ಹೊಸದಿಲ್ಲಿ: ಧರ್ಮಶಾಲಾ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡ ಬೇಸರದಲ್ಲಿರುವ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಇನ್ನೊಂದು ಆಘಾತ ಎದುರಾಗಿದೆ. ಕೊರೊನಾ ವೈರಸ್ ಭೀತಿಯಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮುಂದಿನೆರಡು ಏಕದಿನ ಪಂದ್ಯಗಳಿಂದ ಪ್ರೇಕ್ಷಕರನ್ನು ದೂರ ಇರಿಸಲು ನಿರ್ಧರಿಸಲಾಗಿದೆ.
ಲಕ್ನೋ (ಮಾ. 15) ಮತ್ತು ಕೋಲ್ಕತಾದಲ್ಲಿ (ಮಾ. 18) ನಡೆಯಲಿರುವ ಈ ಪಂದ್ಯಗಳ ವೇಳೆ ವೀಕ್ಷಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರಿಂದ ಕ್ರಿಕೆಟ್ ಪಂದ್ಯವೊಂದರ ರೋಮಾಂಚನವೆಲ್ಲ ಮಣ್ಣು ಪಾಲಾಗಲಿದೆ. ಬೌಂಡರಿ ಬಿದ್ದಾಗ, ಸಿಕ್ಸರ್ ಸಿಡಿದಾಗ, ವಿಕೆಟ್ ಉರುಳಿದಾಗ ವೀಕ್ಷಕರ ಕರತಾಡನ, ಭೋರ್ಗರೆತ ಕೇಳಿಬರದು ಎಂಬುದನ್ನು ಕಲ್ಪಿಸಲಿಕ್ಕೇ ಸಾಧ್ಯವಿಲ್ಲ. ಆದರೆ ಕೊರೊನಾ ದೆಸೆಯಿಂದ ಇದನ್ನೆಲ್ಲ ಅನುಭವಿಸಲೇಬೇಕಾಗಿದೆ.
“ಕೇಂದ್ರ ಕ್ರೀಡಾ ಸಚಿವಾಲಯದ ಆದೇಶವನ್ನು ಬಿಸಿಸಿಐ ಪಾಲಿಸಲೇಬೇಕಿದೆ. ಇದನ್ನು ಯಾವ ಕಾರಣಕ್ಕೂ ಉಲ್ಲಂ ಸುವಂತಿಲ್ಲ’ ಎಂದು ಬಿಸಿಸಿಐ ಹೇಳಿದೆ.
ಟಿಕೆಟ್ ಮಾರಾಟ ಸ್ಥಗಿತ
ಬಿಸಿಸಿಐ ನಿರ್ಧಾರದಿಂದಾಗಿ ಕೋಲ್ಕತಾ ಪಂದ್ಯದ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಬಂಗಾಲ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅವಿಷೇಕ್ ದಾಲಿ¾ಯ ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಈ ವಿಷಯವನ್ನು ತಿಳಿಸಿದ್ದಾರೆ.
“ಈ ಸಂದರ್ಭದಲ್ಲಿ ನಾನು ಯಾವುದೇ ಹೇಳಿಕೆ ನೀಡಿದರೂ ಅದು ಅವಸರದ ಕ್ರಮವಾಗುತ್ತದೆ. ಮುಂದಿನ ಆದೇಶ ಬರುವ ತನಕ ಟಿಕೆಟ್ ಮಾರಾಟವನ್ನು ನಿಲ್ಲಿಸಿದ್ದೇವೆ, ಅಷ್ಟೇ’ ಎಂದು ದಾಲಿ¾ಯ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಎರಡೂ ಪಂದ್ಯಗಳ ವೇಳೆ ಕ್ರಿಕೆಟಿಗರನ್ನು ಹೊರತುಪಡಿಸಿ ತಂಡಗಳ ಸಹಾಯಕ ಸಿಬಂದಿ, ಟೆಲಿವಿಷನ್ ಟೀಮ್ ಮತ್ತು ಪತ್ರಿಕಾ ಮಾಧ್ಯಮದವರಷ್ಟೇ ಇರಲಿದ್ದಾರೆ.