Advertisement

ಒಂದೇ ಮನೆ ಒಂದೇ ಬಾಗಿಲು

06:00 AM Nov 26, 2018 | |

ಮನೆ ಎಂಬುದು, ನಾವು ವಾಸಿಸಲು, ಬಾಳಲು, ವಿರಮಿಸಲು ನಿರ್ಮಿಸಿಕೊಳ್ಳಲು ಭದ್ರಕೋಟೆ. ಇಲ್ಲಿಗೆ ಪ್ರವೇಶ ಕಲ್ಪಿಸುವ ರಾಜಮಾರ್ಗವೇ ಬಾಗಿಲು. ಒಂದು ಮನೆಯ ಸೌಂದರ್ಯ ಹೆಚ್ಚುವುದೇ ಬಾಗಿಲು ಎಲ್ಲಿದೆ? ಯಾವ ರೀತಿ ಫಿಕ್ಸ್‌ ಆಗಿದೆ ಎಂದು ತಿಳಿಯುವ ಮೂಲಕ. ಅನುಕೂಲ-ಅನಾನುಕೂಲಗಳ ಬಗ್ಗೆ ಹತ್ತು ಬಾರಿ ಯೋಚಿಸಿಯೇ ಬಾಗಿಲು ಫಿಕ್ಸ್‌ ಮಾಡಬೇಕು…

Advertisement

ಮನೆ ಕಟ್ಟುವಾಗ ತಯಾರು ಮಾಡುವ ವಿನ್ಯಾಸದಲ್ಲಿ ಸಾಮಾನ್ಯವಾಗಿ ನಾವು ಮೊದಲು ಗಮನಿಸುವುದೇ ಮುಂಬಾಗಿಲು ಎಲ್ಲಿದೆ? ಎಂದು. ನಂತರ ಹಾಲ್‌, ಲಿವಿಂಗ್‌ ರೂಂ, ಡೈನಿಂಗ್‌ ಹಾಲ್‌…ಇತ್ಯಾದಿಯತ್ತ ನಮ್ಮ ಗಮನ ಹರಿಯುತ್ತದೆ. ಒಂದು ರೀತಿಯಲ್ಲಿ ಮನೆ ಎಂಬ ಭದ್ರಕೋಟೆಗೆ ಪ್ರಾವೇಶಿಕವಾಗಿರುವ ಈ ದಿಡ್ಡಿಬಾಗಿಲು, ಅನೇಕಬಾರಿ ಎಲ್ಲಿ ಹಾಗೂ ಹೇಗೆ, ಇದ್ದರೆ ಒಳ್ಳೆಯದು ಎಂಬ ವಿಚಾರವೇ  ನಮ್ಮನ್ನು ಹೆಚ್ಚು ಚಿಂತಿಸುವಂತೆ ಮಾಡುತ್ತದೆ. ಎಲ್ಲರಿಗೂ ರಸ್ತೆಗೆ ಕಾಣುವಂತೆ ಮನೆಯ ಮುಂದಿನ ಬಾಗಿಲು ಇರಬೇಕು ಎಂತಿದ್ದರೂ,  ಹಾದಿಬೀದಿಯಲ್ಲಿ ಹೋಗುವ ಮಂದಿಗೇಕೆ ಮನೆಯ ಒಳಾಂಗಣ ಕಾಣಬೇಕು ಎಂಬ ಆತಂಕವೂ ಇರುತ್ತದೆ. ಮನೆಯ ಮುಖ್ಯ ಬಾಗಿಲನ್ನು ಅಕ್ಕಕ್ಕೋ, ಪಕ್ಕಕ್ಕೋ ಇಟ್ಟರೆ, ಮನೆಗೆ ಹೊಸದಾಗಿ ಬರುವವರು ಒಳಗೆ ಪ್ರವೇಶ ಮಾಡುವುದಾದರೂ ಹೇಗೆ ಎಂದು ತಡಕಾಡುವಂತೆ ಆಗುತ್ತದೆ. ರಸ್ತೆಗೆ ಬಾಗಿಲು ತೆರೆದುಕೊಂಡಿದ್ದರೆ ಕೆಲವು ಅನುಕೂಲಗಳು ಇರುವಂತೆಯೇ ಅನಾನುಕೂಲಗಳೂ ಇದ್ದದ್ದೇ.  ಮನೆ ವಿನ್ಯಾಸ ಮಾಡುವಾಗಲಿಂದ ಹಿಡಿದು, ಅದರ ನಿರ್ಮಾಣ ಕಾರ್ಯ ಮುಗಿದ ನಂತರವೂ ನಮ್ಮನ್ನು ಅನೇಕ ರೀತಿಯ ದ್ವಂದ್ವಗಳು ಕಾಡುತ್ತವೆ. ಹಾಗಾಗಿ,  ನಮ್ಮ ಅಗತ್ಯಗಳನ್ನು ಮರು ಪರಿಶೀಲಿಸಿ, ಯಾವುದು ಮುಖ, ಯಾವುದು ಅಮುಖ್ಯ ಎಂದು ನಿರ್ಧರಿಸಿದರೆ ಹೆಚ್ಚು ಸಂಶಯಗಳಿಲ್ಲದೆ ಮುಂದುವರಿಯಲು ಸಾಧ್ಯ. ಹಾಗೆಯೇ,  ಕಟ್ಟಿದ ಮೇಲೆ ಮರುಚಿಂತಿಸುವ ಅಗತ್ಯವೂ ಇರುವುದಿಲ್ಲ!

ಖಾಸಗೀತನದ ಸಂಕೀರ್ಣತೆ
ನಗರಗಳು ಅತಿ ಶೀಘ್ರವಾಗಿ ಅಭಿವೃದ್ಧಿಹೊಂದಲು ಮುಖ್ಯ ಕಾರಣ ಅದರಲ್ಲಿರುವ ವೈವಿಧ್ಯತೆ ಹಾಗೂ ಅನಿಮಿಯತ ಎನ್ನುವಷ್ಟು ಅವಕಾಶಗಳು. ಸೂಜಿಗಲ್ಲಿನಂತೆ ಸೆಳೆಯುವ ನಗರಗಳ ಆಕರ್ಷಣೆ ಇರುವುದೇ ಅದರ ಜನಸಂದಣಿಯಲ್ಲಿ. ಬೇಕೆಂದಾಗ ನಾವು ನಗರದ ಒಂದು ಭಾಗವಾಗಿದ್ದುಕೊಂಡೇ ಖಾಸಗೀತನವನ್ನು ಬಯಸಿದಾಗ ಬೇರೆಲ್ಲಾ ಸ್ಥಳದಲ್ಲಿ ಇರದಿದ್ದರೂ ಮನೆಯಲ್ಲಿ ಅಗತ್ಯವಾಗಿ ಇರಲಿ ಎಂದು ಬಯಸುತ್ತೇವೆ. ಹಳ್ಳಿಗಳ ಕಡೆ, ನೂರಾರು ವರ್ಷಗಳಿಂದ ಅಕ್ಕಪಕ್ಕದವರಾಗಿದ್ದವರಿಗೆ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಖಾಸಗಿತನ ಅಷ್ಟೊಂದು ಮುಖ್ಯ ಆಗುವುದಿಲ್ಲ, ಅಲ್ಲಿ ಒಬ್ಬರಿಗೊಬ್ಬರು ತೀರ ಪರಿಚಿತರೇ ಆಗಿದ್ದು, ಮನೆಯ ಮುಂಬಾಗಿಲನ್ನು ತೆರೆದೇ ಇಟ್ಟಿದ್ದರೂ ಹೆಚ್ಚು ತೊಂದರೆ ಏನೂ ಆಗುವುದಿಲ್ಲ. ಯಾರಾದರೂ ಆಗಂತುಕರು ಹಳ್ಳಿಯನ್ನು ಪ್ರವೇಶಿಸಿದರೆ, ಅಲ್ಲಿರುವ ಪ್ರತಿಯೊಬ್ಬರಿಗೂ ಮತ್ತೂಬ್ಬರು ಪರಿಚಯ ಇರುವುದರಿಂದ, ಕೂಡಲೇ ಗೊತ್ತಾಗಿ ಬಿಡುತ್ತದೆ. ಆದರೆ, ನಗರಗಳಲ್ಲಿ ಹಾಗಲ್ಲ, ಅಕ್ಕಪಕ್ಕದಲ್ಲೇ ವರ್ಷಗಟ್ಟಲೇ ಇದ್ದರೂ ಆಗಂತುಕರಾಗೇ ಉಳಿದಿರಬಹುದು. ಹಾಗಾಗಿ, ನಗರ ಪ್ರದೇಶದ ಖಾಸಗೀತನಕ್ಕೂ ಹಳ್ಳಿಗಳಲ್ಲಿ ಬಯಸುವ ಖಾಸಗೀ ತನಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ.

ಮನೆಯ ಮುಂಬಾಗಿಲು ರಸ್ತೆಗೆ ತೆರೆಯುವಂತಿದ್ದರೆ..
ಒಮ್ಮೆ ಮನೆಯ ಮುಖ್ಯದ್ವಾರ ರಸ್ತೆಗೆ ತೆರೆದುಕೊಳ್ಳುವಂತಿರಲಿ ಎಂದು ನಿರ್ಧರಿಸಿದ ಮೇಲೆ, ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ನಗರ ಪ್ರದೇಶಗಳಲ್ಲಿ ಮನೆಗೆ ಪರಿಚಯ ಇಲ್ಲದವರು, ಒಂದು ಫೋನು ಕೂಡ ಮಾಡದೆ ನೇರವಾಗಿ ಬಂದಿಳಿಯುವುದು ಇಲ್ಲವಾದರೂ, ಮನೆಯಿಂದ ಮನೆಗೆ ಸುತ್ತುವ ವ್ಯಾಪಾರಿಗಳ ಹಾವಳಿ ಹೆಚ್ಚಿರುತ್ತದೆ. ಅದರಲ್ಲೂ ತೆರೆದ ಬಾಗಿಲಿನ ಮೂಲಕ ಮನೆಯೊಳಗೆ, ಈ ವ್ಯಾಪಾರಿಗಳಿಗೆ ತಮ್ಮ ಗ್ರಾಹಕರು ಇದ್ದಾರೆ ಎಂದೆನಿಸಿದರೆ, ಪ್ರತ್ಯಕ್ಷವಾಗಿ ಬಿಡುತ್ತಾರೆ. ಬಾಗಿಲು ಸ್ವಲ್ಪ ಪಕ್ಕದಲ್ಲಿದ್ದರೂ- ಅದನ್ನು ಹುಡುಕುವ ಬದಲು, ಮನೆಯಲ್ಲಿ ಮನೆಯವರು ಇದ್ದಾರೆಯೇ ಎಂದೆಲ್ಲ ಪರಿಶೀಲಿಸುವ ಬದಲು ಮುಂದಿನ ಮನೆಯತ್ತ ಇವರ ಚಿತ್ತ ಇರುತ್ತದೆ. ಆದುದರಿಂದ, ನಿಮ್ಮ ಮನೆಯ ಬಾಗಿಲು ರಸ್ತೆಗೆ ತೆರೆದುಕೊಂಡಿದ್ದರೆ, ಕಾಂಪೌಂಡ್‌ ಗೋಡೆಯ ಮಟ್ಟದಲ್ಲಿ ಮುಖಮಂಟಪದಂತೆ ಒಂದು ಸಣ್ಣ ಸ್ಥಳವನ್ನು ಸೃಷ್ಟಿಸಿ, ಮನೆಯೊಳಗೆ ಕಂಡರೂ ಒಳಗೆ ನುಸುಳದಂತೆ ತಡೆಯೊಡ್ಡುವುದು ಸೂಕ್ತ.

“ಒಂಟಿ ಮಳೆಯರಿಗೆ ತೊಂದರೆ ಕೊಟ್ಟರು’ ಎಂದು ಪತ್ರಿಕೆಯಲ್ಲಿ ಸುದ್ದಿ ಓದಿದರೆ, ನಮ್ಮ ಮನೆಯ ಭದ್ರತೆಯ ಬಗ್ಗೆ ಚಿಂತೆ ಶುರುವಾಗುತ್ತದೆ. ಆದುದರಿಂದ ಮನೆಯ ಬಾಗಿಲು ನೇರವಾಗಿ ರಸ್ತೆಗೆ ತೆರೆದುಕೊಳ್ಳುವಂತೆ ಮನೆಯ ವಿನ್ಯಾಸ ಮಾಡಿದ್ದರೆ, ಕಡೇಪಕ್ಷ ಮೂರು ಅಡಿಗಳಷ್ಟಾದರೂ ತೆರೆದ ಸ್ಥಳವನ್ನು ಕಾಂಪೌಂಡಿಗೂ ಮನೆಗೂ ಬಿಡುವುದು ಅಗತ್ಯ. ಈ ಸ್ಥಳದಲ್ಲಿ ಸಣ್ಣದೊಂದು ಮುಖಮಂಟಪ – ಎನ್‌ಟ್ರನ್ಸ್‌ಪೊàರ್ಚ್‌ ಮಾದರಿಯದನ್ನು ಮಾಡಿಕೊಂಡು, ಅದಕ್ಕೆ ಸೂಕ್ತ ಗ್ರಿಲ್‌ ವ್ಯವಸ್ಥೆ ಸಿದ್ಧಪಡಿಸಿದರೆ, ಸಾಕಷ್ಟು ರಕ್ಷಣೆ ಒದಗಿಸಿದಂತೆ ಆಗುತ್ತದೆ. ಮನೆಯ ಬಾಗಿಲು ತೆರೆದಿದ್ದರೂ, ಈ ಮುಖ ಮಂಟಪದ ಗ್ರಿಲ್‌ ಗೇಟ್‌ಗೆ ಬೀಗ ಹಾಕಿದ್ದರೆ, ಆಗಂತುಕರು ರಸ್ತೆಯಲ್ಲಿಯೇ ಉಳಿಯುವಂತೆ ಆಗುತ್ತದೆ. ಆದರೆ ನಮಗೆ ನಗರ ಜೀವನದ ಲವಲವಿಕೆಯಿಂದ ದೂರ ಉಳಿದಂತೆ ಆಗುವುದಿಲ್ಲ. ಸಣ್ಣ ಮಕ್ಕಳಿಗೆ ಹಾಗೆಯೇ, ಹಿರಿಯರಿಗೂ ಸಂಜೆ ಹೊರಗಿನ ಆಗುಹೋಗುಗಳಿಗೆ ತೆರೆದುಕೊಳ್ಳಲು ಇರುವ ಏಕೈಕ ಮಾರ್ಗ ಈ ಬಾಗಿಲೇ ಆಗಿರುತ್ತದೆ. ತೀರಾ ಹೊರಗೆ ನಿಂತು ನೋಡುವುದಕ್ಕಿಂತ ನಮ್ಮದೇ ಆದ ಸ್ಥಳದಲ್ಲಿ ಒಂದೆರಡು ಕುರ್ಚಿಗಳನ್ನು ಹಾಕಿಕೊಂಡು ಕೂರಲೂ ಕೂಡ ಈ ಸ್ಥಳ ಸೂಕ್ತ. ಜೊತೆಗೆ ಮಕ್ಕಳಿಗೆ ಪ್ರಿಯವಾಗುವ ಈ ಸ್ಥಳದಿಂದ, ಮನೆಯೊಳಗೆ ಪಾಲಕರು ಒಂದೆರಡು ಗಳಿಗೆ ಹೋದರೂ, ಮಕ್ಕಳು ರಸ್ತೆಗೆ ಇಳಿಯುವ ಸಾಧ್ಯತೆ ಇರುವುದಿಲ್ಲ!

Advertisement

ನಗರ ಪ್ರದೇಶಗಳಲ್ಲಿ ಒಂದೊಂದು ಅಡಿಗೂ ಸಾವಿರಾರು ರೂಗಳ ಮೌಲ್ಯ ಇರುವುದರಿಂದ, ಮನೆ ಮುಂದಿನ ಮೂರು ಅಡಿ ಜಾಗಕ್ಕೂ ವಿಶೇಷ ಮಹತ್ವ ಇರುತ್ತದೆ. ಸೈಕಲ್‌, ಸ್ಕೂಟರ್‌ ಇತ್ಯಾದಿಗಳನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು, ಮುಖ ಮಂಟಪವನ್ನೇ ಒಂದಷ್ಟು ಉದ್ದ ಮಾಡಿದರೆ, ಸುರಕ್ಷಿತವಾಗಿ ಸಣ್ಣ ವಾಹನಗಳನ್ನು ನಿಲ್ಲಿಸಲೂ ಆಗುತ್ತದೆ. ಮನೆಯ ಬಾಗಿಲಿನ ಬಳಿ ವಾಹನ ನಿಲ್ಲಿಸಿದಾಗ, ನಮಗೂ  ಸುರಕ್ಷಿತೆಯ ಅನುಭವ ಆಗಿ ನೆಮ್ಮದಿಯೂ ಸಿಗುತ್ತದೆ. ಮಳೆ ಬಿಸಿಲಿನಿಂದ ರಕ್ಷಿ$ಸಿಕೊಳ್ಳಲು ಮೇಲೆ ಕಲಾತ್ಮಕವಾಗಿ ಟೈಲ್ಸ್‌ ಗಳನ್ನು ಹಾಕಿದರೆ ಮನೆಯ ಅಂದ ಮತ್ತಷ್ಟು ಹೆಚ್ಚುತ್ತದೆ. ನಿಮ್ಮ ಮನೆಗೆ ದುಬಾರಿ ಟೀಕ್‌ ಇಲ್ಲವೇ ಇತರೆ ಮರದ ಸುಂದರ ವಿನ್ಯಾಸದ ಕೆತ್ತನೆ ಕೆಲಸ ಮಾಡಿದ ಮುಂಬಾಗಿಲು ಇದ್ದರೆ- ಈ ಮುಖಮಂಟಪ ಅದನ್ನೂ ರಕ್ಷಿಸುತ್ತದೆ. 

ಮನೆ ಕಟ್ಟುವಾಗ ಪ್ರತಿಯೊಂದು ನಿರ್ಧಾರ ತೆಗೆದುಕೊಂಡಾಗಲೂ ಸಾಧಕಬಾಧಕಗಳು ಇದ್ದದ್ದೇ. ಕೆಲವೊಂದನ್ನು ನಮ್ಮ ಅನುಕೂಲಕ್ಕೆ ತಿರುಗಿಸಿಕೊಂಡರೆ ಮುಂದಾಗುವ ಕಿರಿಕಿರಿಗಳಿಂದ ರಕ್ಷಣೆ ಪಡೆಯಬಹುದು. ಈ ಹಿಂದೆ ಈ ಮಾದರಿಯ ಮುಖ ಮಂಟಪಗಳಿಗೆ ಮಲ್ಲಿಗೆ, ಜಾಜಿ ಇತ್ಯಾದಿ ಬಳ್ಳಿಗಳನ್ನು ಹರಡಿ, ಮನೆಗೊಂದು ನೈಸರ್ಗಿಕ ಕಮಾನನ್ನು ಸೃಷ್ಟಿಸುತ್ತಿದ್ದರು. ಈಗ ನಮಗೆ ವರ್ಟಿಕಲ್‌ ಗಾರ್ಡನ್‌ ಹೆಚ್ಚು ಮೆಚ್ಚುಗೆ ಆಗಿರುವುದರಿಂದ, ಖಾಸಗೀತನ ಹೆಚ್ಚಿಸಲು, ಗೇಟಿನ ಅಕ್ಕಪಕ್ಕ ಸಣ್ಣದೊಂದು ಗಾರ್ಡನ್‌ ಮಾಡಿಕೊಳ್ಳಬಹುದು. 

ಆರ್ಕಿಟೆಕ್ಟ್ ಕೆ. ಜಯರಾಮ್‌
ಮಾಹಿತಿಗೆ :98441 32826 

Advertisement

Udayavani is now on Telegram. Click here to join our channel and stay updated with the latest news.

Next