ನಿನ್ನನ್ನು ನೋಡಲು ಎಷ್ಟೆಲ್ಲಾ ಕಷ್ಟಪಡುತ್ತೀನಿ ಗೊತ್ತಾ? ನೀನು ಮನೆಯಿಂದ ಹೊರಗೆ ಬರೋದೇ ಕಡಿಮೆ. ವಾರದಲ್ಲಿ ಎರಡೇ ದಿನ: ಸೋಮವಾರ ಸಂತೆಗೆ, ಶನಿವಾರ ದೇವಸ್ಥಾನಕ್ಕೆ ಅಂತ ಬರುತ್ತೀಯಾ, ಆವಾಗ ನನಗೆ ಏನೇ ಕೆಲಸವಿದ್ದರೂ ಬಿಟ್ಟು ಓಡಿ ಬರುತ್ತೇನೆ…
ಪೂರ್ಣಿ…….
ತಪ್ಪು ತಿಳಿದುಕೊಬೇಡ, ನಾನು ನಿನ್ನನ್ನು ಪ್ರೀತಿಯಿಂದ “ಪೂ’, “ಪೂರ್ಣಾ’, “ಪೂರ್ಣಿ’ ಅಂತ ಕರೆಯುತ್ತೇನೆ; ಪ್ಲೀಸ್ ಇದು ಪ್ರೇಮಪತ್ರವಲ್ಲ, ನನ್ನ ಮನದ ಭಾವನೆಗಳ ಕಿರುಹೊತ್ತಿಗೆ. ಇವತ್ತಿನವರೆಗೂ ನಿನ್ನನ್ನು ಮಾತಾಡಿಸೋಕೆ ತುಂಬಾ ಯತ್ನಿಸಿದ್ದೇನೆ, ನೀನೇನೋ ಯಾವಾಗಲೂ ನಿನ್ನ ಒಬ್ಬಳೇ ಗೆಳತಿಯ ಜೊತೆಗೆ ಇರುತ್ತೀಯಾ. ಎಷ್ಟು ಧೈರ್ಯಮಾಡಿ ಮಾತಾಡಿಸಬೇಕೆಂದರೂ ನೀನು ಹತ್ತಿರ ಬಂದ ತಕ್ಷಣ ಏನ್ ಆಗುತ್ತೋ ಸುಮ್ಮನೆ ನೋಡುತ್ತಾ ನನ್ನನ್ನೇ ನಾನು ಮರೆತುಬಿಡ್ತೀನಿ. ಮನಸಲ್ಲಿ ಇರೋದನ್ನು ಹೇಳಲೇಬೇಕು ಅನಿಸಿದ್ದರಿಂದ ಅದಕ್ಕೆ ಇವತ್ತು ಪತ್ರ ಬರೀತಿದ್ದೀನಿ. ನಾನು ಎರಡು ದಿನ ಕಾಲೇಜಿಗೆ ಬರಲ್ಲ, ನಿನ್ನ ನಿರ್ಧಾರವನ್ನು ನಾಡಿದ್ದು ತಿಳಿಸು. ದಯವಿಟ್ಟು ಮರೆಯಬೇಡ. ನಿನ್ನ ಮಾತು ಏನೇ ಆಗಿದ್ದರೂ ನಾನು ಒಪ್ಪಿಕೊಳ್ತೀನಿ, ಪ್ಲೀಸ್ ಮಾತಾಡಿಸೋಕೆ ಮರೀಬೇಡ.
ನಿನ್ನ ನೆನಪು ಪುಟ್ಟ ಮಗುವಿನಂಥದ್ದು, ತನಗೆ ಇಷ್ಟಬಂದಂತೆ ಗೀಚುತ್ತದೆ. ಮರಳಿನಲ್ಲಿ ತನಗಿಷ್ಟ ಬಂದಂತೆ ಮನೆ ಕಟ್ಟುತ್ತದೆ. ತನ್ನಿಷ್ಟದಂತೆ ನಡೆಯುತ್ತದೆ. ನಾನಂತೂ ನಿನ್ನ ಮುಗ್ಧತೆ ಕಂಡೇ ನಿನಗೆ ಸೋತಿದ್ದೇನೆ. ಅಷ್ಟೇ ಮುಗ್ಧವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಆದರೆ, ನಿನ್ನನ್ನೇ ಯಾಕೆ ಇಷ್ಟೊಂದು ಪ್ರೀತಿಸ್ತಿದೀನೋ ಗೊತ್ತಿಲ್ಲ.
ನಿನ್ನನ್ನು ನೋಡಲು ಎಷ್ಟೆಲ್ಲಾ ಕಷ್ಟಪಡುತ್ತೀನಿ ಗೊತ್ತಾ? ನೀನು ಮನೆಯಿಂದ ಹೊರಗೆ ಬರೋದೇ ಕಡಿಮೆ. ವಾರದಲ್ಲಿ ಎರಡೇ ದಿನ: ಸೋಮವಾರ ಸಂತೆಗೆ, ಶನಿವಾರ ದೇವಸ್ಥಾನಕ್ಕೆ ಅಂತ ಬರುತ್ತಿಯಾ, ಆವಾಗ ನನಗೆ ಏನೇ ಕೆಲಸವಿದ್ದರೂ ಬಿಟ್ಟು ಓಡಿ ಬರುತ್ತೇನೆ. ನೀನು ನನ್ನ ನೋಡಿ ಒಮ್ಮೆಯಾದರೂ ನಗುತ್ತೀಯಾ ಎಂದು ಕಾದಿರುತ್ತೇನೆ. ನೀನು ನನ್ನ ನೋಡಿ ನಕ್ಕಾಗಲಂತೂ ನನ್ನೊಳಗೆ ನವಿಲೊಂದು ಕುಣಿದಾಡಿದ ಅನುಭವ. ಅದೇ ಖುಷಿಯಲ್ಲಿ ಹೇಗೋ ಮತ್ತೆ ಒಂದು ವಾರ ಕಳೆದು ಬಿಡುತ್ತೇನೆ.
ಇತ್ತೀಚೆಗೆ ಗುಡಿಗೆ ಹೋಗುವಾಗ, ಸಂತೆಗೆ ಬರುವಾಗಲೆಲ್ಲಾ ನನ್ನ ನೋಡಿ ನಿನ್ನ ಗೆಳತಿಗೆ ಏನೋ ಹೇಳುತ್ತಿಯಾ… ಒಂದು ದಿನ ನಾನು ಸಂತೆಗೆ ಬರದೇ ಇದ್ದಾಗ, ಅದನ್ನು ತಕ್ಷಣ ಗಮನಿಸಿ- “ಇವತ್ತು ಅವನು ಏಕೆ ಬಂದಿಲ್ಲ?’ ಎಂದು ಕೇಳಿದೆಯಂತೆ. ನಿಜ ಹೇಳಲಾ, ನಾನು ನಿನ್ನಷ್ಟು ಜಾಣನಲ್ಲ, ನಮ್ಮ ಕ್ಲಾಸ್‌ಗೆ ಹೊಸದಾಗಿ ಬಂದ ಗಣಿತ ಮೇಡಂಗೆ ನನ್ನ ಮೇಲೆ ಏನ್ ಕೋಪಾನೋ ಏನೋ, ಅವರು ನನಗೆ ಹೊಡೆದಾಗಲೆಲ್ಲಾ ನಿನ್ನ ಮುಖದಲ್ಲಿ ಅಸಮಾಧಾನ, ನೋವು ಎದ್ದು ಕಾಣುತ್ತಿತ್ತು.
ನೀನು ನಾಲ್ಕು ದಿನದಿಂದ ಕಾಲೇಜಿಗೆ ಬಂದಿಲ್ಲ ಎಂದು ಗೊತ್ತಾದಾಗ ಆ ಬಗ್ಗೆ ನಿನ್ನ ಗೆಳತಿಯನ್ನು ಕೇಳಿದೆ. ಪಾಪ ಕಣೋ, ಅವಳಿಗೆ ಹುಷಾರಿಲ್ಲ ಎಂದು ಹೇಳಿದಳು, ಅದಕ್ಕೇ ಮನಸ್ಸು ತಡೆಯದೇ ನಿಮ್ಮ ಮನೆಯ ಸುತ್ತಮುತ್ತ ಅಡ್ಡಾಡುತ್ತಿದ್ದೇ. ನಿಮ್ಮ ಅಣ್ಣ ನನ್ನನ್ನು ನೋಡಿ, “ಇಲ್ಲಿಗೆ ಯಾಕೆ ಬಂದೆಯೋ? ಯಾರನ್ನು ನೋಡಬೇಕಿತ್ತು?’ ಎಂದು ಕೇಳಿದ, ಏನು ಮಾಡಲೂ ತಿಳಿಯದೇ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಬಂದೆ. ಆದರೆ ಈಗ, ಹೇಳದೇ ಇರೋಕೆ ಆಗುತ್ತಿಲ್ಲ, ಒಂದು ವಾರದಿಂದ ಯೋಚಿಸಿ ಈ ಪತ್ರ ಬರೆದಿದ್ದೇನೆ. ನಿನ್ನ ಉತ್ತರ ಏನು ಹೇಳು…
ಇಂತಿ ನಿನ್ನವನು
ಕಿರಣ ಪ ನಾಯ್ಕನೂರ