ಗೌರ್ಮೆಂಟ್ ಕೆಲಸ ಸಿಕ್ಕರೆ ಸಾಕು, ಲೈಫು ಸೆಟ್ಲು ಎಂದು ಆಶಿಸುವವರ ಸಂಖ್ಯೆ ಈಗೀಗ ಹೆಚ್ಚು. ಅಂಥದ್ದರಲ್ಲಿ ಈಕೆಯ ಮನೆಯ ಬಾಗಿಲಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ಬಾರಿ ಒಲಿದುಬಂದ ಸರ್ಕಾರಿ ನೌಕರಿ ಆಫರ್ ಅನ್ನು ನಯವಾಗಿ ಬೇಡವೆಂದ ಗಟ್ಟಿಗಿತ್ತಿಯೊಬ್ಬಳ ಯಶೋಗಾಥೆ ಇದು. ಕೊಪ್ಪಳ ಜಿಲ್ಲೆ ವದಗನಾಳ ಗ್ರಾಮದ ದಾಕ್ಷಾಯಣಿ ಎಚ್. ಮಾಲಿಪಾಟೀಲ್, ಸರ್ಕಾರಿ ಹುದ್ದೆ ಹಿಡಿಯಲು ಅನುಸರಿಸಬೇಕಾದ ಗುಟ್ಟುಗಳ ಬಗ್ಗೆ ಹೇಳಿಕೊಂಡಿದ್ದಾರೆ…
ಒಂದು ಸರ್ಕಾರಿ ಕೆಲ್ಸನ ಕೈಗಿಡುತ್ತೀ ಅನ್ನೋದಾದ್ರೆ, ಬೇರೇನನ್ನೂ ಬೇಡೆನು ದೇವರೇ…
ಬೇಕಾದರೆ ನೀವು ದೇವರನ್ನೇ ಕೇಳಿಬಿಡಿ. ಆತ ನಿತ್ಯ ಕೇಳುವ ಪ್ರಾರ್ಥನೆಗಳಲ್ಲಿ ಯಾವುದು ಮತ್ತೆ ಮತ್ತೆ ರಿಪೀಟ್ ಆಗುತ್ತೆ ಅಂತ. ಇಂದು, “ಗೌರ್ಮೆಂಟ್ ಕೆಲ್ಸ ಕೊಡಿಸಿಬಿಡು ತಂದೆ’ ಎಂದು ಬೇಡುವ ಯುವಜನರೇ ಹೆಚ್ಚು. ಹಾಗೆ ಬೇಡುವವರಲ್ಲಿ ಅನೇಕರು ಅದೃಷ್ಟಕ್ಕಾಗಿ ಕಾಯುತ್ತಾರೆ. ಆದರೆ, ನಾನು ಹಾಗೆ ಕಾದು ಕೂರಲೇ ಇಲ್ಲ. ಹಗಲು- ರಾತ್ರಿ ಶ್ರಮ ಹಾಕಿದೆ. ಅದರ ಫಲವಾಗಿ ನನಗೆ, 9 ಸರ್ಕಾರಿ ಕೆಲಸಗಳು ಒಟ್ಟೊಟ್ಟಿಗೆ ಸಿಕ್ಕಿಬಿಟ್ಟವು! ಅದರಲ್ಲಿ 8 ಹುದ್ದೆಯನ್ನು ತಿರಸ್ಕರಿಸಿ, ಒಂದನ್ನು ಮಾತ್ರವೇ ಒಪ್ಪಿಕೊಂಡೆ.
ನಾನು ಕೊಪ್ಪಳದ ವದಗನಾಳು ಹುಡುಗಿ; ಹೆಸರು, ದಾಕ್ಷಾಯಣಿ ಎಚ್. ಮಾಲಿಪಾಟೀಲ್. 18 ಜನರನ್ನೊಳಗೊಂಡ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದವಳಾದರೂ, ಸರ್ಕಾರಿ ಕೆಲಸ ಅಂತ ಪಡೆದಿದ್ದು ನಾನೊಬ್ಬಳೇ. ಎಸ್ಸೆಸ್ಸೆಲ್ಸಿಯಲ್ಲಿ ಶೇ.80 ಅಂಕ ಪಡೆದಾಗಲೇ ನನ್ನೊಳಗೆ ಒಂದು ಛಲ ಹುಟ್ಟಿತ್ತು. ಪಿಯುಸಿಯಲ್ಲಿ ವಿಜ್ಞಾನ ಆಯ್ದುಕೊಂಡಾಗ, ಶೇ.55 ಅಂಕಕ್ಕಷ್ಟೇ ತೃಪ್ತಿಪಟ್ಟಿದ್ದೆ. ಅದೇಕೋ, ಆ ವಿಜ್ಞಾನಕ್ಕೂ ನನಗೂ ಅಷ್ಟಾಗಿ ಕೆಮಿಸ್ಟ್ರಿ ಕೂಡಿಬರಲೇ ಇಲ್ಲ. ಡಿ.ಎಡ್. ಕಡೆಗೆ ಹೊರಟುಬಿಟ್ಟೆ. ಶೇ.89 ಅಂಕಗಳು ಬಂದವು. ಬಿ.ಎ.ನಲ್ಲಿ ಶೇ.76, ಬಿ.ಎಡ್.ನಲ್ಲಿ ಶೇ.85 ಹಾಗೂ ಎಂ.ಎ.ನಲ್ಲಿ ಶೇ.78 ಅಂಕ ಪಡೆದು, ಒಂದು ರೇಂಜ್‌ಗೆ ನನ್ನ ಜ್ಞಾನದ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದೆ.
ಎಲ್ಲಿ ನೋಡಿದರೂ, ಸರ್ಕಾರಿ ಕೆಲಸಕ್ಕೆ ಹಂಬಲಿಸುವವರೇ ಕಣ್ಣಿಗೆ ಬೀಳುತ್ತಿದ್ದರು. ನಾನೂ ಏಕೆ ಅಂಥ ನೌಕರಿ ಹಿಡಿಯಬಾರದು ಅಂತನ್ನಿಸಿತು. ಒಂದು ಕೈ ನೋಡಿಯೇ ಬಿಡೋಣ ಎಂದು 2016ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದೇ ಬಿಟ್ಟೆ. ಎರಡು ಬಾರಿ ಸಫಲತೆ ಸಿಗಲಿಲ್ಲ. ನಂತರ ಎಂಟು ಬಾರಿ ಕೆಪಿಎಸ್ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದೆ. ಯೋಗಾ ಯೋಗವೋ ಏನೋ, ಎಲ್ಲದರಲ್ಲೂ ಯಶಸ್ಸು ಸಿಕ್ಕಿತು. ಫೈನಲ್ ಲಿಸ್ಟ್‌ನಲ್ಲಿ ನನ್ನ ಹೆಸರು ಇದ್ದೇ ಇರುತ್ತಿತ್ತು. ಎಲ್ಲ ಎಂಟು ಬಾರಿ ನೇಮಕಾತಿ ಪತ್ರ ಮನೆಗೇ ಬಂದಿತ್ತು. ಆದರೆ, ಅಷ್ಟರಲ್ಲಿ ಉಪನ್ಯಾಸಕಿ ಆಗಬೇಕೆಂಬ ಹಂಬಲ ಹೆಚ್ಚುತ್ತಾ ಹೋಯಿತು. ಹಾಗಾಗಿ, ಅರಸಿ ಬಂದ ಸರ್ಕಾರಿ ಉದ್ಯೋಗವನ್ನು ನಿರಾಕರಿಸಿದೆನೇ ವಿನಾ ಬೇರಾವ ಉದ್ದೇಶದಿಂದಲೂ ಅಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ಜ್ಞಾನಾರ್ಜನೆ ಹೆಚ್ಚುತ್ತೆ ಅನ್ನೋದು ನನ್ನ ಅನಿಸಿಕೆ. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಿದೆ. ಒಂಭತ್ತನೇ ಸಲ ಕರ್ನಾಟಕ ಶಿಕ್ಷಣ ಆಯೋಗ (ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಶಿಕ್ಷಕಿಯಾಗಿ ನೇಮಕಗೊಂಡೆ. ಕಳೆದ ಎರಡು ತಿಂಗಳಿನಿಂದ ನಮ್ಮೂರಿಗೆ ಹತ್ತಿರದಲ್ಲೇ ಇರುವ ಕಿನ್ನಾಳ ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಐಎಎಸ್, ಕೆಎಎಸ್‌ನಂಥ ಆಡಳಿತಾತ್ಮಕ ಸೇವೆಗೆ ಹೋಗಲು ಯಾಕೋ ಮನಸ್ಸಿಲ್ಲ.
ಮೊದಲು ಸ್ಪರ್ಧಾತ್ಮಕ ಪರೀಕ್ಷೆ ತುಂಬಾ ಕಷ್ಟ, ನೂರಕ್ಕೆ ನೂರರಷ್ಟು ಅಂಕ ಪಡೆದರಷ್ಟೇ ಉದ್ಯೋಗ ಸಿಗುತ್ತೆ ಎಂದೆಲ್ಲ ಅಂದುಕೊಂಡಿದ್ದೆ. ಆದರೆ, ಇದು ಸುಳ್ಳು ಎಂಬುದು ನಂತರ ಗೊತ್ತಾಯಿತು. 2016ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರ್‌ವೈಸರ್ ಕೆಲಸಕ್ಕೆ ಆಯ್ಕೆಯಾದಾಗ ಶೇ.76 ಅಂಕ ಪಡೆದಿದ್ದೆ. ನನಗಿಂತ ಕಡಿಮೆ ಅಂಕ ಪಡೆದವರೂ ನೇಮಕಗೊಂಡಿದ್ದನ್ನು ಕಂಡು ನಾನಂದುಕೊಂಡಿದ್ದೇ ತಪ್ಪು ಎನ್ನಿಸಿತು. ನನ್ನ ಯಶಸ್ಸಿನಲ್ಲಿ ಕುಟುಂಬದವರು, ಶಿಕ್ಷಕರು, ಸ್ನೇಹಿತ- ಸ್ನೇಹಿತೆಯರು ಹಾಗೂ ಕೊಪ್ಪಳದ ಖಾಸಗಿ ಕೋಚಿಂಗ್ ಸೆಂಟರ್ ಪಾತ್ರವೂ ಮಹತ್ವದ್ದು. ಓದುವುದೆಂದರೆ ನನಗೊಂಥರಾ ಗೀಳು. ಸದಾ ಪುಸ್ತಕ ಹಿಡಿದೇ ಇರುತ್ತೇನೆ. ಎಂದಿಗೂ ಖಾಲಿ ಕೂರುವುದಿಲ್ಲ.
ಅದೃಷ್ಟಕ್ಕಿಂತ ಪ್ರಯತ್ನ ಬಲದಲ್ಲೇ ನಂಬಿಕೆಯುಳ್ಳವಳು ನಾನು. ಕಠಿಣ ಪರಿಶ್ರಮ ಪಟ್ಟರೆ ಅದೃಷ್ಟ ಬೆನ್ನಟ್ಟಿ ಬರುತ್ತದೆ. 10-20 ಸ್ಪರ್ಧಾತ್ಮಕ ಪರೀಕ್ಷೆ ಬರೆದೆ ಎಂದುಕೊಂಡು ಅಡ್ಡಾಡುವುದಕ್ಕಿಂತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಹಾಗಂತ ಸಾವಿರಾರು ಪುಸ್ತಕ ಓದಿದರೆ ಪ್ರಯೋಜನವಿಲ್ಲ. ಅದರಿಂದ ಗೊಂದಲವೇ ಹೆಚ್ಚು. ಆದ್ದರಿಂದ ಏನು ಓದಬೇಕು, ಯಾವುದನ್ನು ಎಷ್ಟು ಓದಬೇಕು ಎಂಬ ಪರಿಜ್ಞಾನ ಮುಖ್ಯ. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪುನರ್ ಮನನ ಮಾಡಿಕೊಳ್ಳುತ್ತಿರಬೇಕು.
ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದರಿಂದಲೇ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿತರೆ ಕೆಲಸ ಸಿಗಲ್ಲ ಎಂಬ ಕೀಳರಿಮೆಯಿಂದ ಹೊರಬಂದರೆ ಖಂಡಿತವಾಗಿಯೂ ಉನ್ನತ ಹಂತಕ್ಕೇರಬಹುದು.
ಯಾವೆಲ್ಲ ನೌಕರಿ ಸಿಕ್ಕಿತ್ತು?
1. ಸಮಾಜಕಲ್ಯಾಣ ಇಲಾಖೆ ಸೂಪರ್‌ವೈಸರ್
2. ಆಶ್ರಮ ಶಾಲೆ ಶಿಕ್ಷಕಿ.
3. ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್
4. ಮೊರಾರ್ಜಿ ಶಾಲೆ ವಾರ್ಡನ್.
5. ಮೊರಾರ್ಜಿ ಶಾಲೆ ಕನ್ನಡ ಶಿಕ್ಷಕಿ.
6. ಮೊರಾರ್ಜಿ ಶಾಲೆ ಸಮಾಜ ವಿಜ್ಞಾನ ಶಿಕ್ಷಕಿ
7. ನವೋದಯ ಶಾಲೆ ಶಿಕ್ಷಕಿ
8. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ
ಸರ್ಕಾರಿ ಕೆಲ್ಸದ ಕನಸು ಕಾಣೋರಿಗೆ ದಾಕ್ಷಾಯಣಿ ಟಿಪ್ಸ್
1. ಕಠಿಣ ಪರಿಶ್ರಮ-ಆತ್ಮವಿಶ್ವಾಸ ಇರಬೇಕು.
2. ಓದಿನಲ್ಲಿ ತಂತ್ರಗಾರಿಕೆ ಅಳವಡಿಸಿಕೊಳ್ಳಬೇಕು. ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು.
3. ಏನು ಓದಿರುತ್ತೇವೆಯೋ ಅದನ್ನು ಫ್ರೆಂಡ್ಸ್ ಜೊತೆ ಶೇರ್ ಮಾಡಿಕೊಳ್ಳಬೇಕು.
4. ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರ ಮಾರ್ಗದರ್ಶನ ಪಡೆಯಬೇಕು.
5. ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿರಬೇಕು. ಸಾಮಾನ್ಯ ಜ್ಞಾನದ ಬಗ್ಗೆಯೂ ಲಕ್ಷ್ಯ ಇಟ್ಟಿರಬೇಕು.
6. ಮೊಬೈಲ್ ಬಳಕೆ ಒಳ್ಳೆಯ ವಿಚಾರ ಅರಿತುಕೊಳ್ಳಲು ಮಾತ್ರವೇ ಇರಲಿ.
ನಿರೂಪಣೆ: ಅರವಿಂದ ಹೆಗಡೆ