ಚೆನ್ನೈ: ಇಲ್ಲಿನ ಪಿ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಭರ್ಜರಿ ಜಯ ಸಾಧಿಸಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್ ಅಂತರದಿಂದ ಗೆದ್ದ ಮುಂಬೈ ಮುಂದಿನ ಹಂತಕ್ಕೆ ತೇರ್ಗಡೆಯಾಯಿತು.
ಯುವ ಬೌಲರ್ ಆಕಾಶ್ ಮಧ್ವಾಲ್ ಅವರು ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 3.3 ಓವರ್ ಎಸೆದ ಮುಂಬೈ ವೇಗಿ ಕೇವಲ ಐದು ರನ್ ನೀಡಿ ಐದು ವಿಕೆಟ್ ಕಿತ್ತು ಮಿಂಚಿದರು. ಹಾಗಾದರೆ ಯಾರು ಈ ಆಕಾಶ್ ಮಧ್ವಾಲ್? ಇಲ್ಲಿದೆ ಮಧ್ವಾಲ್ ಸ್ಟೋರಿ.
ಇದನ್ನೂ ಓದಿ:ʼಕೆರಾಡಿ ಸ್ಟುಡಿಯೋಸ್ʼ ಮೂಲಕ ಸಿನಿಮಾರಂಗದಲ್ಲಿ ಹೊಸ ಹೆಜ್ಜೆಯಿಟ್ಟ ರಿಷಬ್ ಶೆಟ್ಟಿ
ಇಂಜಿನಿಯರಿಂಗ್ ಓದಿರುವ ಮಧ್ವಲ್, ಐಪಿಎಲ್ ಆಡಿದ ಉತ್ತರಾಖಂಡ್ ರಾಜ್ಯದ ಮೊದಲ ಕ್ರಿಕೆಟಿಗ. ಸೂರ್ಯಕುಮಾರ್ ಯಾದವ್ ಗಾಯಗೊಂಡ ಕಾರಣ ಅವರ ಬದಲಿಯಾಗಿ 2022 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು.
ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಆಕಾಶ್ 2019 ರಲ್ಲಿ ಆಗಿನ ಉತ್ತರಾಖಂಡ್ ಕೋಚ್ ವಾಸಿಮ್ ಜಾಫರ್ ಮತ್ತು ಪ್ರಸ್ತುತ ಕೋಚ್ ಮನೀಶ್ ಝಾ ಅವರ ಕಣ್ಣಿಗೆ ಬಿದ್ದಿದ್ದರು. ಇದರ ಪರಿಣಾಮವಾಗಿ ಆಕಾಶ್ ಸೀಸನ್ ಬಾಲ್ ನೊಂದಿಗೆ ಆಡಲು ಪ್ರಾರಂಭಿಸಿದರು. ಸದ್ಯ ಉತ್ತರಾಖಂಡ್ ಸೀಮಿತ ಓವರ್ ತಂಡದ ನಾಯಕನೂ ಹೌದು.
ಆಕಾಶ್ ಮೊದಲು ಐಪಿಎಲ್ ಕ್ಯಾಂಪ್ ಸೇರಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂಲಕ. 2021ರಲ್ಲಿ ಆರ್ ಸಿಬಿ ನೆಟ್ ಬೌಲರ್ ಆಗಿದ್ದ ಆಕಾಶ್ ಮಧ್ವಾಲ್ ರನ್ನು 2022ರ ಹರಾಜಿನಲ್ಲಿ ಯಾರೂ ಖರೀದಿಸಿರಲಿಲ್ಲ. ಬಳಿಕ ಸೂರ್ಯಕುಮಾರ್ ಬದಲಿಯಾಗಿ ಮುಂಬೈ ಸೇರಿದ್ದರು. 2023ರ ಹರಾಜಿನಲ್ಲಿ ಕೇವಲ 20 ಲಕ್ಷ ರೂ ಗೆ ಮುಂಬೈ ಇಂಡಿಯನ್ಸ್ ತಂಡವು ಆಕಾಶ್ ರನ್ನು ಖರೀದಿಸಿತ್ತು.
ಪಂತ್ ಗೆ ಇದೆ ನಂಟು: ಭಾರತದ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ಆಕಾಶ್ ಗೆ ಬಾಲ್ಯದ ನಂಟಿದೆ. ಇಬ್ಬರೂ ಕ್ರಿಕೆಟಿಗರು ಉತ್ತರಾಖಂಡದಿಂದ ಬಂದವರು. ಬಾಲ್ಯದ ದಿನಗಳಲ್ಲಿ ಒಂದೇ ಪ್ರದೇಶದಲ್ಲಿ ಬೆಳೆದಿದ್ದರು. ಪಂತ್ ದೆಹಲಿಗೆ ತೆರಳುವ ಮೊದಲು ತರಬೇತಿ ನೀಡಿದ ಅವತಾರ್ ಸಿಂಗ್ ಅವರ ಅಡಿಯಲ್ಲೇ ಮಧ್ವಾಲ್ ಕೂಡಾ ತರಬೇತಿ ಪಡೆದರು.