Advertisement

ಗೆದ್ದೇ ಗೆಲ್ಲುವೆ ಒಂದು ದಿನ…

11:50 AM Feb 14, 2018 | Harsha Rao |

“ನೋಡಮ್ಮ ನೀನು ಹೀಗೆ ಕೂತು ಬಿಟ್ರೆ, ಕೂತಲ್ಲೇ ಕಾಲ ಮುಗಿದು ಹೋಗುತ್ತೆ. ಜಗತ್ತು ಚೆನ್ನಾಗಿದೆ. ಅದ್ಭುತವಾಗಿದೆ. ನಿನ್ನಲ್ಲಿ ಯಾವುದೋ ಒಂದು ಇಂಟೆರೆಸ್ಟಿಂಗ್‌ ಪ್ರತಿಭೆ ಇದ್ದೇ ಇರುತ್ತೆ. ಅದನ್ನು ಹುಡುಕಿಕೊ. ಬೆಳೆಸಿಕೊ’ ಅಂತ ಹೇಳಿದ ಕೆಲವೇ ದಿನಗಳಲ್ಲಿ ಅವಳು ಬದಲಾಗಿದ್ದಳು… 

Advertisement

ನನ್ನ ಆ ಒಂದೆರಡು ಮಾತುಗಳಿಗೆ ಆ ಹುಡುಗಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು. ನಾನಾದರೂ ಆಡಿದಿಷ್ಟೆ; “ನೋಡಮ್ಮ, ನೀನು ಹೀಗೆ ಯಾವಾಗಲೂ ಯಾರೊಂದಿಗೂ ಸೇರದೆ ಇದ್ರೆ ಪ್ರಪಂಚ ನಿನ್ನ ಬಿಟ್ಟು ತುಂಬಾ ದೂರನೇ ಹೊರಟು ಹೋಗಿ ಬಿಡುತ್ತದೆ. ನಿನ್ನಲ್ಲಿ ಏನೇ ದುಗುಡ, ದುಮ್ಮಾನಗಳಿರಬಹುದು ಅವು ಆಚೆ ಹೋಗಬೇಕು.

ಅದಕ್ಕಾದರೂ ನೀನು ಇನ್ನೊಬ್ಬರೊಂದಿಗೆ ಮಾತಾಗಬೇಕು. ಹೀಗೆ ಮಾತು ಸತ್ತು ಹೋದವಳಂತೆ ಕೂತರೆ ನಾಳೆ ನಿನ್ನ ಕೆರಿಯರ್‌ ಕೂಡ ಸತ್ತು ಹೋಗಬಹುದು’ ಎಂಬುದಷ್ಟೇ ನಾ ಹೇಳಿದ್ದು. ಹುಡುಗಿ ಅಳಲು ಆರಂಭಿಸಿದ್ದಳು.
   “ನಮ್ಮ ಹುಡುಗಿ ತುಂಬಾ ಒಂಟಿಯಾಗಿರ್ತಾಳೆ. ಯಾರೊಂದಿಗೂ ಅಷ್ಟಾಗಿ ಮಾತಾಡಲ್ಲ. ಯಾವಾಗ್ಲೂ ಓದುತ್ತಲೋ, ಹಾಡು ಕೇಳುತ್ತಲೋ ಬಿದ್ದಿರುತ್ತಾಳೆ. ಇವಳಿಗೆ ಏನಾಗಿದೆ ಅಂತ ಗೊತ್ತಾಗ್ತಿಲ್ಲ’ ಅಂತ ಅವರ ಪೋಷಕರು ನಾಲ್ಕೈದು ಬಾರಿ ಅಲವತ್ತುಕೊಂಡಿದ್ದರು. ಆಗಾಗಿಯೇ ಒಂದಿಷ್ಟು ಸ್ನೇಹದೊಂದಿಗೆ ಮಾತಿಗೆ ಇಳಿದಿದ್ದೆ. ಅಳು ಆರಂಭವಾದಾಗ ಸಮಾಧಾನಪಡಿಸುವ ಬದಲು ಅಳಲು ಬಿಟ್ಟು ಸುಮ್ಮನೆ ಕುಳಿತೆ. ತಾನಾಗಿಯೇ ವಿಷಯ ಹಂಚಿಕೊಳ್ಳುತ್ತಾಳೆ ಎಂಬ ಭರವಸೆ ಇತ್ತು.

ಆಕೆ ಮಾತು ಆರಂಭಿಸಿದಳು. “ನಂಗೆ ಎಲ್ಲರ ಹಾಗೆ ಇರಬೇಕು, ಮಾತಾಡಬೇಕು, ಆಟ ಆಡಬೇಕು, ಟಿವಿ ನೋಡ್ಬೇಕು, ಕುಣೀಬೇಕು ಅಂತ ಆಸೆ. ಆದರೆ, ಅದ್ಯಾಕೊ ಕೀಳರಿಮೆ ಕಾಡುತ್ತೆ! ನಿಮಗೆ ಗೊತ್ತಾ? ನಮ್ಮಲ್ಲಿ ನಮ್ಮಪ್ಪ ಅಮ್ಮ ಯಾವಾಗ್ಲೂ ಜಗಳ ಆಡ್ತಾರೆ. ಬಹುಶಃ ಜಗಳವಿಲ್ಲದ ದಿನಗಳೇ ನೆನಪಿಲ್ಲ. ಬೆಳೆದ ಹುಡುಗಿಯೊಬ್ಬಳು ಇದ್ದಾಳೆ ಎಂಬ ಪ್ರಜ್ಞೆ ಇಲ್ಲದೆ ನನ್ನ ಮುಂದೆಯೇ ಕೂಗಾಡಿಕೊಳ್ಳುತ್ತಾರೆ. ಮಾತಾಡೊÕàಕೆ ಹೋದ್ರೆ ಬರೀ ರೇಗಾಡ್ತಾರೆ. ಅವರಿವರ ಕೋಪ ನನ್ನ ಮೇಲೆ ಬಂದು ಬೀಳುತ್ತೆ. ಪ್ರೀತಿಯಿಂದ ಮಾತಾಡಿÕದ್ದು, ನಂಗೇನು ಬೇಕು ಅಂತ ಕೇಳಿದ್ದು, ನನಗಾಗಿಯೇ ಸಮಯ ಕೊಟ್ಟಿದ್ದು ಬಹುಶಃ ಇಲ್ಲವೇನೊ!? ಇಬ್ಬರೂ ದುಡೀತಾರೆ. ಅವರವರ ಜಗತ್ತು ಅವರವರಿಗೆ! ಮನೆಯಲ್ಲಿ ಮಾತ್ರ ಸದಾ ಜಗಳ. ಅಣ್ಣನೊಬ್ಬನಿದ್ದಾನೆ. ಅವನಂತೂ ಯಾವತ್ತೂ ಹೊರಗೇ ಇರ್ತಾನೆ. ಆಟ, ಫ್ರೆಂಡ್ಸ್‌ ಅಂತ ಸುತ್ತುತ್ತಾನೆ. ನನ್ನನ್ನು ಒಂಥರಾ ಕೇರ್‌ಲೆಸ್‌ ಆಗಿ ಟ್ರೀಟ್‌ ಮಾಡ್ತಾನೆ…’ ಅನ್ನುತ್ತಾ ಮತ್ತೆ ಮತ್ತೆ ಬಿಕ್ಕಿದಳು. 

ಈಗ ನಾನು ಒಂದಿಷ್ಟು ಸಮಾಧಾನದ ಮಾತುಗಳನ್ನು ಹೇಳಲೇಬೇಕಾಯ್ತು. “ನೋಡಮ್ಮ ನೀನು ಹೀಗೆ ಕೂತು ಬಿಟ್ರೆ, ಕೂತಲ್ಲೇ ಕಾಲ ಮುಗಿದು ಹೋಗುತ್ತೆ. ಜಗತ್ತು ಚೆನ್ನಾಗಿದೆ. ಅದ್ಭುತವಾಗಿದೆ. ನಿನ್ನಲ್ಲಿ ಯಾವುದೋ ಒಂದು ಇಂಟೆರೆಸ್ಟಿಂಗ್‌ ಪ್ರತಿಭೆ ಇದ್ದೇ ಇರುತ್ತೆ. ಅದನ್ನು ಹುಡುಕಿಕೊ. ಬೆಳೆಸಿಕೊ. ಫ್ರೆಂಡ್ಸ್‌ ಮಾಡ್ಕೊ. ಮಾತಾಡು. ಅಪ್ಪ- ಅಮ್ಮನ ಜಗಳ ಒಂದಿನ ನಿಲ್ಲುತ್ತೆ. ಗಂಡ- ಹೆಂಡತಿಯರ ನಡುವೆ ಅಂಥ ಜಗಳ ಯಾವಾಗ್ಲೂ ಇರುತ್ತೆ. ಅಣ್ಣನ ಒಂದಿನ ನಿನ್ನ ಹತ್ರ ಬರ್ತಾನೆ. ನೀನು ರೂಮಿನಲ್ಲಿ ಸುಮ್ಮನೆ ಕೂತಿದ್ರೆ ಅವನಾದರೂ ಯಾಕೆ ಬಂದಾನು? ಆದರೆ, ನೀನು ಇವುಗಳನ್ನು ಅರಿಯದೇ ಒಂದು ಕಾಯಿಲೆಯ ಒಳಗೆ ಹೋಗಿ ಬಿಡುತ್ತೀಯ. ಒಂಟಿತನ ಒಂದು ಕಾಯಿಲೆ. ಗೆಟ್‌ ಅಪ್‌!’. ಇಷ್ಟು ಮಾತಾಡಿ, ಸುಮ್ಮನೆ ಎದ್ದು ಬಂದೆ.

Advertisement

ಅವರ ತಂದೆ- ತಾಯಿಯರ ಜೊತೆ ಒಂದಿನ ಮಾತಿಗಿಳಿದೆ. ಅವರದ್ದೂ ಅದೇ ಅಭಿಪ್ರಾಯವಾಗಿತ್ತು. ಮಗಳ ಬಗೆಗೆ ಅವರಿಗೂ ಕಳವಳವಿತ್ತು. ಅದಕ್ಕೆ ಕಾರಣಗಳನ್ನು ತುಂಬಾ ಸೂಚ್ಯವಾಗಿ ಹೇಳಿದೆ. ಬಹುಶಃ ಅವರಿಗೆ ಅರ್ಥವಾಯಿತು ಎಂದು ಭಾವಿಸಿಕೊಂಡೆ. ಸ್ವಲ್ಪ ದಿನಗಳಲ್ಲಿ ನೋಡು ನೋಡುತ್ತಿದ್ದಂತೆ ಹುಡುಗಿ ಗೆಲುವಾದಳು. ಅವಳ ಮುಖದಲ್ಲಿ ನಗು ಮೂಡಿತ್ತು. ಬದಲಾವಣೆ ಆರಂಭವಾಗಿದೆ ಅಂದುಕೊಂಡೆ.
– – –
ಪೋಷಕರೇ ಕೇರ್‌ಲೆಸ್‌ ಬೇಡ…
– ಬಹುತೇಕ ದೊಡ್ಡವರಿಗೆ ಅದರಲ್ಲೂ ತಂದೆ- ತಾಯಿ ಅನಿಸಿಕೊಂಡವರಿಗೆ ತಾವು ಮಾಡುವ ಸಣ್ಣ ಸಣ್ಣ ಕೇರ್‌ ಲೆಸ್‌ಗಳು ತಮ್ಮ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದು ಗೊತ್ತೇ ಇರುವುದಿಲ್ಲ. 

– ಕೌಮಾರ್ಯ ಮತ್ತು ಯೌವ್ವನದ ದಿನಗಳಲ್ಲಿ ಹೆಣ್ಣು ಮಕ್ಕಳು ಸೂಕ್ಷ್ಮ. ಅವರನ್ನು ನಡೆಸಿಕೊಳ್ಳುವಲ್ಲಿ ಸಾಕಷ್ಟು ಜಾಗೃತೆ ಬೇಕು. 

– ಜಾಗೃತೆ ತಪ್ಪಿದರೆ ಅಂಥ ಮಕ್ಕಳು ಶಾಶ್ವತ ಮನೋರಾಗಿಗಳಾಗಿ ಬಿಡುವ ಸಾಧ್ಯತೆಗಳಿರುತ್ತವೆ. 

– ಮಕ್ಕಳನ್ನು ಬೆಳೆಸುವ ಮುನ್ನ ಇಂಥ ಚಿಕ್ಕ ಚಿಕ್ಕ ವಿಷಯಗಳನ್ನು ತಿಳಿದುಕೊಂಡಿರಬೇಕು.

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next