Advertisement

ಒಂದೇ ಕೈಯಲ್ಲಿ ಬ್ಯಾಟಿಂಗ್‌, ಬೌಲಿಂಗ್‌

03:55 AM Mar 25, 2017 | |

ಮನೆಯಲ್ಲಿ ಕಡು ಬಡತನ. ಈ ನಡುವೆ ಚೆನ್ನಾಗಿ ಓದಿ ಮುಂದೆ ಬರಬೇಕೆಂಬ ಛಲ. ಮತ್ತೂಂದೆಡೆ ಕ್ರಿಕೆಟ್‌ ಜಗತ್ತಿನಲ್ಲಿ ಹೆಸರು ಮಾಡಬೇಕೆಂಬ ಹಂಬಲ. ಇಂತಹ ಅಮೂಲ್ಯ ಕನಸು ಕಟ್ಟಿಕೊಂಡವರು ರಾಜ್ಯದ ಅಂಗವಿಕಲ ಕ್ರಿಕೆಟಿಗ ಜಿ.ಎಸ್‌.ಶಿವಶಂಕರ್‌.

Advertisement

ಸದಾ ಬರಗಾಲದ ದವಡೆಗೆ ಸಿಲುಕಿ ತಲ್ಲಣಗೊಂಡಿರುವ ಬಾಗೇಪಲ್ಲಿ ತಾಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಟಿಗಾನಪಲ್ಲಿ ಗ್ರಾಮದ ರೈತ ಸುಬ್ಬರಾಯಪ್ಪ ಮತ್ತು ನಂಜಮ್ಮ ದಂಪತಿಗಳ ದ್ವಿತೀಯ ಪುತ್ರ ಜಿ.ಎಸ್‌.ಶಿವಶಂಕರ್‌ ಆಗಿದ್ದಾರೆ. 6ನೇ ವಯಸ್ಸಿನಲ್ಲಿ ಸಂಭವಿಸಿದ ಬಸ್‌ ಅಪಘಾತವೊಂದರಲ್ಲಿ ಬಲಗೈ ಕಳೆದುಕೊಂಡ ಶಿವಶಂಕರ್‌ ಛಲ ಬಿಡದ ತ್ರಿವಿಕ್ರಮನಂತೆ ಸತತ ಪರಿಶ್ರಮದಿಂದ ಕ್ರಿಕೆಟ್‌ ಆಟವನ್ನು ಕರಗತ ಮಾಡಿಕೊಂಡಿದ್ದಾರೆ. ಒಂಟಿ ಗೈಯಿಂದಲೇ ಲೀಲಾಜಾಲವಾಗಿ ಕ್ರಿಕೆಟ್‌ ಆಡುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಿದ್ದಾರೆ. ರಾಜ್ಯ ತಂಡಕ್ಕೂ ಆಯ್ಕೆಯಾಗಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

ಒಂದು ಕಡೆ ಕ್ರಿಕೆಟ್‌, ಮತ್ತೂಂದು ಕಡೆ ಶಿಕ್ಷಣ
ಕರ್ನಾಟಕ ರಾಜ್ಯ ಅಂಗವಿಕಲರ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿರುವ ಶಿವಶಂಕರ್‌ ಐದನೇ ತರಗತಿವರೆಗೆ ಗುಂಟಿಗಾನಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಐದರಿಂದ ಏಳನೇ ತರಗತಿಯವರೆಗೆ ಯಲ್ಲಂಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರ ಎಂಟರಿಂದ ಹತ್ತನೇ ತರಗತಿ ವರೆಗೆ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ, ನಂತರ ಸ್ಥಳೀಯ ನ್ಯಾಷನಲ್‌ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾನೆ. ಪ್ರಸ್ತುತ ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ನೋವು ಮರೆಸಿದ ಸಾಧನೆಯ ಛಲ
ವಿಧಿಯಾಟ ಎಂಬಂತೆ ತನ್ನ 6ನೇ ವಯಸ್ಸಿನಲ್ಲಿಯೇ ಬಲಗೈ ಕಳೆದುಕೊಂಡಿರುವ ಶಿವಶಂಕರ್‌ಗೆ ಅಂಗವೈಕಲ್ಯತೆ ಬಗ್ಗೆ ಯಾವುದೇ ಅಳುಕಿಲ್ಲ. ಅವನಲ್ಲಿರುವ ಗುರಿ ಸಾಧನೆಯ ಛಲ ಅಂಗವೈಕಲ್ಯತೆಯ ನೋವನ್ನು ಮರೆಸಿಬಿಟ್ಟಿದೆ. ಬದಲಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆತ ಇಂದು ಎಡಗೈನಿಂದಲೇ ಕ್ರಿಕೆಟ್‌ ಆಟವನ್ನು ಲೀಲಾಜಾಲವಾಗಿ ಆಡುತ್ತಾನೆ. ಬ್ಯಾಟ್‌ ಹಿಡಿದು ಮೈದಾನಕ್ಕಿಳಿದರೆ ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ದಂಡಿಸುತ್ತಾನೆ. ಅಲ್ಲದೇ, ಎದುರಾಳಿ ಆಟಗಾರರು ಮೈದಾನದ ತುಂಬ ಓಡಾಡುವಂತೆ ಬ್ಯಾಟ್‌ ಬೀಸುತ್ತಾನೆ.

 ಚಿಕ್ಕಂದಿನಿಂದಲೇ ಕ್ರಿಕೆಟ್‌ ಗೀಳು
ಚಿಕ್ಕಂದಿನಿಂದಲೇ ಕ್ರಿಕೆಟ್‌ ಗೀಳು ಇಟ್ಟುಕೊಂಡಿದ್ದ ಶಿವಶಂಕರ್‌ ಶಾಲೆ ಮುಗಿದ ಮೇಲೆ ಸಂಜೆ ಸ್ನೇಹಿತರ ಜೊತೆ ಕ್ರಿಕೆಟ್‌ ಆಟವಾಡುತ್ತಿದ್ದ. ಈ ಹವ್ಯಾಸ ಹೈಸ್ಕೂಲ್‌, ಕಾಲೇಜು ಜೀವನದಲ್ಲಿಯೂ ಮುಂದುವರಿದಿತ್ತು. ಈತನ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ ಕರ್ನಾಟಕ ರಾಜ್ಯ ಅಂಗವಿಕಲರ ಕ್ರಿಕೆಟ್‌ ಮಂಡಳಿ ರಾಜ್ಯ ತಂಡಕ್ಕೆ ಆಯ್ಕೆ ಮಾಡಿದೆ.

Advertisement

ಅಂತರ್‌ ರಾಜ್ಯ ಪಂದ್ಯಾವಳಿಯಲ್ಲಿ ಭಾಗಿ
ಮಾ.12, 13, 14 ರಂದು ಆಂಧ್ರಪ್ರದೇಶದ ಅನಂತಪುರಂನಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಅಂಗವಿಕಲರ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಶಿವಶಂಕರ್‌ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಮಾಡಿ 4 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಪತನಗೊಳಿಸಿದ್ದರು. ಪಾಂಡಿಚೇರಿ, ಆಂಧ್ರ ಪ್ರದೇಶ ವಿರುದ್ಧ ಬೌಂಡರಿ, ಸಿಕ್ಸರ್‌ ಮಳೆ ಸುರಿಸಿದ್ದಾರೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅಂದರೆ ಹುಚ್ಚು ಅಭಿಮಾನ. ಅವರನ್ನು ಭೇಟಿ ಆಗಬೇಕು ಅನ್ನುವ ಕನಸು ಕಂಡು ನನಸಾಗಿಸಿಕೊಂಡಿದ್ದಾರೆ. ಇದೇ ಸಂತಸದಲ್ಲಿ ಅವರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ.

ಇನ್ನಷ್ಟು ಹೆಚ್ಚಿನ ತರಬೇತಿ ಪಡೆದು ಮುಂದಿನ ದಿನಗಳಲ್ಲಿ ಕೋಚ್‌ಗಳ ಸಹಕಾರದೊಂದಿಗೆ ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌)ಪಂದ್ಯಕ್ಕೆ ಆಯ್ಕೆಯಾಗಬೇಕೆಂಬುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸುತ್ತೇನೆಂಬ ಆತ್ಮವಿಶ್ವಾಸ ನನ್ನಲ್ಲಿದೆ.
ಜಿ.ಎಸ್‌.ಶಿವಶಂಕರ್‌, ಅಂಗವಿಕಲ ಕ್ರಿಕೆಟಿಗ, ಬಾಗೇಪಲ್ಲಿ

ಬಿ.ಆರ್‌.ಕೃಷ್ಣ 

Advertisement

Udayavani is now on Telegram. Click here to join our channel and stay updated with the latest news.

Next