Advertisement

ಕಾಲುಬಾಯಿ ರೋಗ ನಿಯಂತ್ರಣಕ್ಕೆ ಒಂದು ಕೋಟಿ ವ್ಯಾಕ್ಸಿನ್: ಪ್ರಭು ಬಿ.ಚವ್ಹಾಣ್

05:19 PM Aug 04, 2022 | Team Udayavani |

ಬೆಂಗಳೂರು: ರಾಷ್ತ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಕಾಲುಬಾಯಿ ರೋಗ ನಿಯಂತ್ರಿಸಲು ಶೀಘ್ರದಲ್ಲೇ ಒಂದು ಕೋಟಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರು ತಿಳಿಸಿದ್ದಾರೆ.

Advertisement

ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಪಶುಸಂಗೋಪನೆ ಸಚಿವರಾದ ಪರಷೋತ್ತಮ್ ರೂಪಾಲ ಅವರನ್ನು ಭೇಟಿ ಮಾಡಿ, ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳಾದ ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣಕ್ಕೆ ಅನುದಾನ ಹಾಗೂ ಅಗತ್ಯ ಲಸಿಕೆಯನ್ನು ತುರ್ತಾಗಿ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

2022-23ನೇ ಸಾಲಿನ ರಾಷ್ಟ್ರೀಯ ಜಾನುವಾರು ಯೋಜನೆಯಡಿ ಜಾನುವಾರುಗಳಿಗೆ ಮೇವು ಉತ್ಪಾದನೆಗಾಗಿ ರೂ. 51 ಕೋಟಿ ಅನುದಾನ ಮತ್ತು ಜಾನುವಾರುಗಳಿಗೆ ಮೂರನೇ ಸುತ್ತು ಎಫ್.ಎಂ.ಡಿ ಲಸಿಕೆಯನ್ನು ನೀಡಬೇಕಾಗಿರುವುದರಿಂದ ಒಂದು ಕೋಟಿ ಲಸಿಕೆಯನ್ನು ತುರ್ತಾಗಿ ನೀಡುವಂತೆ ಪ್ರಭು ಚವ್ಹಾಣ್ ಅವರು ಕೇಂದ್ರ ಪಶುಸಂಗೋಪನೆ ಸಚಿವ ಪರಷೋತ್ತಮ್ ರೂಪಾಲ ಅವರಿಗೆ ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಸ್ಪಂದಿಸುವಂತೆ ಕೋರಿದ್ದಾರೆ.

ಜಾನುವಾರುಗಳಲ್ಲಿ ಕಂಡುಬರುವ ರೋಗ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಪರಷೋತ್ತಮ್ ರೂಪಾಲ ಅವರು, ಜಾನುವಾರುಗಳಾದ (ಹಸು, ಎಮ್ಮೆ) ಕಾಲುಬಾಯಿ ರೋಗದ ವಿರುದ್ಧ ವರ್ಷಕ್ಕೆ 2 ಬಾರಿ ಲಸಿಕೆಯನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ ಪರಿಷತ್ ಮೂಲಕ ರೈತರಿಗೆ ಜಾನುವಾರುಗಳ ಸಾಕಾಣಿಕೆ, ಪ್ರಾಣಿಗಳಲ್ಲಿ ಹುಚ್ಚುನಾಯಿ ಕಾಯಿಲೆಯ ರೋಗಪತ್ತೆ ಕುರಿತ ಕಾರ್ಯಾಗಾರ, ಜಾನುವಾರುಗಳ ವಿವಿಧ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಕುರಿತು ಪಶುವೈದ್ಯರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಕಾಲುಬಾಯಿ ರೋಗ ನಿಯಂತ್ರಣದಲ್ಲಿ ಪಶು ಸಂಗೋಪನೆ ಇಲಾಖೆ ತೊಡಗಿದೆ. ಕೇಂದ್ರದಿಂದ ರಾಜ್ಯದಲ್ಲಿ ಒಂದು ಕೋಟಿ ಡೋಸ್ ದೊರೆತಿದ್ದು, ರಾಜ್ಯದಲ್ಲಿ ಕಾಲುಬಾಯಿ ರೋಗ ಕಂಡುಬಂದ ಪ್ರದೇಶದಲ್ಲಿ ಆದ್ಯತೆಯ ಮೇರೆಗೆ ಲಸಿಕೆ ವಿತರಣೆ ತುರ್ತಾಗಿ ಮಾಡಲಾಗುವುದು. ರೋಗೋದ್ರೇಕ ಕಂಡು ಬಂದ ಜಿಲ್ಲೆಗಳಲ್ಲಿ ರಿಂಗ್ ವ್ಯಾಕ್ಸಿನ್​​ಗೆ ಹೆಚ್ಚು ಆದ್ಯತೆ ನೀಡಿ ಕಾಲುಬಾಯಿ ರೋಗವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತೇವೆ ಎಂದು ಪ್ರಭು ಚವ್ಹಾಣ್ ವಿವರಿಸಿದ್ದಾರೆ.

ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಂಡುಬಂದಾಗ ಹಾಗೂ ಆರೋಗ್ಯ ಸೇವೆ ತುರ್ತು ಸಂದರ್ಭಗಳಲ್ಲಿ ರೈತರು, ಪಶುಪಾಲಕರು ಆತಂಕಕ್ಕೊಳಗಾಗದೇ ಪಶುಸಂಗೋಪನೆ ಸಹಾಯವಾಣಿ ದೂರವಾಣಿ ಸಂಖ್ಯೆ 1962ಗೆ ಹಾಗೂ ಇಲಾಖಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ, ಯೋಜನೆಗಳ ಕುರಿತು 8277 100200ಗೆ ಕರೆ ಮಾಡಿದರೆ ಕಾಲುಬಾಯಿ ರೋಗ ಲಸಿಕೆ ಲಭ್ಯತೆ ಹಾಗೂ ಸ್ಥಳೀಯ ಪಶು ಆಸ್ಪತ್ರೆಗಳ ಕುರಿತು ಸಹಾಯವಾಣಿ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ. ನಮ್ಮ ಪಶು ವೈದ್ಯರು ಮತ್ತು ಸಿಬ್ಬಂದಿ ಕಾಲುಬಾಯಿ ರೊಗದ ಲಸಿಕೆ ನೀಡುವಲ್ಲಿ ಸಕ್ರೀಯರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಲುಬಾಯಿ ರೋಗ ನಿಯಂತ್ರಣಕ್ಕೆ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸದಿದ್ದರೇ ಕಾಲುಬಾಯಿ ರೋಗವು ವಿವಿಧ ಜಾನುವಾರುಗಳಿಗೆ ಮಾರಕವಾಗಲಿದೆ. ಇದರಿಂದ ಜಾನುವಾರುಗಳ ಜೀವಕ್ಕೆ ಅಪಾಯ ತಂದೊಡ್ಡಲಿದೆ. ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳ ಸಂಕ್ಷರಣೆಗೆ ಮುಂದಾಗೋಣ ಎಂದು ಸಚಿವ ಚವ್ಹಾಣ್ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next