ಸಂಜೆ ತರಗತಿ ಮುಗಿಸಿ ಸುಸ್ತಾಗಿ ಬಸ್ಸು ಹತ್ತಿದವಳೇ ಕಿಟಕಿ ಬದಿಯ ಸೀಟು ಹುಡುಕಾಡಿ ಕುಳಿತುಬಿಟ್ಟೆ. ಎಂದಿನಂತೆ ಕಂಡಕ್ಟರ್‌ಗೆ ಬಸ್ ಪಾಸ್ ತೋರಿಸಿ ಹಾಗೆ ಕಣ್ಮುಚ್ಚಿದೆ. ಅದೇಕೋ ಯಾವತ್ತೂ ಸೀಟಿನಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ನನ್ನನ್ನು ಆವರಿಸುತ್ತಿದ್ದ ನಿದ್ದೆಯ ಸುಳಿವೇ ಇರಲಿಲ್ಲ. ಬಸ್ಸಿನಲ್ಲಿ ಸುಮಾರು ಒಂದು ತಾಸಿನ ಪ್ರಯಾಣ ಬೆಳೆಸಬೇಕಾಗಿದ್ದರಿಂದ ಇನ್ನೇನು ಮಾಡುವುದೆಂದು ತೋಚದೆ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದೆ.
ಪೈಪೋಟಿ ಏರ್ಪಟ್ಟಂತೆ ವೇಗವಾಗಿ ಚಲಿಸುತ್ತಿದ್ದ ವಾಹನಗಳು, ಅದರ ನಡುವೆಯೂ ಕಂಗೊಳಿಸುತ್ತಿದ್ದ ಹಸಿರ ವಾತಾವರಣ, ಜೊತೆಗೆ ತಣ್ಣನೆ ಬೀಸುತ್ತಿದ್ದ ಗಾಳಿಯಿಂದ ನಿಧಾನವಾಗಿ ನಿದ್ದೆಯ ಅಮಲೇರಲಾರಂಭಿಸಿತು. ಅದಾಗಲೇ ಅರ್ಧದಾರಿ ದಾಟಿದ್ದರಿಂದ ಪಕ್ಕದಲ್ಲಿ ಕುಳಿತಿದ್ದ ಗೆಳತಿಯ ಬಳಿ, “ಹೇ, ನಾನು ಸ್ವಲ್ಪ ಮಲಗ್ತಿನಿ, ಸ್ಟಾಪ್ ಬಂದಾಗ ಎಚ್ಚರಿಸು’ ಎಂದು ಹೇಳಿ ನಿಶ್ಚಿಂತೆಯಿಂದ ಮಲಗಿಬಿಟ್ಟೆ. ಇಯರ್ ಫೋನ್‌ನಿಂದ ಕೇಳಿಬರುತ್ತಿದ್ದ ಮಧುರ ಸಂಗೀತ ನನ್ನನ್ನು ಕನಸಲೋಕಕ್ಕೆ ಕರೆದೊಯ್ದಿತ್ತು.
ಸ್ವಲ್ಪ ಸಮಯದ ಬಳಿಕ ಎಚ್ಚರವಾಯಿತು. ನಿದ್ದೆಯ ಮಂಪರಿನಲ್ಲೇ ಕಿಟಕಿಯಿಂದ ಕಣ್ಣಾಯಿಸಿದಾಗ ಅಪರಿಚಿತ ಸ್ಥಳಗಳು ಗೋಚರಿಸಲಾರಂಭಿಸಿದವು. ನಾನೀಗ ಎಲ್ಲಿದ್ದೇನೆ? ಇದ್ಯಾವ ಸ್ಟಾಪ್? ರೋಡ್ ಬ್ಲಾಕ್ ಎಂದು ಬಸ್ಸೇನಾದರೂ ಮಾರ್ಗ ಬದಲಿಸಿ ಹೋಗುತ್ತಿದೆಯೇ? ಎಂಬಂತೆ ಹಲವಾರು ಪ್ರಶ್ನೆಗಳು ಮೂಡಲಾರಂಭಿಸಿದವು. ಉತ್ತರ ಸಿಗದೆ ಗೆಳತಿಯ ಬಳಿ ವಿಚಾರಿಸೋಣವೆಂದು ತಿರುಗಿದರೆ ಆಕೆಯದ್ದೂ ಗಾಢನಿದ್ರೆ. ನನ್ನನ್ನು ಎಚ್ಚರಿಸುವಂತೆ ಆಕೆಯ ಬಳಿ ಹೇಳಿದ್ದರೆ ಆಕೆಯೇ ಮಲಗಿರುವುದನ್ನು ಕಂಡು ಗಾಬರಿಯಿಂದ ಎದೆಬಡಿತ ಹೆಚ್ಚಾಯಿತು. ನಾನು ನನ್ನ ಸ್ಟಾಪ್ ದಾಟಿ ಬಂದಿದ್ದೇನೆ ಎಂದು ಖಚಿತವಾಯಿತು. ಗೆಳತಿಯನ್ನು ಎಚ್ಚರಿಸಿ ಕೇಳಿದರೆ, ಅಯ್ಯೋ! ನನಗೆ ಯಾವ ಕ್ಷಣ ನಿದ್ದೆ ಹತ್ತಿತೆಂದೇ ತಿಳಿಯಲಿಲ್ಲ ಅಂದುಬಿಟ್ಟಳು.
ಅದಾಗಲೇ ಗಂಟೆ ಆರಾಗಿತ್ತು. ಇನ್ನು ಕುಳಿತು ಯೋಚಿಸಿ ಪ್ರಯೋಜನವಿಲ್ಲ ಎಂದು ಮುಂದಿನ ಸ್ಟಾಪ್ ನಲ್ಲಿ ಇಳಿದುಬಿಟ್ಟೆ. ಮೊದಲೇ ತಡವಾಗಿದ್ದರಿಂದ ಬಸ್ಸಿಗಾಗಿ ಕಾದುನಿಂತರೆ ಆಗದೆಂದು ಪಕ್ಕದಲ್ಲಿದ್ದ ರಿಕ್ಷಾ ಸ್ಟಾಂಡ್ ಗೆ ಹೋಗಿ ರಿಕ್ಷಾ ಹತ್ತಿ ಹೊರಟೆ. ತಕ್ಷಣವೇ ನನ್ನ ಬಳಿ ದುಡ್ಡಿದೆಯೇ ಎಂಬ ಪ್ರಶ್ನೆ ಕಾಡತೊಡಗಿತು. ಪರ್ಸನ್ನು ಸರಿಯಾಗಿ ಕೆದಕಿದಾಗ 20 ರೂ ನ ಒಂದು ನೋಟು ಹಾಗೂ 5 ರ ಪಾವಲಿ ಬಿಟ್ಟು ಬೇರೇನೂ ಕಾಣಲಿಲ್ಲ. ರಿಕ್ಷಾದವರು ಹೆಚ್ಚು ಹಣವೇನಾದರು ಕೇಳಿದರೆ ಏನು ಮಾಡುವುದು ಎಂದು ಭಯವಾಯಿತು. ಸ್ವಲ್ಪಹೊತ್ತು ತಾಳ್ಮೆಯಿಂದ ಕಾಯುತ್ತಿದ್ದರೆ ಬಸ್ಸಾದರೂ ಬರುತ್ತಿತ್ತೇನೋ, ಬಸ್ ಪಾಸ್ ತೋರಿಸಿ ನಿಶ್ಚಿಂತೆಯಿಂದ ಬರಬಹುದಿತ್ತು ಎಂದು ನನ್ನ ಪೆದ್ದು ಬುದ್ಧಿಯನ್ನು ಬೈದುಕೊಂಡೆ.
ರಿಕ್ಷಾದಿಂದ ಇಳಿಯುತ್ತ ಭಯದಲ್ಲಿಯೇ ನಮ್ರವಾಗಿ ಎಷ್ಟೆಂದು ಕೇಳಿದೆ. “20 ರೂಪಾಯಿ ಕೊಡಮ್ಮ ಸಾಕು’ ಎಂದಾಗ ಹೋದ ಜೀವ ಮರಳಿ ಬಂದಂತಾಗಿ ನಿಟ್ಟಿಸಿರುಬಿಟ್ಟೆ. ನಡೆದ ಘಟನೆ ತಲೆಯಲ್ಲಿ ಅಚ್ಚಾದಂತಿತ್ತು. ಮನೆಗೆ ತಲುಪುತ್ತಿದ್ದಂತೆ ಅಮ್ಮನ ಬಳಿ ನಿದ್ದೆ ತಂದೊಡ್ಡಿದ ಅವಾಂತರವನ್ನು ಹೇಳಿ ಬೈಗುಳವೂ ತಿಂದೆ. ಇಂದಿಗೂ ಬಸ್ಸಿನಲ್ಲಿ ನಿದ್ರೆಗೆ ಜಾರುವ ಮುನ್ನ ಅಂದಿನ ನನ್ನ ಪಾಡು ನೆನಪಾಗಿ ಜಾಗ್ರತೆ ವಹಿಸುತ್ತೇನೆ.
ದೀಕ್ಷಾ ಕುಮಾರಿ
ತೃತೀಯ ಬಿ. ಎ. ವಿ. ವಿ. ಕಾಲೇಜು, ಮಂಗಳೂರು