“ಒನ್ಸ್ ಮೋರ್ ಕೌರವ’ ಎಂಬ ಚಿತ್ರವೊಂದು ಆರಂಭವಾಗಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು (ನ.03) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ನರೇಶ್ ಗೌಡ ಹೀರೋ ಆಗುತ್ತಿದ್ದಾರೆ. ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸಿದ್ದು, ನರೇಶ್ ನಾಯಕರಾಗಿ ನಟಿಸುವ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ. ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದಾರೆ.
“ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆ ಹುಟ್ಟಿದೆ. ಫೋನ್ ಮಾಡಿ ಚಿತ್ರದ ಬಗ್ಗೆ ವಿಚಾರಿಸುತ್ತಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಚಿತ್ರ. ಜನರಿಗೆ ಇಷ್ಟವಾಗುತ್ತದೆಂಬ ವಿಶ್ವಾಸವಿದೆ. ವಿತರಕ ಜಯಣ್ಣ ಒಳ್ಳೊಳ್ಳೆ ಥಿಯೇಟರ್ ಸೆಟಪ್ ಮಾಡಿದ್ದಾರೆ. ನಮ್ಮ ಬ್ಯಾನರ್‌ನಲ್ಲಿ ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಇಲ್ಲಿ ನಾನು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಚಿತ್ರದ ಬಗ್ಗೆ ಹೇಳಿದರು ನರೇಶ್.
ನಿರ್ದೇಶಕ ಎಸ್. ಮಹೇಂದರ್‌ಗೆ ಈ ಚಿತ್ರ ಗೆಲ್ಲುವ ವಿಶ್ವಾಸವಿದೆಯಂತೆ. ಅದಕ್ಕೆ ಕಾರಣ, ಚಿತ್ರ ಆರಂಭವಾದ ದಿನದಿಂದ ಇಲ್ಲಿವರೆಗೆ ಯಾವುದೇ ಸಮಸ್ಯೆಯಾಗದೇ ಸುಸೂತ್ರವಾಗಿ ಎಲ್ಲವೂ ನಡೆದುಕೊಂಡು ಬಂದಿದ್ದು. ಅದರಂತೆ ಚಿತ್ರವನ್ನು ಜನ ಇಷ್ಟಪಟ್ಟು ಗೆಲ್ಲಿಸುತ್ತಾರೆಂಬ ವಿಶ್ವಾಸವೂ ಇದೆ. “ಇದು ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥೆ.
ಆದರೆ, ಇಂದಿನ ಟ್ರೆಂಡ್‌ಗೆ ಹೇಗೆ ಬೇಕೋ ಆಗಿದೆ. ಚಿತ್ರ ತುಂಬಾ ಸ್ಪೀಡ್ ಇದೆ. ಎಲ್ಲೂ ಅನಾವಶ್ಯಕ ಅಂಶ ಸೇರಿಸಿಲ್ಲ. ತಾಂತ್ರಿಕವಾಗಿಯೂ ಸಿನಿಮಾ ಗಟ್ಟಿಯಾಗಿದೆ’ ಎಂದರು ಮಹೇಂದರ್. ಚಿತ್ರದಲ್ಲಿ ಅನುಷಾ ನಟಿಸಿದ್ದು, ಕುರಿ ಮೇಯಿಸಯವ ಹುಡುಗಿಯಾಗಿ ನಟಿಸಿದ್ದಾರಂತೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಅವರಿಗೆ ಗ್ರಾಮೀಣ ಸೊಗಡಿನ ಚಿತ್ರಕ್ಕೆ ಸಂಗೀತ ನೀಡಬೇಕೆಂಬ ಆಸೆ ಇತ್ತಂತೆ.
ಅದು “ಒನ್ಸ್ ಮೋರ್ ಕೌರವ’ ಮೂಲಕ ಈಡೇರಿದೆಯಂತೆ. ಚಿತ್ರದ ಹಾಡುಗಳನ್ನು ಬರೆದ ಕೆ.ಕಲ್ಯಾಣ್ ಇಡೀ ಸಿನಿಮಾವನ್ನು “ಮಾತೆಲ್ಲಾ ಬಾಗೀನ ಮೈಯೆಲ್ಲಾ ಗ್ರಾಮೀಣ’ ಎನ್ನುವ ಮೂಲಕ ಇದೊಂದು ಹಳ್ಳಿ ಸೊಗಡಿನ ಸಿನಿಮಾ ಖುಷಿ ಹಂಚಿಕೊಂಡರು. ಛಾಯಾಗ್ರಾಹಕ ಕೃಷ್ಣಕುಮಾರ್ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.