ ಎಲ್ಲವೂ ಅಯೋಮಯವಾಗಿದೆ. ಹೈಟೆಕ್ ಅಮ್ಮಂದಿರಿಗೆ ಸೂರ್ಯ ಉದಯವಾಗುವುದೇ ಏಳು ಗಂಟೆಯ ನಂತರ. ಅವರಿಗೆ ಮಕ್ಕಳನ್ನು ಬೆಳೆಸುವ ರೀತಿಯ ಅರಿವಿಲ್ಲವೋ, ಅಥವಾ ಅವರ ಕೈಯಲ್ಲಿರುವ ಕಾಂಚಾಣದ ಪ್ರಭಾವವೋ, ಅಥವಾ ತಮ್ಮ ಮಕ್ಕಳ ಬಗೆಗಿರುವ ಅತೀವ ಕಾಳಜಿಯೋ ಗೊತ್ತಿಲ್ಲ. ಮಕ್ಕಳ ಮಾನಸಿಕ ಬೆಳವಣಿಗೆಯಂತೂ ಈ ರೀತಿ ವ್ಯಕ್ತವಾಗುತ್ತಿದೆ. ಮಕ್ಕಳು ಹೇಳಿದಂತೆ ಕೇಳುತ್ತಾ ಅವರು ಹಾದಿತಪ್ಪಲು ಅಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳೂ ಮನೆಯ ಊಟೋಪಚಾರಗಳನ್ನು ಮರೆತು ಹೊರಗಿನ ತಿಂಡಿತೀರ್ಥಗಳತ್ತ ಮನಸೋಲುತ್ತಿದ್ದಾರೆ.
ನಮ್ಮ ಪರಿಚಯದವರೊಬ್ಬರ ಮಗನ ವರ್ತನೆಯನ್ನು ಇಲ್ಲಿ ನಿದರ್ಶನವಾಗಿ ಕೊಡಬಹುದು. ಅವನಿಗೆ 10ನೇ ತರಗತಿಯಲ್ಲಿ ಒಳ್ಳೆಯ ಅಂಕಗಳು ಬಂದ ಕಾರಣ ಒಂದು ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆದರೆ, ಅವನು ಅಲ್ಲಿಗೆ ಸೇರಲು ಬಯಸದೆ ಬೇರೆ ಕಾಲೇಜನ್ನು ಆಯ್ಕೆಮಾಡಿಕೊಂಡದ್ದು ಎಲ್ಲರಿಗೂ ಬೇಸರ ಉಂಟುಮಾಡುತ್ತಿತ್ತು. ಕಾರಣ ಕೇಳಿದಾಗ ಅವನಿಂದ ಬಂದ ಉತ್ತರ “”ಆ ಕಾಲೇಜಿನ ಕ್ಯಾಂಟೀನ್ ಚೆನ್ನಾಗಿಲ್ಲ. ನಾನು ಈಗ ಸೇರಿರುವ ಕಾಲೇಜಿನ ಕ್ಯಾಂಟೀನ್ ಸೂಪರ್ ಆಗಿದೆ”. ಎಲ್ಲರೂ ಒಮ್ಮೆ ದಂಗಾಗಿ ಹೋದರು.
ಇದನ್ನೆಲ್ಲ ಗಮನಿಸುವಾಗ ನಾವು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಎಡವುತ್ತಿದ್ದೇವೆಂದು ಭಾಸವಾಗುತ್ತಿದೆ. ಭವಿಷ್ಯದ ಪರಿಸ್ಥಿತಿಯನ್ನು ಅರಿಯಲು ಯಾರಿಗೂ ಸಾಧ್ಯವಿಲ್ಲ. ಯಾವಾಗ ಏನಾಗುತ್ತದೋ ಯಾರೂ ಅರಿಯರು. ಹಾಗಾಗಿ ಮಕ್ಕಳಿಗೆ ಕಷ್ಟ ಸುಖ ಏನೆಂದು ಗೊತ್ತಾಗುವ ರೀತಿಯಲ್ಲಿ ಬೆಳೆಸಬೇಕು. ಮುಂದೆ ಅವರಿಗೆ ಯಾವುದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಛಾತಿಯಿರಬೇಕು. ಅತಿಯಾದ ಅಕ್ಕರೆ ಮಕ್ಕಳನ್ನು ಅಶಿಸ್ತಿನ ವಾತಾವರಣಕ್ಕೆ ದಬ್ಬುತ್ತದೆ ಎಂಬುದು ನೆನಪಿರಲಿ. ಗಿಡವಾಗಿ ಬಗ್ಗದ್ದು ಮರವಾದ ಮೇಲೆ ಖಂಡಿತಾ ಬಗ್ಗಲಾರದು. ಆದ್ದರಿಂದ ಎಳವೆಯಿಂದಲೇ ಮಕ್ಕಳ ಮನಸ್ಸನ್ನು ಹೇಳಿದ್ದನ್ನು ಅರ್ಥಮಾಡಿಕೊಳ್ಳುವಂಥ ಮನಃಸ್ಥಿತಿಗೆ ಒಗ್ಗಿಸಿ. ಹಾಗಾದಾಗ ಮಾತ್ರ ಭವಿಷ್ಯದಲ್ಲಿ ಅವರಿಂದ ಸದ್ವರ್ತನೆಯನ್ನು ನಿರೀಕ್ಷಿಸಲು ಸಾಧ್ಯ.
ಪುಷ್ಪಾ ಎನ್.ಕೆ. ರಾವ್