ಚಂಡೀಗಢ : ಒಂದು ಕಾಲದಲ್ಲಿ ಚಿಂದಿ ಹೆಕ್ಕಿ ಜೀವನ ಸಾಗಿಸುತ್ತಿದ್ದ 46ರ ಹರೆಯದ ಬಿಜೆಪಿ ನಾಯಕ ರಾಜೇಶ್ ಕಾಲಿಯಾ ಅವರು ಚಂಡೀಗಢದ ಹೊಸ ಮೇಯರ್ ಆಗಿದ್ದಾರೆ.
ಮೇಯರ್ ಚುನಾವಣೆಯಲ್ಲಿ 27 ಮತಗಳ ಪೈಕಿ ಕಾಲಿಯಾ ಅವರಿಗೆ 16 ಮತಗಳು ಸಿಕ್ಕಿವೆ. ಅಂತೆಯೇ ಅವರು ಚಂಡೀಗಢದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಲಿಯಾ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ಕುಂದನ್ ಲಾಲ್ ಸ್ವೀಪರ್ ಆಗಿ ದುಡಿದವರು; ಇವರ ಓರ್ವ ಸಹೋದರ ಈಗಲೂ ಸ್ವೀಪರ್ ಆಗಿ ದುಡಿಯುತ್ತಿದ್ದಾರೆ.
ಕಾಲಿಯಾ ಅವರು ತಮ್ಮ ಹೋರಾಟದ ಬದುಕನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. “ನಾನು ಶಾಲೆ ಮುಗಿದ ಬಳಿಕ ನನ್ನ ಸಹೋದರನ ಜತೆಗೆ ಕಸದ ಗುಡ್ಡೆ ಏರಿ ಅಲ್ಲಿರುವ ವಸ್ತುಗಳನ್ನು ಹೆಕ್ಕಿ ಅದನ್ನು ಗುಜರಿಗೆ ಮಾರಿ ನಾವು ಬದುಕು ಸಾಗಿಸುತ್ತಿದ್ದೆವು; ಮನೆಗೆ ಆರ್ಥಿಕವಾಗಿ ನೆರವಾಗುತ್ತಿದ್ದೆವು” ಎಂದು ಅವರು ಹೇಳುತ್ತಾರೆ.
“ಬದುಕಿನಲ್ಲಿ ನಾನು ಅನೇಕ ಬಗೆಯ ಸವಾಲುಗಳನ್ನು ಎದುರಿಸಿದ್ದೇನೆ; ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದೇನೆ. ಹಾಗಾಗಿ ಜೀವನದಲ್ಲಿ ಎಂತಹ ಸವಾಲು ಎದುರಾದರೂ ಅದನ್ನು ನಿಭಾಯಿಸುವ ಧೈರ್ಯ, ಉತ್ಸಾಹ ನನಗಿದೆ” ಎನ್ನುವ ಕಾಲಿಯಾ ಮೂಲತಃ ಹರಿಯಾಣದ ಸೋನಿಪತ್ ಜಿಲ್ಲೆಯ ಅಹುಲಾನಾ ಗ್ರಾಮದವರು. 1977 ರಲ್ಲಿ ಇವರ ಕುಟಂಬ ಚಂಡೀಗಢಕ್ಕೆ ಸ್ಥಳಾಂತರಗೊಂಡಿತ್ತು. ಆಗ ಕಾಲಿಯಾ ಸ್ವತಃ ಗುಜರಿ ಅಂಗಡಿಯೊಂದನ್ನು ತೆರೆದರು; ಅವರ ಸಹೋದರ ಆಗಲೂ ಗುಜರಿ ಹೆಕ್ಕುವ ಕೆಲಸ ಮುಂದುವರಿಸಿದ್ದರು.
ಜೀವನದಲ್ಲಿ ಬೆಳೆಯುತ್ತಿದ್ದಂತೆಯೇ ನಾನು ಎಂದೂ ಚಂಡೀಗಢದ ಮೇಯರ್ ಆದೇನು ಎಂಬ ಕನಸನ್ನು ಕಂಡವನಲ್ಲ. 1984 ರಲ್ಲಿ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರಿಕೊಂಡೆ. ನನ್ನ ನಂಬಿಕೆ ಏನೆಂದರೆ ಬಿಜೆಪಿ ಮಾತ್ರವೇ ಒಬ್ಬ ಚಾಯ್ ವಾಲಾ ನನ್ನು ಈ ದೇಶದ ಮಾಡಬಲ್ಲುದು ಮತ್ತು ಒಬ್ಬ ಗುಜರಿ ಹೆಕ್ಕುವವನನ್ನು ಮೇಯರ್ ಮಾಡಬಲ್ಲುದು ಎಂದು ಕಾಲಿಆ ಹೇಳುತ್ತಾರೆ.