Advertisement

ಕರಾಳ ರಾತ್ರಿಯಲ್ಲೊಂದು ಹೊಸ ಬೆಳಕು

05:09 PM Jul 13, 2018 | |

ಆ ಕರಾಳ ರಾತ್ರಿಯಂದು ಕಾಡಿನ ಮಧ್ಯದಲ್ಲಿರುವ ಒಂಟಿ ಮನೆ ಮುತ್ತಣ್ಣನ ಮನೆ ಧಗಧಗನೆ ಹೊತ್ತಿ ಉರಿಯುತ್ತಿದೆ. ನಾಲ್ಕಾರು ಜನ ಅದರ ಮುಂದೆ ನಿಂತು ಗೋಳಾಡುತ್ತಿರುತ್ತಾರೆ. ತೆರೆಯ ಮೇಲೆ, “ಇದು ಆರಂಭವಲ್ಲ ಅಂತ್ಯ …’ ಎಂಬ ಮೆಸೇಜು ತೆರೆಯ ಮೇಲೆ ಬರುತ್ತದೆ. ಹಾಗಂತ ಇದು ಚಿತ್ರದ ಅಂತ್ಯ ಅಂದುಕೊಳ್ಳುವಂತಿಲ್ಲ. “ಆ ಕರಾಳ ರಾತ್ರಿ’ ಶುರುವಾಗುವುದೇ ಹೀಗೆ … ಇದು ಚಿತ್ರದ ಅಂತ್ಯವಾದರೆ, ಚಿತ್ರದ ಆರಂಭ ಹೇಗಿರಬಹುದು ಎಂಬ ಕುತೂಹಲ ಇರಬಹುದು. ಅಂದು ಬುಡುಡೆ ಮಾಲಿಂಗ ಶಾಸ್ತ್ರ ಹೇಳುತ್ತಾ ಬರುತ್ತಾನೆ.

Advertisement

ಮುತ್ತಣ್ಣನ ಮನೆಯ ಎದುರು ನಿಂತು, ಈ ಮನೆಗೆ ಇಂದು ಲಕ್ಷ್ಮಿ ನಡೆದು ಬರುತ್ತಾಳೆ ಎಂದು ಭವಿಷ್ಯ ನುಡಿಯುತ್ತಾನೆ. ಕಡು ಬಡುತನ, ಮದುವೆ ವಯಸ್ಸು ದಾಟುತ್ತಿರುವ ಮಗಳು, ಸಾಲಗಾರರ ಕಾಟ … ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಮುತ್ತಣ್ಣ ಮತ್ತು ಅವನ ಮನೆಯವರು, ಮಾಲಿಂಗನನ್ನು ಉಗಿದು ಓಡಿಸುತ್ತಾರೆ. ಅವನು ಆ ಕಡೆ ಹೋಗುವುದಕ್ಕೂ, ಈ ಕಡೆ ಒಬ್ಬ ಅಪರಿಚಿತ ಮನೆಗೆ ಬರುವುದಕ್ಕೂ ಸರಿ ಹೋಗುತ್ತದೆ. ಮನೆಗೆ ಬಂದ ಅಪರಿಚಿತ ಒಂದು ದಿನದ ಮಟ್ಟಿಗೆ ಆ ಮನೆಯಲ್ಲಿ ಉಳಿದುಕೊಳ್ಳುವದಕ್ಕೆ ಜಾಗ ಕೇಳುತ್ತಾನೆ.

ಮನೆಯವರು ಹಿಂಜರಿದರೂ, ಕ್ರಮೇಣ ಒಪ್ಪಿಕೊಳ್ಳುತ್ತಾರೆ. ಮಾತುಮಾತಿನಲ್ಲಿ ಆ ಅಪರಿಚಿತ ತನ್ನ ಸೂಟ್‌ಕೇಸ್‌ನಲ್ಲಿರುವ ಬಂಗಾರದ ಒಡವೆ ಮತ್ತು ಹಣವನ್ನು ಅವರಿಗೆ ತೋರಿಸುತ್ತಾನೆ. ಆ ಒಡವೆ ಮತ್ತು ಹಣ ನೋಡುತ್ತಿದ್ದಂತೆಯೇ ಮೆನಯವರ ತಲೆ ತಿರುಗುತ್ತದೆ. ಮನೆಗೆ ಬಂದ ಅಪರಿಚಿತನನ್ನು ಮುಗಿಸಿಬಿಟ್ಟರೆ, ತಮ್ಮ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತದೆ ಎಂದು ಅವನನ್ನು ಮುಗಿಸುವುದಕ್ಕೆ ಸ್ಕೆಚ್‌ ಹಾಕುತ್ತಾರೆ. ಮುತ್ತಣ್ಣನ ಮನೆಯವರು ಹಾಗೆ ಸ್ಕೆಚ್‌ ಹಾಕುವುದಕ್ಕೂ, ಅವರ ಮನೆ ಹೊತ್ತಿ ಉರಿಯುವುದಕ್ಕೂ ಏನು ಸಂಬಂಧ ಎಂಬ ಕುತೂಹಲಕ್ಕಾದರೂ ಚಿತ್ರ ನೋಡಲೇಬೇಕು.

“ಆ ಕರಾಳ ರಾತ್ರಿ’ ಒಂದು ಹಾರರ್‌ ಚಿತ್ರವಿರಬಹದೇನೋ ಅಂದುಕೊಂಡರೆ, ನಿಮ್ಮ ಊಹೆ ಸುಳ್ಳಾಗುತ್ತದೆ. ಅದೊಂದು ಇಂಟೆನ್ಸ್‌ ಥ್ರಿಲ್ಲರ್‌ ಚಿತ್ರ. ಮೋಹನ್‌ ಹಬ್ಬು ಅವರ ನಾಟಕವನ್ನಾಧರಿಸಿದ ಈ ಚಿತ್ರವನ್ನು ಎಷ್ಟು ಅಚ್ಚುಕಟ್ಟಾಗಿ ತೋರಿಸುವುದಕ್ಕೆ ಸಾಧ್ಯವೋ, ಅಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನವನ್ನು ದಯಾಳ್‌ ಮಾಡಿದ್ದಾರೆ. ಇಲ್ಲಿ ಬೇಡದ ಮಾತುಗಳಿಲ್ಲ, ಬೇಡದ ದೃಶ್ಯಗಳಿಲ್ಲ. ಏನು ತೋರಿಸಬೇಕೋ ಅದನ್ನು ಒಂದೂಮುಕ್ಕಾಲು ತಾಸಿನಲ್ಲಿ ತೋರಿಸಿಬಿಡುತ್ತಾರೆ. ಹಾಗೆ ನೋಡಿದರೆ, ಇದು ಎರಡು ರಾತ್ರಿ ಒಂದು ಹಗಲು ನಡೆಯುವ ಕಥೆ. 

ಆ ಸಮಯದಲ್ಲಿ ಒಂದು ಕುಟುಂಬದಲ್ಲಿ ನಡೆಯುವ ಒಂದು ಘಟನೆಯ ಪ್ರಮುಖ ಅಂಶಗಳನ್ನು ದಯಾಳ್‌ ತೋರಿಸುತ್ತಾ ಹೋಗುತ್ತಾರೆ. ಆಸೆಯೇ ದುಃಖಕ್ಕೆ ಮೂಲ ಎಂದು ದಾಸರೊಬ್ಬರು ಪ್ರವಚನ ಮಾಡುವುದರ ಮೂಲಕ ಶುರುವಾಗುವ ಚಿತ್ರ, ಆ ಆಸೆಯಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬಲ್ಲಿಗೆ ಚಿತ್ರ ಮುಗಿಸುತ್ತಾರೆ. ಆ ಮಟ್ಟಿಗೆ ಈ ಬಾರಿ ದಯಾಳ್‌ ಬದಲಾಗಿದ್ದಾರೆ. ಅವರ ಹಿಂದಿನ ಚಿತ್ರಗಳನ್ನು ನೋಡಿಕೊಂಡು ಬಂದವರಿಗೆ, ಎಲ್ಲಾ ರೀತಿಯಲ್ಲೂ ಇದು ಅವರ ಬೆಸ್ಟ್‌ ಪ್ರಯತ್ನ ಎಂದನಿಸಿದರೆ ಆಶ್ಚರ್ಯವಿಲ್ಲ.

Advertisement

ಇಲ್ಲಿ ದಯಾಳ್‌ ಒಬ್ಬರಿಗೇ ಸಂಪೂರ್ಣ ಕ್ರೆಡಿಟ್‌ ಕೊಡುವುದು ತಪ್ಪಾಗುತ್ತದೆ. ಅಭಿನಯ, ಸಂಗೀತ, ಛಾಯಾಗ್ರಹಣ, ಸಂಕಲನ … ಎಲ್ಲವೂ ಪೂರಕವಾಗಿದ್ದು, ಚಿತ್ರ ಚೆನ್ನಾಗಿ ಮೂಡಿಬಂದಿದೆಯೆಂದರೆ ಅದಕ್ಕೆ ಎಲ್ಲರಿಗೂ ಮಾರ್ಕ್ಸ್ ಹಂಚಬೇಕು. ಪ್ರಮುಖವಾಗಿ ಅನುಪಮ ಗೌಡ, ವೀಣಾ ಸುಂದರ್‌ ಮತ್ತು ರಂಗಾಯಣ ರಘು ಈ ಚಿತ್ರಕ್ಕೆ ದೊಡ್ಡ ಶಕ್ತಿಗಳು. ಅದರಲ್ಲೂ ಕೊಲೆ ಮಾಡುವುದಕ್ಕೆ ತೀರ್ಮಾನ ಮಾಡಿದ ನಂತರ ಆತಂಕವನ್ನು ಮೂವರು ಅದ್ಭುತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ.

ಜೆಕೆಗೆ ಅಭಿನಯಿಸುವುದಕ್ಕೆ ಹೆಚ್ಚು ಅವಕಾಶವಿಲ್ಲ. ಆದರೂ ಫ್ರೆಶ್‌ ಆಗಿ ಕಾಣುತ್ತಾರೆ ಎಂಬುದೇ ಹೆಗ್ಗಳಿಕೆ. ಇನ್ನು ಇಡೀ ವಾತಾವರಣವನ್ನು ಅದ್ಭುತವಾಗಿ ಕಟ್ಟಿಕೊಟ್ಟ ಛಾಯಾಗ್ರಹಕ ಪಿ.ಕೆ.ಎಚ್‌. ದಾಸ್‌, ಕ್ಷಣಕ್ಷಣಕ್ಕೂ ಟೆನ್ಶನ್‌ ಹೆಚ್ಚಿಸುವ ಗಣೇಶ್‌ ನಾರಾಯಣ್‌ ಅವರ ಹಿನ್ನೆಲೆ ಸಂಗೀತ ಮತ್ತು ಪ್ರೇಕ್ಷಕನನ್ನೂ ಕೂರಿಸಿಕೊಳ್ಳುವುದಕ್ಕೆ ಎಷ್ಟು ಬೇಕೋ ಅಷ್ಟೇ ಕತ್ತರಿಸಿರುವ ಸಂಕಲನಕಾರ ಶ್ರೀ ಇವರೆಲ್ಲರೂ ಚಿತ್ರದ ಹೈಲೈಟ್‌ಗಳು.

ಚಿತ್ರ: ಆ ಕರಾಳ ರಾತ್ರಿ
ನಿರ್ದೇಶನ: ದಯಾಳ್‌ ಪದ್ಮನಾಭ್‌
ನಿರ್ಮಾಣ: ದಯಾಳ್‌ ಪದ್ಮನಾಭ್‌
ತಾರಾಗಣ: ಜೆಕೆ, ಅನುಪಮಾ ಗೌಡ, ವೀಣಾ ಸುಂದರ್‌, ರಂಗಾಯಣ ರಘು ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next