ಹೊಸದಿಲ್ಲಿ: ಏಕದಿನ ವಿಶ್ವಕಪ್‌ಗೆ ಇನ್ನು ಎರಡೇ ತಿಂಗಳು ಬಾಕಿ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂಡಿತರೆಲ್ಲ ತಮ್ಮ ನೆಚ್ಚಿನ ತಂಡಗಳನ್ನು ಹೆಸರಿಸುತ್ತಿದ್ದಾರೆ. ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸುನೀಲ್ ಗಾವಸ್ಕರ್ ಕೂಡ ಈ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಗಾವಸ್ಕರ್ ಪ್ರಕಾರ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಲ್ಲ. ಅವರು ಆತಿಥೇಯ ಇಂಗ್ಲೆಂಡನ್ನು ಕಪ್ ಎತ್ತುವ ಫೇವರಿಟ್ ತಂಡ ಎಂಬುದಾಗಿ ಹೇಳಿದ್ದಾರೆ.
“ಇಂಗ್ಲೆಂಡ್‌ನಲ್ಲೇ ವಿಶ್ವಕಪ್ ನಡೆಯುವ ಕಾರಣ ಇಲ್ಲಿನ ಪಿಚ್‌ಗಳು ಹೆಚ್ಚಾಗಿ ಇಂಗ್ಲೆಂಡ್ ಆಟಗಾರರಿಗೆ ಸಹಕಾರಿಯಾಗಿರುತ್ತವೆ. ಅಲ್ಲದೇ ಇಂಗ್ಲೆಂಡ್ ಸಾಕಷ್ಟು ಮಂದಿ ಏಕದಿನ ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದೆ. ಇವರೆಲ್ಲರೂ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ಮೊದಲ ಸಲ ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಿದೆ’ ಎಂದು ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದು ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುವ 5ನೇ ವಿಶ್ವಕಪ್ ಪಂದ್ಯಾವಳಿ. ಆದರೆ ಒಮ್ಮೆಯೂ ಇಂಗ್ಲೆಂಡಿಗೆ ಕಪ್ ಎತ್ತಲಾಗಿಲ್ಲ. 3 ಸಲ ಫೈನಲ್ ತಲುಪಿಯೂ ಎಡವಿದೆ. ಕ್ರಿಕೆಟ್ ಜನಕರೆಂಬ ಖ್ಯಾತಿಯ ಆಂಗ್ಲರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಡುತ್ತಿದೆ.
“ತವರಿನ ತಂಡಕ್ಕೆ ಕಪ್ ಒಲಿಯದು ಎಂಬ ನಂಬಿಕೆ ಈಗ ಹೊರಟುಹೋಗಿದೆ. 2011ರಲ್ಲಿ ಭಾರತ, ಕಳೆದ ಸಲ ಆಸ್ಟ್ರೇಲಿಯ ತಮ್ಮ ತವರಲ್ಲೇ ಟ್ರೋಫಿ ಎತ್ತಿವೆ. ಈ ಬಾರಿ ಇಂಗ್ಲೆಂಡಿಗೆ ಇಂಥದೊಂದು ಸಾಧನೆ ಮಾಡುವ ಅವಕಾಶ ಉಜ್ವಲವಾಗಿದೆ’ ಎಂದು ಗಾವಸ್ಕರ್ ಹೇಳಿದರು.