Advertisement

ಬದಲಾವಣೆಯ ಆ ಒಂದು ದಿನ

11:43 AM Oct 06, 2017 | |

ಈ ದೇಶಕ್ಕೆ ಏನಾದರೂ ವಾಪಸ್ಸು ಕೊಡಬೇಕು ಅಂತ ಅನನಿಸುತ್ತಲೇ ಇತ್ತಂತೆ ರವೀಂದ್ರ ಗೌಡ ಪಾಟೀಲ್‌. ಉತ್ತರ ಕರ್ನಾಟಕದಲ್ಲಿ ದ್ರಾಕ್ಷಿ ಬೆಳೆಗಾರರಾಗಿರುವ ಅವರು, ತಮ್ಮ ಮನಸ್ಸಿನಲ್ಲಿರುವ ಒಂದಿಷ್ಟು ಅಂಶಗಳನ್ನು ಹೇಳಿಕೊಳ್ಳಬೇಕು, ತಾನು ಹುಟ್ಟಿದ ಈ ದೇಶಕ್ಕೆ ಏನಾದರೂ ಕೊಡಬೇಕು ಎಂದು ಯೋಚಿಸುತ್ತಿದ್ದಾಗ ಅವರಿಗೆ ಹೊಳೆದಿದ್ದು ಸಿನಿಮಾ ಮಾಡುವ ಐಡಿಯಾ. ಹೀಗೆ ಶುರುವಾದ “ಆ ಒಂದು ದಿನ’ ಎಂಬ ಚಿತ್ರ ಇದೀಗ ಹಾಡುಗಳ ಬಿಡುಗಡೆಯವರೆಗೂ ಬಂದು ನಿಂತಿದೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಪ್ರೊ ದೊಡ್ಡರಂಗೇ ಗೌಡ ಅವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. “ಆ ಒಂದು ದಿನ’ ಚಿತ್ರವನ್ನು ಹರ್ಷ ಮತ್ತು ಸಂಜಯ್‌ ಜೊತೆಯಾಗಿ ನಿರ್ದೇಶಿಸಿದ್ದಾರೆ.

Advertisement

ಇನ್ನು ಹರ್ಷ ಈ ಚಿತ್ರಕ್ಕೆ ಹಾಡುಗಳನ್ನು ಸಹ ಸಂಯೋಜಿಸಿದ್ದಾರೆ. ಈ ಚಿತ್ರಕ್ಕಾಗಿ ಎರಡು ಐಟಂ ಹಾಡುಗಳು ಜೊತೆಗೆ ಒಂದು ದೇಶಭಕ್ತಿ ಸಾರುವ ಹಾಡು ಇದೆಯಂತೆ. ಆ ಹಾಡನ್ನು ವಿಜಯಪ್ರಕಾಶ್‌ ಹಾಡಿರುವುದು ವಿಶೇಷ. ಈ ಚಿತ್ರದಲ್ಲಿ ರವೀಂದ್ರ ಗೌಡ ಪಾಟೀಲ್‌ ಅವರು, ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಹೇಳುವುದಕ್ಕೆ ಹೊರಟಿದ್ದಾರಂತೆ. “ಕಳೆದ ಮೂರು  ವರ್ಷಗಳಿಂದ ನನ್ನನ್ನು ಕಾಡಿದ ಹಲವು ವಿಷಯಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ಸಮಾಜ ಎದುರಿಸುತ್ತಿರುವ ಹಲವು ಸಮಸ್ಯೆಗಳು ಮತ್ತು ಸಮಾಜಕ್ಕೆ ಪೂರಕವಾದ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಒಂದು ದಿನ ಬದಲಾವಣೆಯಾದರೆ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ಮಾಡಿದ್ದೇನೆ’ ಎನ್ನುತ್ತಾರೆ ಅವರು. ದೊಡ್ಡರಂಗೇಗೌಡರು ಮಾತನಾಡಿ, “ಜನ ತಮ್ಮ ಮತಗಳನ್ನು ಮಾರಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಎಚ್ಚರಿಸುವಂತಹ ಕೆಲಸಗಳು ಆಗಬೇಕು. ಅಂತಹ ಸೂಕ್ಷ್ಮ ವಿಚಾರಗಳು “ಆ ಒಂದು ದಿನ’ ಚಿತ್ರದಲ್ಲಿದೆ ಎಂದು ಕೇಳಿದ್ದೇನೆ. ಇದು ಸಂಪೂರ್ಣ 
ಹೊಸಬರೇ ಮಾಡಿರುವ ಚಿತ್ರ. ಇಂಥ ಚಿತ್ರಗಳು ಗೆಲ್ಲಬೇಕು’ ಎಂದು ಅವರು ಹಾರೈಸಿದರು.

ಈ ಚಿತ್ರದ ಎರಡು ಐಟಂ ಸಾಂಗ್‌ಗಳ ಪೈಕಿ, ಒಂದರಲ್ಲಿ ಸಿಮ್ರಾನ್‌ ಎನ್ನುವವರು ಕಾಣಿಸಿಕೊಂಡಿದ್ದಾರೆ. ಮೂಲತಃ ಧಾರವಾಡದವರಾದ ಸಿಮ್ರಾನ್‌, ಈಗ ಮುಂಬೈನಲ್ಲಿದ್ದಾರಂತೆ. ಇದು ಅವರ ಮೊದಲನೆಯ ಚಿತ್ರ. ಈ ಚಿತ್ರದ ಮೂಲಕ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗಲಿ ಎಂದು ಅವರು ಮಾತು ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next