ಬೆಂಗಳೂರು/ ಹೊಳೆನರಸೀಪುರ: ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ಈ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಇದು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
“ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅಡತಡೆ ಇಲ್ಲದೆ ಪೂರ್ಣಾವಧಿಗೆ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯ ಲಿದ್ದಾರೆ’ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡುವ ಮೂಲಕ ಅಧಿಕಾರ ಹಂಚಿಕೆ ಚರ್ಚೆಗೆ ಮರುಚಾಲನೆ ನೀಡಿದ್ದಾರೆ. ಇದ ರೊಂದಿಗೆ ಎರಡೂ ಬಣಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಷ್ಟೇ ಅಲ್ಲ, ಯತೀಂದ್ರ ಈ ಹೇಳಿಕೆಯು ವಿಪಕ್ಷ ಬಿಜೆಪಿಗೂ ಆಹಾರವಾಗಿದ್ದು, “ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಸಿಗಬಾರದು ಎಂಬ ಅಧಿಕಾರ ಹಂಚಿಕೆ ಸೂತ್ರ ಕಾಂಗ್ರೆಸ್‌ನಲ್ಲಿ ಆಗಿದೆ’ ಎಂದು ಟೀಕಿಸಿದೆ.
ಈ ಮಧ್ಯೆ ವಿವಿಧೆಡೆ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಆಸೆ ಪಡುವುದು ಮತ್ತು ತಮಗೆ ಶಕ್ತಿ ನೀಡುವಂತೆ ಜನರನ್ನು ಕೇಳುವುದು ತಪ್ಪಲ್ಲ. ಆದರೆ ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮ್ಮ ಗುರಿ ಈಗೇನಿದ್ದರೂ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ನಡೆಯ ಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಮಜಾಯಿಷಿ ಮತ್ತು ಸಮರ್ಥನೆ ಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆ ಯು ತ್ತಿದ್ದಂತೆ ಈ ಅಧಿಕಾರ ಹಂಚಿಕೆ ಚರ್ಚೆ ಮುನ್ನೆಲೆಗೆ ಬಂದಿತ್ತು. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮುಖ್ಯ ಮಂತ್ರಿ ಕುರ್ಚಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ನಾಯಕರ ಮನವೊಲಿಕೆಗೆ ಹೈಕಮಾಂಡ್ ದಿಲ್ಲಿ ಯಲ್ಲಿ ಮ್ಯಾರಥಾನ್ ಸಭೆಗಳನ್ನು ನಡೆಸಿತ್ತು. ಅಂತಿಮವಾಗಿ ತಲಾ ಎರಡೂವರೆ ವರ್ಷ ಗಳ ಅವಧಿಗೆ ಅಧಿಕಾರ ಹಂಚಿಕೆ ಸೂತ್ರ ಕಂಡುಕೊಳ್ಳ ಲಾಗಿತ್ತು. ಇದರ ಅನಂತರ ಕೂಡ ಅಲ್ಲಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಅನುಮಾನಗಳು ಆಗಾಗ ವ್ಯಕ್ತವಾಗುತ್ತಲೇ ಇದ್ದವು. ಈಗ ಯತೀಂದ್ರ ಅವರ ಹೇಳಿಕೆ ಅದಕ್ಕೆ ಮತ್ತೆ ಮರುಚಾಲನೆ ನೀಡಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಯತೀಂದ್ರ ತಿಳಿಸಿದರು.
ಸಿಎಂ ಹುದ್ದೆಯ ಬಗ್ಗೆ ನಾನೂ ನಿರ್ಧರಿಸುವುದಿಲ್ಲ, ಯತೀಂದ್ರ ಅವರೂ ನಿರ್ಧರಿಸುವುದಿಲ್ಲ, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನಿಸುತ್ತದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಆಸೆ ಪಡುವುದು ಮತ್ತು ತಮಗೆ ಶಕ್ತಿ ನೀಡುವಂತೆ ಜನರಿಗೆ ಮನವಿ ಮಾಡುವುದು ತಪ್ಪಲ್ಲ. ಯತೀಂದ್ರ ಸೂಕ್ಷ್ಮ, ಜವಾಬ್ದಾರಿಯುತ ನಾಯಕ. ಈಗಷ್ಟೇ ಉದ್ಭವವಾಗುತ್ತಿರುವ ನಾಯಕ. ಅವರಿಗೆ ಪ್ರೋತ್ಸಾಹ ನೀಡೋಣ.
– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ