Advertisement
ಅದು ಚಿಲಿಕಾ ಸರೋವರ. ಒಡಿಶಾದಲ್ಲಿರುವ ಈ ವಿಶಾಲ ಸರೋವರದ ದಡದಲ್ಲಿ ಅನೇಕ ಗ್ರಾಮಗಳಿವೆ. ಇಲ್ಲಿಗೆ ಪ್ರತಿವರ್ಷ ನೂರಾರು ಪ್ರಭೇದಗಳ ಸಾವಿರಾರು ಹಕ್ಕಿಗಳು ವಲಸೆ ಬರುತ್ತವೆ. ಕೆಲವು ವರ್ಷಗಳ ಹಿಂದಿನವೆರೆಗೆ ಇಲ್ಲಿಗೆ ವಲಸೆ ಬರುವ ಹಕ್ಕಿಗಳನ್ನು ಗ್ರಾಮಸ್ಥರು ಬೇಟೆಯಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂದಿನ ಭಕ್ಷಕರೆ ಇಂದಿನ ರಕ್ಷಕರಾಗಿದ್ದಾರೆ. ಹೌದು, ಗ್ರಾಮಸ್ಥರು ಈಗ ಹಕ್ಕಿಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಅದು ಹೇಗೆ?ಅವರ ಮನಃ ಪರಿವರ್ತನೆ ಹೇಗಾಯಿತು ಎನ್ನುವುದ ವಿವರ ಇಲ್ಲಿದೆ.
Advertisement
ಈ ವಿಶೇಷ ಅತಿಥಿಗಳ ಪ್ರಾಧಾನ್ಯತೆ ಅರಿಯದ ಸ್ಥಳೀಯರು ಕೆಲವು ವರ್ಷಗಳ ಹಿಂದದಿನವರೆಗೆ ಇವುಗಳನ್ನು ಬೇಟೆಯಾಡುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಹಕ್ಕಿಗಳ ಮೇಲೆ ದಾಳಿ ಮಾಡಿ ಅವುಗಳ ಮಾಂಸಗಳನ್ನು ಮಾರಾಟ ಮಾಡಲಾಗುತ್ತಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಹಕ್ಕಿಗಳ ಮಾಂಸಗಳಿಗೂ ಭರ್ಜರಿ ಬೇಡಿಕೆ ಇತ್ತು. 20 ರೂ.ಯಿಂದ ಹಿಡಿದು 60 ರೂ.ವರೆಗೂ ಹಕ್ಕಿಗಳ ಮಾಂಸ ಬಿಕರಿಯಾಗುತ್ತಿದ್ದವು. ಈ ಬೇಟೆ ಎಷ್ಟು ಅವ್ಯಾಹತವಾಗಿ ನಡೆಯುತ್ತಿತ್ತು ಎಂದರೆ 90ರ ದಶಕದಲ್ಲಿ ಒಬ್ಬ ನುರಿತ ಬೇಟೆಗಾರ ವರ್ಷದಲ್ಲಿ 10 ಸಾವಿರ ರೂ.ಯಿಂದ ಹಿಡಿದು 40 ಸಾವಿರ ರೂ.ವರೆಗೂ ಸಂಪಾದಿಸುತ್ತಿದ್ದ!
ಬದಲಾವಣೆಯ ಗಾಳಿಪಕ್ಷಿಗಳ ನಿರಂತರ ಬೇಟೆಯನ್ನು ಗಮನಿಸುತ್ತಿದ್ದ ವೈಲ್ಡ್ ಒರಿಸ್ಸಾ ಎನ್ನುವ ಸರಕಾರೇತರ ಸಂಸ್ಥೆ 1997ರಲ್ಲಿ ಈ ಹಿಂಸಾ ಪ್ರವೃತ್ತಿ ಕೊನೆಗಾಣಿಸುವ ಉದ್ದೇಶದಿಂದ ಯೋಜನೆಯನ್ನು ಹುಟ್ಟು ಹಾಕಿತು. ವೈಲ್ಡ್ ಒರಿಸ್ಸಾದ ನಂದಕಿಶೋರ್ ಭುಜಬಲ್ ಗ್ರಾಮಸ್ಥರ ಮನವೊಲಿಕೆ ಮುಂದಾದರು. ಗ್ರಾಮಸ್ಥರೊಂದಿಗೆ ಬರೆತು ಅವರ ಕಷ್ಟ ಸುಖಗಳಿಗೆ ಕಿವಿಯಾಗಿ ಅವರ ವಿಶ್ವಾಸ ಗಳಿಸಿದರು. ಬಳಿಕ ನಿಧಾನವಾಗಿ ಹಕ್ಕಿಗಳ ಪ್ರಾಧಾನ್ಯತೆಗಳನ್ನು ಅವರಿಗೆ ಮನದಟ್ಟು ಮಾಡತೊಡಗಿದರು. ಜತೆಗೆ ಬೇಟೆ ಶಿಕ್ಷಾರ್ಹ ಎನ್ನುವುದನ್ನು ತಿಳಿಸಿದರು. ಮಾತ್ರವಲ್ಲ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಅರಣ್ಯ ಸಂರಕ್ಷಕರಾಗಿಯೂ ಕೆಲಸ ಮಾಡಿದರು. ಕ್ರಮೇಣ ಗ್ರಾಮಸ್ಥರು ನಂದಕಿಶೊರ್ ಜತೆ ಸಹಕರಿಸತೊಡಗಿದರು.
ಕ್ರಮೇಣ ಸಂಶೋಧಕರು, ವಿಜ್ಞಾನಿಗಳು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡತೊಡಗಿದರು. ಹೀಗೆ ಇಕೋ(ಪರಿಸರ ಸ್ನೇಹಿ ಪ್ರವಾಸೋದ್ಯಮ) ಟೂರಿಸಂ ಕಾರಣದಿಂದ ಗ್ರಾಮಸ್ಥರಿಗೆ ಆದಾಯವೂ ಬರತೊಡಗಿತು. ಹೊಸ ಆದಾಯ ಮಾರ್ಗ
ಹಿಂದೆ ಹಕ್ಕಿಗಳನ್ನು ಬೇಟೆಯಾಡಿ ಹಣ ಸಂಪಾದಿಸುತ್ತಿದ್ದ ಗ್ರಾಮಸ್ಥರು ಪರ್ಯಾಯ ಮಾರ್ಗದ ಮೂಲಕ ಆದಾಯ ಕಂಡು ಕೊಳ್ಳತೊಡಗಿದರು. ಪ್ರವಾಸಿಗರಿಗೆ ಗೈಡ್ ಆಗಿ, ಸಂಶೋಧಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸತೊಡಗಿದರು. ಹೀಗೆ ಹಿಂದೆ ಹಕ್ಕಿಗಳನ್ನು ಬೇಟೆಯಾಡಿ ಹಣ ಸಂಪಾದಿಸುತ್ತಿದ್ದವರು ಈಗ ಸಂರಕ್ಷಿಸಿ ಹಣ ಸಂಪಾದಿಸತೊಡಗಿದ್ದಾರೆ.