Advertisement

ಒಂದು ದೇಶ ಒಂದು ಚುನಾವಣೆ ಜಾರಿ ನಿರೀಕ್ಷೆ; ಮೋದಿ ಮೂರನೇ ಅವಧಿಯಲ್ಲಿ ಹಲವು ನಿರೀಕ್ಷೆಗಳು

11:57 PM Jun 08, 2024 | Team Udayavani |

ಹೊಸದಿಲ್ಲಿ: ಭಾನುವಾರ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ನರೇಂದ್ರ ಮೋದಿ ಸರಕಾರ‌ದ ಮುಂದೆ ಹಲವು ಸವಾಲುಗಳಿವೆ. ಮೈತ್ರಿ ಸರಕಾರ‌ವನ್ನು ನಿಭಾಯಿಸಿಕೊಂಡು ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕಾಗಿದೆ. ಸರಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸು ವುದು, ಹೂಡಿಕೆ ಹಿಂದೆಗೆತದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಮುಂದಿನ ಐದು ವರ್ಷಗಳ ಮೋದಿ ಸರಕಾರ‌ ಜಾರಿ ಮಾಡಬಹುದಾದ ಯೋಜನೆಗಳ ಕಿರುವಿವರ ಇಲ್ಲಿದೆ.

Advertisement

ಒಂದು ದೇಶ ಒಂದು ಚುನಾವಣೆ: ಹಿಂದಿನ ಅವಧಿಯಲ್ಲಿ ಮೋದಿ ಸರಕಾರ‌ ಒಂದು ದೇಶ ಒಂದು ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾವಿಸಿತ್ತು. ಲೋಕಸಭಾ ಚುನಾವಣೆ ಜೊತೆಗೆಯೇ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನೂ ನಡೆಸುವ ಚಿಂತನೆ ಮಾಡಲಾಗಿತ್ತು. ಐದು ವರ್ಷ ಪೂರ್ತಿ ಚುನಾವಣೆಗಳಲ್ಲಿ ಕಾಲ ಕಳೆಯುವ ಬದಲು, ಅಭಿವೃದ್ಧಿಗೆ ಆದ್ಯತೆ ಕೊಡಬಹುದು ಎಂಬುದು ಇದರ ಹಿಂದಿನ ಉದ್ದೇಶ. ಈಗಾಗಲೇ ಇದರ ಸಾಧಕ, ಬಾಧಕಗಳ ಬಗ್ಗೆ ಸುದೀರ್ಘ‌ ಚರ್ಚೆಯಾಗಿದೆ. ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಇದುವರೆಗೆ ಆಗಿಲ್ಲ. 3ನೇ ಅವಧಿಯಲ್ಲಿ ಈ ಬಗ್ಗೆ ಬಲವಾದ ನಿರ್ಧಾರವಾಗುವ ನಿರೀಕ್ಷೆಯಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ: ಬಿಜೆಪಿ ದೀರ್ಘ‌ಕಾಲದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯ ಬಗ್ಗೆ ಹೇಳಿಕೊಂಡು ಬಂದಿದೆ. 2023ರ ಹೊತ್ತಿಗೆ ಕೇಂದ್ರ ಸರಕಾರ‌ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಪ್ರಸ್ತಾವಿಸಿತ್ತು. ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲೂ, ಏಕರೂಪ ಸಂಹಿತೆಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಸದ್ಯ ಸಮ್ಮಿಶ್ರ ಸರಕಾರ‌ ಇರುವುದರಿಂದ ಈ ಬಗ್ಗೆ ಬಿಜೆಪಿ ಸರಕಾರ‌ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಎದುರಾಗಿದೆ.

ಮೊದಲ 100 ದಿನಗಳ ಕಾರ್ಯಕ್ರಮ ಸಿದ್ಧ
ಮೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ಭಾಷಣ ಮಾಡಿದ್ದ ನರೇಂದ್ರ ಮೋದಿ, ಈಗಾಗಲೇ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಏನು ಮಾಡಬೇಕೆಂಬ ಯೋಜನೆ ಸಿದ್ಧವಾಗಿದೆ. ಜೂ.4ಕ್ಕೆ ಫ‌ಲಿತಾಂಶ ಬಂದ ಕೂಡಲೇ ಅದರ ಜಾರಿಗೆ ಸಿದ್ಧತೆ ಆರಂಭವಾಗುತ್ತದೆ ಎಂದಿದ್ದರು. ಜೂ.2ರಂದು ಅವರು ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದರು. ಅಧಿಕಾರಿಗಳ 10 ತಂಡವನ್ನು ರಚಿಸಿ 100 ದಿನಗಳ ಯೋಜನೆ ಜಾರಿಗೆ ಮೋದಿ ಯೋಜಿಸಿದ್ದಾರೆ. ಜೂ.4ರಂದು ಫ‌ಲಿತಾಂಶ ಪ್ರಕಟವಾದ ಬಳಿಕ ಖುದ್ದು ಪ್ರಧಾನಿ ಮೋದಿಯವರೇ ಹೊಸದಿಲ್ಲಿಯಲ್ಲಿ ಹಿರಿಯ ಅಧಿಕಾರಿಗಳ ಜತೆಗೆ ಸಭೆಯನ್ನೂ ನಡೆಸಿದ್ದರು. ಇದೀಗ ಮೊದಲ 100 ದಿನಗಳ ಬಗ್ಗೆ ದೇಶಾದ್ಯಂತ ಕುತೂಹಲ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next