ಸಾಗರ: ಗೋ ಸಂರಕ್ಷಣೆಯ ಬಹು ದೊಡ್ಡ ಜವಾಬ್ದಾರಿಯನ್ನು ಒಬ್ಬಂಟಿಯಾಗಿ ನಿರ್ವಹಿಸುವಾಗ ಹಲವು ಬಾರಿ ಆಂತಂಕಗಳು ಕಾಡುತ್ತಿದ್ದವು. ಆದರೆ, ಸಮಾಜದ ವಿವಿಧ ಸಂಘಟನೆಗಳು ಈ ಕಾರ್ಯದಲ್ಲಿ ಕೈ ಜೋಡಿಸಿದಾಗ ಕೇವಲ ಆರ್ಥಿಕ ಸಮಾಧಾನ ಈಡೇರುವುದಿಲ್ಲ. ಅದು ಈ ಹೋರಾಟಕ್ಕೆ ನೂರು ಆನೆಗಳ ಬಲದಷ್ಟು ಉತ್ಸಾಹ ತುಂಬುತ್ತದೆ ಎಂದು ಕುಂಟಗೋಡಿನ ಪುಣ್ಯಕೋಟಿ ಗೋ ರಕ್ಷಣಾ ವೇದಿಕೆಯ ಗೋಶಾಲೆಯ ನಿರ್ವಾಹಕ ಪುರುಷೋತ್ತಮ ಹೇಳಿದರು.
ನಗರದ ಶ್ರದ್ಧಾ ಹವ್ಯಕ ಭಜನಾ ಮಂಡಳಿಯ ಸದಸ್ಯೆಯರು ಕಾರ್ತಿಕ ಮಾಸದ ಉದ್ದಕ್ಕೂ ಮನೆಮನೆಗೆ ತೆರಳಿ ಅಂಟಿಗೆ
ಪಂಟಿಗೆ ಸಂಪ್ರದಾಯದ ಹಬ್ಬದ ಹಾಡು ಹೇಳಿ ಸಂಗ್ರಹಿಸಿದ ಮೊತ್ತದಲ್ಲಿ ಪುಣ್ಯಕೋಟಿ ಗೋಶಾಲೆಗೆ ನೀಡಿದ ಒಂದು ಲಾರಿ ಭರ್ತಿ ಬೈಹುಲ್ಲನ್ನು ತಮ್ಮ ಗೋಶಾಲೆಯ ಆವರಣದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.
ಗೋವುಗಳನ್ನು ಬಗ್ಗೆ ದೊಡ್ಡ ಪ್ರಮಾಣದಲ್ಲಿ ಪೋಷಿಸುವ, ಬೆಳೆಸುವ ಮಾತುಗಳನ್ನು ಕೇಳುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿಯೇ ಕೊಟ್ಟಿಗೆ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಪ್ರತಿಯೊಂದನ್ನೂ ಲಾಭದಲ್ಲಿ ನೋಡುವ ಮನೋಭಾವದಿಂದಲೇ ಅವನತಿ ಕಾಣುತ್ತಿದ್ದೇವೆ ಎಂದರು.
ಶ್ರದ್ಧಾ ಹವ್ಯಕ ಭಜನಾ ಮಂಡಳಿಯ ಅಧ್ಯಕ್ಷೆ ಗಿರಿಜಾ ರಾಮಚಂದ್ರ ಮಾತನಾಡಿ, ಕಾರ್ತಿಕ ಮಾಸದ ಸಂದರ್ಭದಲ್ಲಿ ಮನೆಮನೆಗೆ ತೆರಳಿ ನಮ್ಮ ಗುಂಪು ಹಬ್ಟಾಡುವ ಪದ್ಧತಿಯನ್ನು ಜೀವಂತವಿಡುವ ಪ್ರಯತ್ನ ನಡೆಸಿದ್ದೆವು. ಈ ಬಾರಿ ಆಹ್ವಾನ ನೀಡಿದವರ ಮನೆಗೆ ಮಾತ್ರ ಭೇಟಿ ನೀಡಲು ಸಾಧ್ಯವಾಗಿತ್ತು. ಮುಂದಿನ ವರ್ಷ ನಾವು ಹೆಚ್ಚು ವ್ಯಾಪಕವಾಗಿ ಹಬ್ಟಾಡಲು ನಿರ್ಧರಿಸಿದ್ದೇವೆ. ನಮ್ಮ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡು ಬೇರೆ ಬೇರೆ ಗುಂಪುಗಳನ್ನು ಮಾಡಿ ಸಂಪ್ರದಾಯವನ್ನು ವಿಸ್ತರಿಸುವ ಯೋಚನೆಯೂ ಇದೆ ಎಂದರು.
ಪುಣ್ಯಕೋಟಿ ಗೋ ರಕ್ಷಣಾ ವೇದಿಕೆಯ ಟ್ರಸ್ಟಿ ಸೀತಾರಾಂ ಕುಂಟಗೋಡು, ಎಸ್.ವಿ. ಭಟ್, ನಗರಸಭೆ ಸದಸ್ಯ ಉಮೇಶ್, ಶೋಭಾ ದೀಕ್ಷಿತ್, ಶಿವಪ್ಪ, ಶ್ರದ್ಧಾ ಹವ್ಯಕ ಭಜನಾ ಮಂಡಳಿಯ ಎಲ್.ಎಸ್. ಶ್ಯಾಮಲಾ ಭಟ್, ವೀಣಾ ಸತೀಶ್, ವಿಜಯ, ಸುಜಾತಾ ಇದ್ದರು. ಕೆ. ನಿರ್ಮಲಾ ಸ್ವಾಗತಿಸಿದರು.