ದೇವರೇ, ನಾಳೆ ಸ್ವಲ್ಪ ಲೇಟಾಗಿ ಬೆಳಗಾಗುವ ಹಾಗೆ ಮಾಡಪ್ಪ’ ಎಂದು ಬೇಡಿ 3-4 ಗಂಟೆ ಕಳೆಯಿತೇನೊ. ಒಮ್ಮೆಲೇ ದಢಾರ್ ಎಂದು ಸದ್ದಾಯಿತು. ಯಾರೋ ನಾಲ್ಕೈದು ಜನ ದಾಂಡಿಗರು ಕೈಯಲ್ಲಿ ಚಾಕು-ಚೂರಿ, ದೊಣ್ಣೆ- ಮಚ್ಚು ಹಿಡಿದು ಬಂದಿದ್ದರು. ಅವರೆಲ್ಲ ನನ್ನತ್ತ ಧಾವಿಸಿ ಬರುತ್ತಿರುವುದನ್ನು ಕಂಡು ಹೆದರಿ, ದಿಕ್ಕುತೋಚದೆ ಕಾಲ್ಕಿತ್ತಿದ್ದೆ.
ಓಡಿ ಸುಸ್ತಾಯಿತೇ ಹೊರತು ಮುಂದೇನು ಮಾಡಲಿ ಎಂದು ದಾರಿ ತೋಚಲಿಲ್ಲ. ಪ್ರಾಣ ಭಯದಲ್ಲಿ ಕಣ್ತುಂಬಿ ಬಂತು. ನಾನೇನು ತಪ್ಪು ಮಾಡಿದೆ ಎಂದು ಇವರೆಲ್ಲ ಅಟ್ಟಾಡಿಸಿಕೊಂಡು ಬರುತ್ತಿದ್ದಾರೆ? ಎಂದು ಅರಿಯದೆ ಗೋಳ್ಳೋ ಎಂದು ಅಳುತ್ತಲೇ ಓಡಿದೆ. ಅವರೆಲ್ಲ ನನ್ನ ಹೆಜ್ಜೆ ಗುರುತನ್ನು ಹಿಂಬಾಲಿಸಿ ಬರುವಂತಿತ್ತು. ಎಷ್ಟು ವೇಗವಾಗಿ ಓಡಿದರೂ ಬೆನ್ನು ಬಿಡುತ್ತಿರಲಿಲ್ಲ. ಭಯಭೀತಳಾಗಿದ್ದ ನನಗೆ ಎದುರುಗಡೆ ಹಳ್ಳವೊಂದು ಕಾಣಿಸಿತು. ಈ ಹಳ್ಳವನ್ನು ದಾಟಿದರೆ ಅವರು ನನ್ನ ಹೆಜ್ಜೆಗುರುತು ಹಿಡಿಯಲಾರರು ಎಂದು ಹಳ್ಳ ದಾಟಿ ಓಡಿದೆ. ಇನ್ನು ಎಲ್ಲಾದರೂ ಅಡಗಿ ಕೂತರೆ ಮಾತ್ರ ಉಳಿಗಾಲವೆಂದು ಅಲ್ಲೇ ಇದ್ದ ಪೊದೆಯ ಹಿಂಬದಿಯಲ್ಲಿ ಅವಿತುಕೂತೆ. ಧಾವಿಸಿ ಬರುತ್ತಿದ್ದ ಏದುಸಿರನ್ನು ನಿಯಂತ್ರಿಸಲು ಯತ್ನಿಸಿದೆ. ಆ ಕ್ಷಣವೇ ತಿರುಗಿನೋಡಿದರೆ, “ಏಯ…!’ ಎಂದು ಯಾರೋ ನನ್ನ ಮೇಲೆ ದೊಣ್ಣೆ ಎತ್ತಿದರು ಅನ್ನುವಷ್ಟರಲ್ಲಿ “ಅಮ್ಮಾ’ ಎಂದು ಕಿರುಚಿಕೊಂಡೆ.
ಆ ದುಃಸ್ವಪ್ನಕ್ಕೆ ಹೆದರಿ ಎದೆತಾಳ ತಪ್ಪಿಹೋಗಿತ್ತು. ಎದ್ದು ಕೂತವಳೇ ಜೋರಾಗಿ ಅಳಲಾರಂಭಿಸಿದೆ. ಭಯದಲ್ಲಿ ಮೈಯೆಲ್ಲ ಬೆವತು ಹೋಗಿತ್ತು. ಕಣ್ಣುಮುಚ್ಚಿದರೆ ಅವರು ನನ್ನನ್ನು ಕೊಂದೇ ಬಿಡುತ್ತಾರೆ ಎಂದೆನ್ನಿಸಿಬಿಟ್ಟಿತ್ತು. ಸಮಯ ಬೇರೆ ಇನ್ನೂ 2 ಗಂಟೆ ಆಗಿತ್ತಷ್ಟೆ. ಒಮ್ಮೆ ಬೆಳಕಾದರೆ ಸಾಕಪ್ಪ, ನಿದ್ದೇನೂ ಬೇಡ ಏನೂ ಬೇಡವೆಂದು ಪ್ರಾರ್ಥಿಸಿದೆ. ಹಿಂದೆಂದೂ ನೆನಪಿಗೆ ಬಾರದ ದೇವರನಾಮಗಳೆಲ್ಲ ನಾಲಗೆಯಲ್ಲಿ ತುದಿಯಲ್ಲಿ ಹರಿದಾಡಲಾರಂಭಿದವು. ಪಕ್ಕದಲ್ಲಿ ಮಲಗಿದ್ದ ಅಕ್ಕನನ್ನು ತಬ್ಬಿ ಮಲಗುತ್ತೇನೆ ಅಂದರೆ ಆಕೆ ನಿಜವಾಗಿಯೂ ನನ್ನ ಸಹೋದರಿಯೆ? ಅಥವಾ ಆ ಗುಂಪಿನವರಲ್ಲಿ ಒಬ್ಬರಾಗಿದ್ದರೆ ಎಂದು ಹೆದರಿ ಆಕೆಯ ಹತ್ತಿರಕ್ಕೂ ಸುಳಿಯದೆ ಗೋಡೆಯ ಮೂಲೆಯಲ್ಲಿ ಮುದುಡಿದೆ.
ಪ್ರತಿಯೊಂದು ಕ್ಷಣವು ಗಂಟೆಯಂತೆ ಭಾಸವಾಯಿತು. “ಭಗವಂತ, ಇನ್ನು ಯಾವತ್ತಿಗೂ ಲೇಟಾಗಿ ಬೆಳಗಾಗಲಿ ಎಂದು ಬೇಡಲ್ಲ. ಈಗ ಒಮ್ಮೆ ಬೆಳಕು ಹರಿಯುವಂತೆ ಮಾಡಪ್ಪ’ ಎಂದು ಸ್ಮರಿಸಿದೆ. ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ. ಅಮ್ಮ ಬಂದು, “ಇನ್ನೂ ಮಲಗಿದ್ದೀಯಲ್ಲ, ಎದ್ದೇಳೆ’ ಎಂದು ಗೊಣಗಿದಾಗ ಎಚ್ಚರವಾಯಿತು. ನಿದ್ದೆ ಇನ್ನೂ ಇಳಿದಿರಲಿಲ್ಲ. ಹೊರಳಾಡಿಕೊಂಡು ಎದ್ದವಳು ರಾತ್ರಿ ನಡೆದ ಘಟನೆಗಳ ಗುಂಗಿನಲ್ಲಿದ್ದೆ. ಯಾರಿಗಾದರೂ ಹೇಳಿದರೆ ಆಡಿಕೊಂಡು ನಗುತ್ತಾರೆ ಎಂದು ಸುಮ್ಮನಾದೆ.
ದೀಕ್ಷಾ ಕುಮಾರಿ
ತೃತೀಯ ಪತ್ರಿಕೋದ್ಯಮ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು