Advertisement

‘ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕೊಡಿ’

11:39 AM Nov 11, 2017 | |

ಪುತ್ತೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರ ಭ್ರಷ್ಟಾಚಾರದಿಂದ ತುಂಬಿದೆ. ಸಿದ್ದರಾಮಯ್ಯ ನೇತೃತ್ವದ ಸಚಿವರು ನೈತಿಕತೆ ಕಳೆದುಕೊಂಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಈ ಸರಕಾರ ಕಿತ್ತೂಗೆದು ಬಿಜೆಪಿಗೆ ಮತ್ತೂಂದು ಅವಕಾಶ ನೀಡಬೇಕೆಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು.

Advertisement

ಶುಕ್ರವಾರ ಕಿಲ್ಲೆ ಮೈದಾನದಲ್ಲಿ ಪರಿವರ್ತನಾ ರ‍್ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷವನ್ನು ಸ್ವಾರ್ಥಕ್ಕಾಗಿ ಬಳಸಬಹುದೆಂಬ ಭಯದಿಂದಲೇ ಸ್ವಾತಂತ್ರ್ಯ ಬಂದ ತತ್‌ಕ್ಷಣ ಕಾಂಗ್ರೆಸ್‌ ವಿಸರ್ಜಿಸಬೇಕೆಂಬ ಅಪೇಕ್ಷೆ ಮಹಾತ್ಮಾ ಗಾಂಧೀಜಿ ಅವರದ್ದಾಗಿತ್ತು. ಆ ಭಯ ಸತ್ಯವೆನಿಸುವಂತೆ ರಾಜ್ಯ ಸರಕಾರ ನಡೆದುಕೊಳ್ಳುತ್ತಿದೆ. ಗಾಂಧೀಜಿ ಕನಸನ್ನು ನನಸು ಮಾಡಲು ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್‌ ಹುಟ್ಟಿದ ಮತ್ತು ಬದುಕಿದ ಐದು ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಮುಂದಾಗಿದೆ. ಆದರೆ ರಾಜ್ಯ ಸರಕಾರ ಹಿಂದುಳಿದ ವರ್ಗದ ಚಾಂಪಿಯನ್‌ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಮೀನು ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಜನರಿಗೆ ಅವಮಾನ ಮಾಡಿದ್ದಾರೆ. ಮೋದಿ ಉಪವಾಸ ಕುಳಿತು ಅದೇ ಧರ್ಮಸ್ಥಳ ಕ್ಷೇತ್ರ ದರ್ಶನ ಮಾಡಿದ್ದಾರೆ. ಇಂತಹ ಮೋದಿಯ ಜತೆಗೆ ಸಿದ್ದರಾಮಯ್ಯ ತನ್ನನ್ನು ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಮೋದಿಯವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೆ ಭಯ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಬಚ್ಚಾ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಬಜರಂಗದಳ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪೊಲೀಸರು  ಹಿಂದೂಗಳಿಂದ 10 ಲಕ್ಷ ರೂ. ಬಾಂಡ್‌ ಕೇಳುತ್ತಿದ್ದಾರಂತೆ. ತಪ್ಪಿದರೆ ಮುಂದಿನ ವರ್ಷ ವಾರಂಟ್‌ ಹೊರಡಿಸುವ ಸನ್ನಾಹದಲ್ಲಿದ್ದಾರೆ ಎಂದು ಯಡಿಯೂರಪ್ಪನವರಿಗೆ ಮನವಿ ನೀಡಿದೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ, ಈಗ ಕಾಂಗ್ರೆಸ್‌ ಸರಕಾರವಿರುವಾಗ, ಮುಂದೆ ಬಿಜೆಪಿ ಸರಕಾರ ಬಂದಾಗ ಪೊಲೀಸರು ಬದಲಾಗಲಾರರು. ಆದ್ದರಿಂದ ಪೊಲೀಸರು
ಸರಿಯಾಗಿ ಕೆಲಸ ನಿರ್ವಹಿಸಿ. ತಪ್ಪಿದರೆ ಸರಿಯಾದ ಉತ್ತರ ನೀಡಬೇಕಾದೀತು ಎಂದು ಎಚ್ಚರಿಸಿದರು.

Advertisement

ಸಂಸದ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ.
ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಮೊದಲಾದ ಸಂಘಟನೆಗಳ ಮೇಲೆ ವೃಥಾ ಪ್ರಕರಣ ದಾಖಲು ಮಾಡಲಾಗುತ್ತಿದೆ. ರಾಜ್ಯದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ರಾಜ್ಯ ಸರಕಾರ ಕಿಮ್ಮತ್ತಿನ ಬೆಲೆ ಕೊಡುತ್ತಿಲ್ಲ. ಇಂತಹ ಸರಕಾರವನ್ನು ಕಿತ್ತೂಗೆದು, ನವ ಕರ್ನಾಟಕಕ್ಕಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು. ನಟ ಕುಮಾರ್‌ ಬಂಗಾರಪ್ಪ ಮಾತನಾಡಿ, ಪರಿವರ್ತನೆ ಎನ್ನುವುದು ಜನರ ಅಂತರಂಗದ ಮಾತು. ಸಾಮಾಜಿಕ, ರಾಜಕೀಯ ಬದಲಾವಣೆ ಸದ್ಯದಲ್ಲೇ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕ ಎಸ್‌. ಅಂಗಾರ, ಕ್ಯಾ.ಗಣೇಶ್‌ ಕಾರ್ಣಿಕ್‌, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ನಗರಸಭೆ ಸದಸ್ಯ ರಾಜೇಶ್‌ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಬಿಜೆಪಿ ಪರಿವರ್ತನಾ ರ‍್ಯಾಲಿಗೆ ಧ್ಯೇಯಗೀತೆ ಹಾಡಿದ ಜಗದೀಶ್‌ ಆಚಾರ್ಯ ನೆಹರೂನಗರ ಅವರು ಆಶಯ ಗೀತೆ ಹಾಡಿದರು.

ಬಿಜೆಪಿ ಸೇರ್ಪಡೆ
ಇದೇ ಸಂದರ್ಭ ಯುವ ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಸಹಜ್‌ ರೈ ಬಳೆಜ್ಜ ಹಾಗೂ ದಲಿತ ಮುಖಂಡ ಚಂದ್ರ ಐ ಇದ್ಪಾಡಿ ಅವರಿಗೆ ಬಿಜೆಪಿ ಧ್ವಜ ಹಾಗೂ ಶಾಲು ಹೊದಿಸುವ ಮೂಲಕ ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು.

ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಜೀವಂದರ್‌ ಜೈನ್‌ ವಂದಿಸಿದರು.  ರಾಜೇಶ್‌ ಬನ್ನೂರು, ಚಂದ್ರಶೇಖರ್‌ ರಾವ್‌ ಬಪ್ಪಳಿಗೆ, ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next