Advertisement

ಪಾಕಿಸ್ಥಾನದ ಹಿಂದೂ ದೇಗುಲಗಳ ಮೇಲಿನ ದಾಳಿ ಖಂಡನಾರ್ಹ

11:27 PM Jul 17, 2023 | Team Udayavani |

1947ರಿಂದಲೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿಕೊಂಡು ಬಂದಿರುವ ಪಾಕಿಸ್ಥಾನ ತನ್ನ ಕುತ್ಸಿತ ಬುದ್ಧಿಯನ್ನು ಮುಂದುವರಿಸುತ್ತಿದೆ. ಕಳೆದ ಎರಡು ದಿನಗಳಲ್ಲಿ ಎರಡು ದೇಗುಲಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಿದ್ದು, ಹಿಂದೂಗಳಿಗೆ ಆಘಾತ ನೀಡಿದೆ. ಮೊದಲಿಗೆ ಡಕಾಯಿತರು ದೇಗುಲವೊಂದರ ಮೇಲೆ ರಾಕೆಟ್‌ ಲಾಂಚರ್‌ಗಳ ಮೂಲಕ ದಾಳಿ ಮಾಡಿದ್ದರೆ, ಕರಾಚಿಯಲ್ಲಿ ಸರಕಾರದ ಪ್ರಾಧಿಕಾರವೇ 150 ವರ್ಷಗಳಷ್ಟು ಹಳೆಯದಾದ ದೇಗುಲವೊಂದನ್ನು ರಾತೋರಾತ್ರಿ ಕೆಡವಿಹಾಕಿದೆ.

Advertisement

ಆರಂಭದಿಂದಲೂ ಪಾಕಿಸ್ಥಾನದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರ ರೀತಿಯೇ ನೋಡಲಾಗುತ್ತಿದೆ. ಹಿಂದೂ ಯುವತಿಯರು, ಹೆಣ್ಣು ಮಕ್ಕಳನ್ನು ಅಪಹರಿಸಿ ಅವರನ್ನು ಮತಾಂತರಗೊಳಿಸಿ ವಿವಾಹ ಮಾಡಿಕೊಳ್ಳುವ ಪದ್ಧತಿಗಳು ಈಗಲೂ ಮುಂದುವರಿಯುತ್ತಿವೆ. ಈ ಬಗ್ಗೆ ಧ್ವನಿ ಎತ್ತದ ಸ್ಥಿತಿಯೂ ಅಲ್ಲಿ ಎದುರಾಗಿದೆ. ಪಾಕಿಸ್ಥಾನದಲ್ಲಿ ದೇಗುಲಗಳ ಮೇಲೆ ನಡೆಸುತ್ತಿರುವ ದಾಳಿ ಈಗಿನದ್ದೇನಲ್ಲ. ಆರಂಭದಿಂದಲೂ ಇದು ನಡೆಯುತ್ತಲೇ ಇದೆ. ಪಾಕಿಸ್ಥಾನದಲ್ಲಿ ಹಿಂದೂ ದೇಗುಲಗಳ ನಿರ್ವಹಣೆಗಾಗಿ ಒಂದು ಪಾಕಿಸ್ಥಾನ ನಿರ್ವಸಿತ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ ಇದೆ. ಸದ್ಯ ಪಾಕಿಸ್ಥಾನದಲ್ಲಿ ಹೆಸರಿಗೆ 365 ದೇಗುಲಗಳಿದ್ದು, ಇದರಲ್ಲಿ 13 ದೇಗುಲಗಳನ್ನು ಮಾತ್ರ ಈ ಮಂಡಳಿ ನಿರ್ವಹಣೆ ಮಾಡುತ್ತಿದೆ. 65 ದೇಗುಲಗಳನ್ನು ಸ್ಥಳೀಯ ಹಿಂದೂಗಳೇ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ವಿಚಿತ್ರವೆಂದರೆ ಈ 65 ದೇಗುಲಗಳ ಮೇಲೆ ಪದೇ ಪದೆ ದುಷ್ಕರ್ಮಿಗಳು ದಾಳಿ ನಡೆಸುತ್ತಲೇ ಇರುತ್ತಾರೆ. ಈ ದಾಳಿಗಳ ಹೆದರಿಕೆಯಿಂದಾಗಿ ಕೆಲವೊಂದು ದೇಗುಲಗಳನ್ನು ನಿರ್ವಹಣೆ ಮಾಡದೆ ಹಾಗೆಯೇ ಬಿಡಲಾಗುತ್ತದೆ. ಇಂಥ ದೇಗುಲಗಳನ್ನು ದುಷ್ಕರ್ಮಿಗಳು ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಿ ಯಾರಿಗಾದರೂ ಮಾರುತ್ತಾರೆ ಅಥವಾ ವಾಣಿಜ್ಯ ಸಂಕೀರ್ಣಗಳನ್ನು ಮಾಡಿಕೊಳ್ಳುತ್ತಾರೆ ಎಂಬ ದೂರುಗಳಿವೆ.

ಇಸ್ಲಾಮಾಬಾದ್‌ನಲ್ಲಿ ಸುಮಾರು 3,000 ಮಂದಿ ಹಿಂದೂಗಳು ವಾಸ ಮಾಡುತ್ತಿದ್ದಾರೆ. ಇವರಿಗೆ ಇಡೀ ನಗರದಲ್ಲಿ ಪ್ರಾರ್ಥನೆಗಾಗಿ ಒಂದೇ ಒಂದು ದೇಗುಲವಿಲ್ಲ. 16ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿರುವ ರಾಮ ಮಂದಿರವಿದ್ದರೂ ಅದರಲ್ಲಿ ಯಾವುದೇ ಮೂರ್ತಿ ಇಲ್ಲ. ಬದಲಾಗಿ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗಿದ್ದು, ಇಲ್ಲಿ ಹಿಂದೂಗಳ ಪ್ರಾರ್ಥನೆ, ಪೂಜೆಗೆ ಅವಕಾಶ ನೀಡಿಲ್ಲ.

2014ರಲ್ಲಿ ಅಖಿಲ ಪಾಕಿಸ್ಥಾನ ಹಿಂದೂ ಹಕ್ಕುಗಳ ಆಂದೋಲನ ಎಂಬ ಸಂಸ್ಥೆಯು ಒಂದು ವರದಿ ಬಿಡುಗಡೆ ಮಾಡಿದ್ದು, ಇದರ ಪ್ರಕಾರ, 1990ರಿಂದ ಈಚೆಗೆ ಪಾಕಿಸ್ಥಾನದಲ್ಲಿದ್ದ ಶೇ.90ರಷ್ಟು ಹಿಂದೂ ದೇಗುಲಗಳನ್ನು ನಾಶ ಮಾಡಲಾಗಿದೆ.

ಪಾಕಿಸ್ಥಾನದ ಸಿಂಧ್‌ ಮತ್ತು ಕರಾಚಿ ಪ್ರಾಂತದಲ್ಲಿ ಹೆಚ್ಚಾಗಿ ಹಿಂದೂ ದೇಗುಲಗಳ ಮೇಲೆ ದಾಳಿ ಆಗುತ್ತಲೇ ಇರುತ್ತದೆ. ಕಳೆದ ಎರಡು ದಿನಗಳಲ್ಲಿ ಆಗಿರುವ ದಾಳಿಯೂ ಇಲ್ಲಿಯದ್ದೇ. ಹಿಂದೂ ದೇಗುಲಗಳು ಮತ್ತು ಹಿಂದೂ ಧರ್ಮೀಯರನ್ನೇ ಗುರಿಯಾಗಿಸಿ ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಾರೆ. ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತಿ, ಪಾಕಿಸ್ಥಾನ ಸರಕಾರಕ್ಕೆ ಬಿಸಿ ತಗಲುವಂತೆ ಮಾಡಬೇಕು. ಈ ಮೂಲಕ ಅಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು. ಅಲ್ಲದೆ ಅಲ್ಲಿ ಅಲ್ಪಸಂಖ್ಯಾಕರಾಗಿರುವ ಹಿಂದೂಗಳ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ಥಾನಕ್ಕೆ ಮನಗಾಣಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next