Advertisement

ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಸಲ್ಲ

07:00 AM Apr 06, 2018 | |

ಓರ್ವ ಅಭ್ಯರ್ಥಿ ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಅನಗತ್ಯ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದ ಅಫಿಡವಿಟ್‌ನ್ನು ಚುನಾವಣಾ ಆಯೋಗ ಬುಧವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಆದರೆ ನ್ಯಾಯಾಲಯ ವಿಚಾರಣೆ ಜುಲೈಯಲ್ಲಿ ನಡೆಸಲಿರುವುದರಿಂದ ರಾಜ್ಯ ಚುನಾವಣೆಯ ಮೇಲೆ ಯಾವ ಪರಿಣಾಮವಾಗದು. 

Advertisement

ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಚರ್ಚೆಗೆ ದಶಕಕ್ಕೂ ಮಿಕ್ಕಿದ ಇತಿಹಾಸವಿದೆ. 2004ರಲ್ಲೇ ಚುನಾವಣಾ ಆಯೋಗ ಈ ಪದ್ಧತಿಯನ್ನು ರದ್ದುಪಡಿಸುವ ಸಲುವಾಗಿ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್‌ 33(7)ಕ್ಕೆ ತಿದ್ದುಪಡಿ ಮಾಡಬೇಕೆನ್ನುವ ಪ್ರಸ್ತಾವ ಇರಿಸಿತ್ತು. 2016ರಲ್ಲೂ ಮತ್ತೂಮ್ಮೆ ಈ ಪ್ರಸ್ತಾವನೆ ಸಲ್ಲಿಸಿದೆ. 2017ರಲ್ಲಿ ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವಿ‌ನ್‌ ಉಪಾಧ್ಯಾಯ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೀಗ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಒಬ್ಬ ಅಭ್ಯರ್ಥಿ ಗರಿಷ್ಠ 2 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಬಹುದು ಎಂಬ ನಿಯಮ ರೂಪುಗೊಂಡದ್ದು 1996ರಲ್ಲಿ. ಈ ಹಿಂದೆ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರೂ ಸ್ಪರ್ಧಿಸಲು ಅವಕಾಶವಿತ್ತು. ಇಂದಿರಾ, ಎನ್‌.ಟಿ.ಆರ್‌, ಮುಲಾಯಂ, ಸೋನಿಯಾರಿಂದ ಹಿಡಿದು ಮೋದಿಯ ತನಕ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ನಾಯಕರ ದೀರ್ಘ‌ ಪರಂಪರೆಯೇ ಇದೆ. ಎರಡು ಸಲ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ದಾಖಲೆ ಎನ್‌ಟಿಆರ್‌ ಹೆಸರಿನಲ್ಲಿದೆ. 

ಕೆಲವು ಜನಪ್ರಿಯ ನಾಯಕರಲ್ಲಿನ ಸೋಲುವ ಭೀತಿಯೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾರಣ. ಹೆಚ್ಚಾಗಿ ಪ್ರಧಾನಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿಗಳಾಗುವವರೇ ಹೀಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಒಂದು ಕ್ಷೇತ್ರವನ್ನು ಅವರು 10 ದಿನದಲ್ಲಿ ತೆರವು ಗೊಳಿಸಬೇಕು. ಈ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಯಬೇಕು. ಇದರಿಂದ ಜನರ ತೆರಿಗೆ ಹಣ ಪೋಲು,  ಅಮೂಲ್ಯ ಸಮಯ ವ್ಯರ್ಥ. ಈ ಎರಡೆರಡು ಕ್ಷೇತ್ರದ ಸ್ಪರ್ಧೆಯ ಅಗತ್ಯ ಪ್ರಜಾತಂತ್ರ ವ್ಯವಸ್ಥೆಗಂತೂ ಇಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ರಾಜಕಾರಣಿಗಳು ಕೊಡುವ ಬೆಲೆ ಅಷ್ಟರಲ್ಲೇ ಇದೆ. ರಾಜಕೀಯ ನಾಯಕರಿಗೆ ಅನುಕೂಲರವಾಗಿರುವುದರಿಂದ 14 ವರ್ಷ ಗಳಾದರೂ ನಿಯಮವನ್ನು ರದ್ದುಪಡಿಸುವ ಕುರಿತು ದೃಢ ನಿರ್ಧಾರ ಕೈಗೊಳ್ಳುವ ದಿಟ್ಟತನವನ್ನು ಯಾವ ಸರಕಾರವೂ ತೋರಿಸಿಲ್ಲ.  ಪ್ರಸ್ತುತ ಚುನಾವಣಾ ಆಯೋಗ ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿಯಮವನ್ನು ರದ್ದುಪಡಿಸುವುದು ಅಸಾಧ್ಯವಾದರೆ ತೆರವು ಗೊಳಿಸಿದ ಕ್ಷೇತ್ರಕ್ಕೆ ನಡೆಯುವ ಮರು ಚುನಾವಣೆಯ ಖರ್ಚನ್ನು ಗೆದ್ದ ಅಭ್ಯರ್ಥಿ ಯಿಂದಲೇ ವಸೂಲು ಮಾಡಬೇಕೆಂಬ ಪ್ರಸ್ತಾವ ಇಟ್ಟಿದೆ. ವಿಧಾನಸಭಾ ಕ್ಷೇತ್ರವಾದರೆ 5 ಲ. ರೂ. ಮತ್ತು ಲೋಕಸಭೆ ಕ್ಷೇತ್ರವಾದರೆ 10 ಲ. ರೂ. ಖರ್ಚು ವಸೂಲು ಮಾಡಬಹುದು ಎಂದು ಅಫಿಡವಿತ್‌ನಲ್ಲಿ ಸಲಹೆ ಮಾಡಿದೆ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ನಿಯಮದಿಂದಲೂ  ಹೆಚ್ಚಿನ ಪ್ರಯೋಜನವಾಗದು.ಏಕೆಂದರೆ 5 ಅಥವಾ 10 ಲಕ್ಷವೆನ್ನುವುದು ರಾಜಕಾರಣಿಗಳಿಗೆ ಅಂತೆಯೇ ರಾಜಕೀಯ ಪಕ್ಷಗಳಿಗೆ ಜುಜುಬಿ ಮೊತ್ತ. ರಾಜಕೀಯ ಎನ್ನುವುದು ಬಂಡವಾಳ ಹಾಕಿ ಹಣ ಕೊಳ್ಳೆ ಹೊಡೆಯುವ ಲಾಭದಾಯಕ ಉದ್ದಿಮೆಯಾಗಿರುವುದರಿಂದ ಇಷ್ಟು ಚಿಕ್ಕ ಮೊತ್ತದ ಹೆದರಿಕೆಯಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ನಿರೀಕ್ಷಿಸಲಾಗದು.ಪಂಚಾಯತ್‌ ಚುನಾವಣೆಯಲ್ಲೇ ಅಭ್ಯರ್ಥಿಯೊಬ್ಬ ಕೋಟಿಗಳ ಲೆಕ್ಕದಲ್ಲಿ ಹಣ ಖರ್ಚು ಮಾಡುವಂತಹ ಸನ್ನಿವೇಶ ಇರುವಾಗ ಆಯೋಗದ ಈ ಸಲಹೆ ಅವಾಸ್ತವಿಕ ಎನ್ನಬೇಕಾಗುತ್ತದೆ. ಖರ್ಚು ವಸೂಲು ಮಾಡುವುದಾಗಲಿ, ದಂಡ ಹಾಕುವುದಾಗಲಿ ಇದಕ್ಕೆ ಸೂಕ್ತ ಪರಿಹಾರ ವೆನಿಸದು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಎರಡೂ ಕಡೆ ಸೋಲಿಸುವ ಪ್ರಬುದ್ಧತೆಯನ್ನು ಮತದಾರರು ತೋರಿಸಬೇಕು. ಆಗ ಮಾತ್ರ ನಮ್ಮ ರಾಜಕೀಯ ನಾಯಕರು ಬುದ್ಧಿ ಕಲಿತಾರು. ಓರ್ವ ಅಭ್ಯರ್ಥಿ ಒಂದು ಕ್ಷೇತ್ರ ಎನ್ನುವುದು ನಮ್ಮ ಚುನಾವಣೆಯ ನೀತಿಯಾದರೆ ಸೂಕ್ತ.

Advertisement

Udayavani is now on Telegram. Click here to join our channel and stay updated with the latest news.

Next