Advertisement

ಒಂದೇ ದಿನ 3 ಕೋವಿಡ್ 19 ಸೋಂಕು ದೃಢ

01:58 PM Apr 08, 2020 | Suhan S |

ಮಂಡ್ಯ: ಕಳೆದೊಂದು ತಿಂಗಳಿನಿಂದ ಕೋವಿಡ್ 19 ದಿಂದ ಮುಕ್ತವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಇದೀಗ ಮೂರು ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ತಬ್ಲೀಘಿ ರಿಂದಲೇ ಸೋಂಕು ಹರಡಿರುವುದು ಹೆಚ್ಚಿನ ಭೀತಿ ಸೃಷ್ಟಿಸಿದೆ.

Advertisement

ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 7 ಮಂದಿಯ ಪೈಕಿ ಮೂವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿತರು 32 ವರ್ಷ, 36 ವರ್ಷ ಹಾಗೂ 65 ವರ್ಷದವರಾಗಿದ್ದಾರೆ. ಉಳಿದ ಇಬ್ಬರಿಗೆ ನೆಗೆಟೀವ್‌ ಬಂದಿದ್ದರೆ, ಮತ್ತಿಬ್ಬರ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪುನರ್‌ ಪರಿಶೀಲನೆಗಾಗಿ ಮತ್ತೂಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಗಮಂಗಲದ 5 ಪ್ರಕರಣಗಳು ನೆಗೆಟಿವ್‌ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ತಿಳಿಸಿದರು.

ಟ್ರಾವೆಲ್‌ ಹಿಸ್ಟರಿ: ಮಳವಳ್ಳಿ ಮೂಲದ 7 ಮಂದಿಯ ಟ್ರಾವೆಲ್‌ ಹಿಸ್ಟರಿಯನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಲಾಗಿದ್ದು, ಫೆ. 4ರಂದು ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಫೆ. 13ರವರೆಗೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ನಂತರ ಫೆ.13ರಂದು ದೆಹಲಿಯಿಂದ ಧರ್ಮಗುರುಗಳೊಂದಿಗೆ 7 ಮಂದಿಯೂ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ಮೂಲಕ ಬೆಂಗಳೂರಿನ ಯಶವಂತಪುರಕ್ಕೆ ಮಧ್ಯರಾತ್ರಿ 1 ಗಂಟೆಗೆ ಬಂದಿಳಿದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಧರ್ಮ ಗುರುಗಳು ಮೈಸೂರು ಯಶ್ವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೈಸೂರಿಗೆ ತೆರಳಿದರೆ, ಮಳವಳ್ಳಿ ಮೂಲದ 7 ಮಂದಿ ಯಶವಂತಪುರದಿಂದ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಮುಂಜಾನೆ 3 ಗಂಟೆಗೆ ಆಗಮಿಸಿ ಅಲ್ಲಿಂದ ಸಾರಿಗೆ ಬಸ್‌ ಮೂಲಕ ಮದ್ದೂರಿಗೆ ಬಂದಿಳಿದರು. ಬಳಿಕ ಮದ್ದೂರಿನಿಂದ ಮಳವಳ್ಳಿಗೆ ಮಾರುತಿ-800 ಹಾಗೂ ಮತ್ತೂಂದು ಕಾರಿನಲ್ಲಿ ತೆರಳಿದ್ದಾರೆ ಎಂದು ತಿಳಿಸಿದರು.

ಧರ್ಮಗುರುಗಳಿಂದ ಸೋಂಕು ಶಂಕೆ: ಸೋಂಕು ದೃಢಪಟ್ಟಿರುವ ಮೂವರು ದೆಹಲಿಯಿಂದ ಬಂದಿದ್ದ ಧರ್ಮಗುರುಗಳೊಂದಿಗೆ ಸಂಪರ್ಕದಲ್ಲಿದ್ದ ಕಾರಣ ಅವರಿಂದಲೂ ಹರಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, 10 ಧರ್ಮಗುರುಗಳ ಪೈಕಿ 5 ಮಂದಿಗೆ ಕೋವಿಡ್ 19  ಸೋಂಕು ದೃಢಪಟ್ಟಿರುವುದರಿಂದ ಅವರಿಂದಲೇ ಇವರಿಗೂ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ ಎಂದರು.

Advertisement

ದೆಹಲಿಯ ತಬ್ಲೀಘಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡುವಂತೆ ಕೋರಿದ್ದರೂ, ಇದುವರೆಗೂ ಯಾರೂ ಯಾರೊಬ್ಬರೂ ಮಾಹಿತಿ ನೀಡಿಲ್ಲ. ಸಭೆಗೆ ಹೋಗಿದ್ದವರಿಂದಲೇ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಪಿ. ಮಂಚೇಗೌಡ, ಅಬಕಾರಿ ಜಿಲ್ಲಾ ಅಧಿಕಾರಿ ಶಿವಪ್ರಸಾದ್‌, ವಾರ್ತಾಧಿಕಾರಿ ಹರೀಶ್‌ ಇತರರು ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next