Advertisement

2029ರಿಂದ ಒಂದು ದೇಶ ಒಂದು ಚುನಾವಣೆ ಜಾರಿ? ಏನಿದು ಸಮಿತಿಯ ವರದಿ?

01:32 AM Mar 15, 2024 | Team Udayavani |

ಹೊಸದಿಲ್ಲಿ: ಬಹು ನಿರೀಕ್ಷಿತ “ಒಂದು ದೇಶ; ಒಂದು ಚುನಾವಣೆ’ಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿ ಸಲ್ಲಿಕೆ ಮಾಡಿದೆ. ಈ ಶಿಫಾರಸನ್ನು ಸಂಸತ್ತು ಅನುಮೋದಿಸಿದಲ್ಲಿ 2029ರಿಂದ ಜಾರಿಯಾಗಲಿದೆ.

Advertisement

ಈಗ ಸರಕಾರ ಅವಧಿ ಮುಗಿದಾಗ, ಸರಕಾರಗಳು ಪತನ ಗೊಂಡಾಗ ವಿವಿಧ ರಾಜ್ಯಗಳಲ್ಲಿ, ಕೇಂದ್ರದಲ್ಲಿ ಚುನಾವಣೆಗಳು ಆಗಾಗ ನಡೆಯುತ್ತಿವೆ. ಇದರಿಂದ ಸರಕಾರ, ಉದ್ದಿಮೆಗಳು, ಕೆಲಸಗಾರರು, ಕೋರ್ಟ್‌ಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೇಲೆ ಹೊರೆಯಾಗುತ್ತಿದೆ. ಹೀಗಾಗಿ ಸಮಿತಿಯು ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಒಮ್ಮತಾಭಿಪ್ರಾಯ ಹೊಂದಿದೆ ಎಂದು ವರದಿ ಉಲ್ಲೇಖೀಸಿದೆ.

ಅನುಕೂಲ
ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಗಿದ್ದ ಮೊದಲ 2 ದಶಕಗಳ ಅವಧಿಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. ಅದರಿಂದ ದೇಶದ ಬೊಕ್ಕಸಕ್ಕೆ, ಸಮಾಜಕ್ಕೆ ಅನುಕೂಲವಾಗಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ವಿವಿಧ ಪಕ್ಷಗಳು, ಚುನಾವಣ ಆಯೋಗ, ಆರ್ಥಿಕ, ಕಾನೂನು ಸಹಿತ ಪ್ರಮುಖ ಕ್ಷೇತ್ರಗಳ ತಜ್ಞರ ಜತೆಗೆ ವಿಚಾರ ವಿನಿಮಯ ನಡೆಸಿದಾಗ ಒಂದೇ ಹಂತದ ಚುನಾವಣೆಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಮಿತಿ ಹೇಳಿದೆ. ಈ ವ್ಯವಸ್ಥೆಯ ಮೂಲಕ ದೇಶದ ಅಭಿವೃದ್ಧಿಯ ಗತಿಯನ್ನು ಹೆಚ್ಚಿಸಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿಯನ್ನು ಮತ್ತಷ್ಟು ಭದ್ರಪಡಿಸುವುದಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ಸಮಿತಿ ಹೇಳಿದೆ.

ಹೊಸ ಚುನಾವಣೆ
ಅವಧಿಗೆ ಮುನ್ನ ಲೋಕಸಭೆ ವಿಸರ್ಜನೆಗೊಂಡರೆ, ಅವಿಶ್ವಾಸ ಗೊತ್ತುವಳಿ ನಿರ್ಣಯದ ಮೂಲಕ ಸರಕಾರ ಪತನಗೊಂಡರೆ ಉಳಿದ ಅವಧಿಗೆ ಹೊಸ ಚುನಾವಣೆ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಆದರೆ ರಾಜ್ಯ ವಿಧಾನಸಭೆಗಳಿಗೆ ಸಂಬಂಧಿಸಿ ಕೋವಿಂದ್‌ ಸಮಿತಿ ಒಂದೋ ನಿಗದಿತ ರಾಜ್ಯ ವಿಧಾನಸಭೆಯ ಅವಧಿ ಮುಗಿದಿದ್ದರೆ ಅದನ್ನು ಲೋಕಸಭೆ ಚುನಾವಣೆಯವರೆಗೆ ವಿಸ್ತರಿಸಬೇಕು. ಮತ್ತೂಂದು ರಾಜ್ಯದ ವಿಧಾನಸಭೆ ಅವಧಿ ಮುಕ್ತಾಯ ಬಾಕಿ ಇದ್ದರೆ ಕಡಿತಗೊಳಿಸಬೇಕು ಎಂದಿದೆ.

ಸಂವಿಧಾನ ತಿದ್ದುಪಡಿಗೆ ಶಿಫಾರಸು
ಈ ಸಂಬಂಧ ಸಂವಿಧಾನದ 5 ವಿಧಿಗಳಿಗೆ ತಿದ್ದುಪಡಿ ತರಬೇಕು. ಅವುಗಳಿಗೆ ರಾಜ್ಯ ವಿಧಾನಸಭೆಗಳ ಸಮ್ಮತಿಯ ಅಗತ್ಯವಿಲ್ಲ. ಇದರ ಜತೆಗೆ ದೇಶಕ್ಕೆ ಅನ್ವಯವಾಗುವ ಒಂದೇ ರೀತಿಯ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿ ಹೊಂದಬೇಕು ಎಂದಿದೆ.

Advertisement

ಏನಿದು ಸಮಿತಿಯ ವರದಿ?
ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದಲ್ಲಿ ಒಂದು ದೇಶ; ಒಂದು ಚುನಾವಣೆ ಅಧ್ಯಯನಕ್ಕೆ ಸಮಿತಿ.

ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ಸಾಧ್ಯವೇ ಎಂಬ ಅಧ್ಯಯನ.
ಹಲವು ಪಕ್ಷಗಳ ಪ್ರತಿನಿಧಿಗಳು, ಕಾನೂನು ಸಹಿತ ವಿವಿಧ ಕ್ಷೇತ್ರಗಳ ತಜ್ಞರ ಜತೆ ಸಮಿತಿ ಚರ್ಚೆ.
ಈ ಹಂತದಲ್ಲಿ ಪದೇಪದೆ ಚುನಾವಣೆ ಬದಲು ಏಕ ರೀತಿಯ ಚುನಾವಣೆ ಬಗ್ಗೆ ಅಭಿಪ್ರಾಯ ಸಲ್ಲಿಕೆ.

ವರದಿಯಲ್ಲಿ ಏನಿದೆ?
ಮೊದಲ ಹಂತದಲ್ಲಿ ರಾಜ್ಯ ವಿಧಾನಸಭೆಗಳು, ಲೋಕಸಭೆಗೆ ಚುನಾವಣೆ ನಡೆಯಬೇಕು.
ಅವುಗಳು ಪೂರ್ತಿಗೊಂಡ 100 ದಿನಗಳ ಬಳಿಕ ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ.
ಅತಂತ್ರ ವಿಧಾನಸಭೆ, ಲೋಕಸಭೆ ನಿರ್ಮಾಣಗೊಂಡರೆ, ವಿಶ್ವಾಸಮತ ಯಾಚನೆ ವೇಳೆ ಸರಕಾರ ಪತನಗೊಂಡರೆ ಆ ನಿಗದಿತ 5 ವರ್ಷಗಳ ಉಳಿದ ಅವಧಿಗೆ ಹೊಸದಾಗಿ ಚುನಾವಣೆ ನಡೆಸಬೇಕು.
3 ಹಂತಗಳ ಚುನಾವಣೆಯಲ್ಲಿ ದೇಶಕ್ಕೆ ಅನ್ವಯವಾಗುವಂತೆ ಒಂದೇ ರೀತಿಯ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ.

ರಾಜ್ಯದ ಪ್ರಸಕ್ತ ವಿಧಾನಸಭೆ ಅವಧಿ ಒಂದು ವರ್ಷ ವಿಸ್ತರಣೆ?
ಈ ಶಿಫಾರಸು ಜಾರಿಗೆ ಬಂದಲ್ಲಿ ಕರ್ನಾಟಕದ ಹಾಲಿ ವಿಧಾನಸಭೆಯ ಅವಧಿ ಒಂದು ವರ್ಷ ವಿಸ್ತರಣೆಗೊಳ್ಳಲಿದೆ.
ಅಂದರೆ ಪ್ರಸಕ್ತ ವಿಧಾನಸಭೆ ಅವಧಿ 2028ಕ್ಕೆ ಮುಗಿಯಲಿದ್ದು, ಮುಂದೆ ಲೋಕಸಭೆ ಚುನಾವಣೆಯ ಜತೆ 2029ರಲ್ಲಿ ಚುನಾವಣೆ ನಡೆಯಬೇಕಿರುವುದರಿಂದ ಒಂದು ವರ್ಷ ಮುಂದಕ್ಕೆ ಹಾಕುವಂತೆ ಸಂವಿಧಾನ ತಿದ್ದುಪಡಿ ಮಾಡಲು ಅವಕಾಶ ಇದೆ.ಈ ಶಿಫಾರಸು 2024ರಲ್ಲಿ ಜಾರಿಗೆ ಬಂದರೆ ಅಂದಿನಿಂದ ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಸರಕಾರಗಳ ಅವಧಿ 2029ಕ್ಕೆ ಮುಗಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next